ಮೈಸೂರು: ಸೆ.1ರಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವಕ್ಕಾಗಿ ಮೈಸೂರಿಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ನಡುವಲ್ಲಿ ಜಗದ್ವಿಖ್ಯಾತ ಮೈಸೂರು ಅರಮನೆಗೂ ಭೇಟಿ ನೀಡಿ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ವಿನಂತಿ ಮಾಡಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಇದೀಗ ರಾಜಮಾತೆಯ ಆಹ್ವಾನ ಸ್ವೀಕರಿಸಿರುವ ರಾಷ್ಟ್ರಪತಿಗಳು ಮೈಸೂರು ಅರಮನೆಗೆ ಭೇಟಿ ನೀಡಲಿದ್ದಾರೆ.
ಈ ಭೇಟಿಯ ಅಂಗವಾಗಿ ಸೆ.1ರಂದು ಮತ್ತು ಸೆ. 2 ರ ಮಧ್ಯಾಹ್ನದ ವರೆಗೂ ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ರಾಷ್ಟ್ರಪತಿಗಳ ಭೇಟಿಯ ಅಂಗವಾಗಿ ಕೈಗೊಳ್ಳಬೇಕಿರುವ ಭದ್ರತೆ ಕಾರಣದಿಂದ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಈ ಸಂಬಂಧ ಡೆಪ್ಯುಟಿ ಕಮೀಷನರ್ ಅವರು ಆದೇಶ ಹೊರಡಿಸಿದ್ದಾರೆ.
ರಾಷ್ಟ್ರಪತಿಗಳು ದಸರಾ ಆರಂಭದ ಹೊತ್ತಿನಲ್ಲಿ ಅರಮನೆಗೆ ಭೇಟಿ ನೀಡುತ್ತಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇದರ ಅಂಗವಾಗಿ ಈಗಾಗಲೇ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದು, ಅರಮನೆ ಮತ್ತು ಅದರ ಸುತ್ತಮುತ್ತಲೂ ಬಿಗಿ ಬಂದೋಬಸ್ತ್ ಮತ್ತು ರಸ್ತೆಗಳ ರಿಪೇರಿ ಕೆಲಸಗಳು ಆರಂಭಗೊಂಡಿವೆ.


