ನಂಜನಗೂಡು: ತಾಲೂಕಿನ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ವಿಶ್ವ ದರ್ಜೆಗೆ ಏರಿಸುವ ಉದ್ದೇಶದಿಂದ ಸಮಗ್ರ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ್ ಪರಿಶೀಲನೆ ಮತ್ತು ಸಭೆ ಹಮ್ಮಿಕೊಂಡಿದ್ದರು.
೧೯೨೭ರಲ್ಲಿ ಮಹಾತ್ಮ ಗಾಂಧೀಜಿಯವರ ಪ್ರೇರಣೆಯಿಂದ ಬದನವಾಳಿನಲ್ಲಿ ಖಾದಿ ಕೇಂದ್ರ ಸ್ಥಾಪನೆಯಾಗಿದ್ದು, ಇಂದಿನ ಆಧುನಿಕತೆಯ ಭರಾಟೆಯಲ್ಲಿ ನೈಪಥ್ಯಕ್ಕೆ ಸರಿದಿದ್ದ ಕೇಂದ್ರಕ್ಕೆ ಮರು ಜೀವ ನೀಡಲು ಯೋಜನೆಯನ್ನು ರೂಪಿಸಲಾಗಿದೆ. ಈ ಸಂಬಂಧ ಡಿ.ಆರ್. ಪಾಟೀಲ್ ಅವರ ಭೇಟಿ ಮತ್ತು ಸಭೆ ಮಹತ್ವ ಪಡೆದುಕೊಂಡಿತ್ತು.

ಏಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಬದನವಾಳಿಗೆ ಭೇಟಿ ಕೊಟ್ಟ ಹಿನ್ನಲ್ಲೆಯಲ್ಲಿ ಶತಮಾನೋತ್ಸವ ಭವನ ಮತ್ತು ಗ್ರಾಮೀಣ ಅಭಿವೃದ್ಧಿ ಕೇಂದ್ರವನ್ನು ಅಭಿವೃದ್ಧಿ ಪಡಿಸಲು ಯೋಜನೆಯನ್ನು ರೂಪಿಸಲಾಗಿದ್ದು, ಇದಕ್ಕಾಗಿ ಸರಕಾರ ೪೦ ಕೋಟಿ ರೂ.ಗಳನ್ನು ಮಂಜೂರು ಮಾಡಲು ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಿದೆ .
– ದರ್ಶನ್ ಧ್ರುವನಾರಾಯಣ್, ಶಾಸಕರು.
ಗ್ರಾಮ ವಾಸ್ತವ್ಯ:
ಬದನವಾಳು ಗ್ರಾಮದ ಎಲ್ಲ ಜಾತಿ ಜನಾಂಗದ ಬೀದಿಗಳನ್ನು ಪರಿಶೀಲಿಸಿದ ಅವರು, ಜಾತ್ಯಾತಿತವಾಗಿ ಎಲ್ಲರಿಗೂ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಮಹಿಳೆಯರ ಸಭೆ ನಡೆಸಿ ಗ್ರಾಮ ಸ್ವಚ್ಛತೆ ಮತ್ತು ಸರಕಾರದ ಸವಲತ್ತುಗಳನ್ನು ಬಳಸಿಕೊಂಡು ಉಪ ಕಸುಬುಗಳನ್ನು ಮಾಡುವಂತೆ ಸಲಹೆ ನೀಡಿದರು. ನಂತರ ಗ್ರಾ.ಪಂ ಸದಸ್ಯರಾದ ಮಂಜುನಾಥ್ ಅವರ ಮನೆಯಲ್ಲಿ ಲಘು ಉಪಹಾರ ಸೇವಿಸಿ, ಬದನವಾಳು ಗ್ರಾಮದ
ಉಮಾಶಂಕರ್ ರವರ ಮನೆಯಲ್ಲಿ ಊಟ ಮುಗಿಸಿ, ವಿಶ್ರಾಂತಿ ಪಡೆದರು.
ಬೆಳಿಗ್ಗೆ ಶಾಲೆ ಆವರಣದಲ್ಲಿ ವಿವಿಧ ಮಹಿಳಾ ಸಂಘಗಳ ಕುರಿತು ಚರ್ಚೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದರು. ನಂತರ ಹೆಮ್ಮರಗಾಲ, ಕಸುವಿನಹಳ್ಳಿ, ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದರು.
ನಾರಾಯಣಸ್ವಾಮಿ ಪ್ರಸನ್ನ ಶಿವರಾಜು ಇ.ಓ. ರಾಜೇಶ್ ಗ್ರಾಮ ಪಂಚಾಯತಿ ಅಧ್ಯಕ್ಷ ದೊರೆಸ್ವಾಮಿ ಅಭಿವೃದ್ಧಿ ಅಧಿಕಾರಿ ಕರಿಯಪ್ಪ ಖಾದಿ ಗ್ರಾಮೋದ್ಯೋಗಿ ಅಧಿಕಾರಿಗಳು,ತಾಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮ ಪಂಚಾಯತಿ ಸದಸ್ಯರುಗಳು. ಮಹಿಳಾಸಂಘ ಸಂಸ್ಥೆಯರು ಗ್ರಾಮಸ್ಥರು ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ ಮಹೇಶ್ ಶಂಕರ್ ಶಿವರಾಜ್ ನಾರಾಯಣಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


