ಮಾನ್ಯರೇ,
ನಾಡಹಬ್ಬ ದಸರಾದಲ್ಲಿ ಪ್ರತಿ ಬಾರಿಯೂ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು ಎನ್ನುವ ಆಗ್ರಹ ಪ್ರತಿ ವರ್ಷವೂ ಕೇಳಿಬರುತ್ತಲೇ ಇರುತ್ತದೆ. ಹೀಗೆ ನಮ್ಮ ನೆಲದ ಹಬ್ಬದಲ್ಲಿ ನಮ್ಮವರಿಗೆ ಅವಕಾಶ ಕೊಡಿ ಎಂದು ಬೇಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ನಾವೆಲ್ಲರೂ ತಲೆ ತಗ್ಗಿಸಬೇಕು. ಹೊರ ರಾಜ್ಯದ ಕಲಾವಿದರನ್ನು ಕರೆಸಿ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಿ ಸತ್ಕಾರ ಮಾಡುವುದಕ್ಕೆ ಮಿತಿ ಇದ್ದರೆ ಚೆಂದ. ಹಬ್ಬ ವೈವಿಧ್ಯಮಯವಾಗಿ ಮತ್ತು ಎಲ್ಲರನ್ನೂ ಒಳಗೊಂಡಂತೆ ಇರಬೇಕು ಎನ್ನುವುದು ಸತ್ಯವಾದರೂ ಅದಕ್ಕೆ ಒಂದು ಸೀಮಿತ ರೇಖೆಯನ್ನು ಹಾಕಿಕೊಳ್ಳಬೇಕು. ನಮ್ಮವರ ಪ್ರತಿಭೆಗಳಿಗೆ ದಸರಾ ವೇದಿಕೆಗಳು ಅವಕಾಶ ಮಾಡಿಕೊಡಬೇಕು. ಅದರಲ್ಲೂ ಒಂದು ಪಟ್ಟು ಹೆಚ್ಚಿನ ಅವಕಾಶ ಗ್ರಾಮೀಣ ಭಾಗದ ಕಲಾವಿದರಿಗೆ ಸಿಗಬೇಕು. ಯಾವುದೋ ಊರಿನಲ್ಲಿ ಸೋಬಾನೆ ಪದ, ಜನಪದ ಗೀತೆಗಳನ್ನು ಹಾಡುವ ಅಜ್ಜಿಯಂದಿರಿಗೆ, ಹೊಸ ಮುಖಗಳಿಗೆ ಈ ಬಾರಿಯ ದಸರಾದಲ್ಲಿ ಹೆಚ್ಚಿನ ಅವಕಾಶ ದೊರೆಯಬೇಕು. ಇದಕ್ಕೆ ಸಂಘ-ಸಂಸ್ಥೆಗಳು, ಮಾಧ್ಯಮಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು. ಇದರ ಜೊತೆಗೆ ಕಾಲೇಜು ವಿದ್ಯಾರ್ಥಿಗಳು, ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಕೆಲಸ ಆಗಬೇಕು. ಆಗ ಅವರಲ್ಲಿಯೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ದಸರಾ ಅವರ ಬಾಳಿಗೆ ಬೆಳಕು ಆಗುತ್ತದೆ.
ಗುಣವತಿ ಕೆ.ಎನ್., ಎಚ್.ಡಿ.ಕೋಟೆ


