ಚಾಮರಾಜನಗರ: ವಿಶ್ವ ರೈತ ಚೇತನ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ 90ನೇ ಜನ್ಮದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಸ್ವಾಭಿಮಾನದೆಡೆಗೆ ಹಸಿರು ಸೇನಾನಿಗಳ ಕಾಲ್ನಡಿಗೆ ಮೆರವಣಿಗೆ ನಡೆಯಿತು. ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ಮತ್ತು ಚುಕ್ಕಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿತ್ತು.
ನಗರದ ಎಪಿಎಂಸಿ ಮುಂಭಾಗ ಜಮಾಯಿಸಿದ ರೈತ ಮುಖಂಡರು ಅಲ್ಲಿಂದ ಗುಂಡ್ಲುಪೇಟೆ ಸರ್ಕಲ್, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಪಚ್ಚಪ್ಪ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಸಮಾವೇಶಗೊಂಡಿತು.
ಪ್ರತಿ ಎರಡು ಗಂಟೆಗೆ ಮೂವರು ರೈತರು ಅತ್ಯಹತ್ಯೆಗೆ ಶರಣಾಗುತ್ತಿದ್ದಾರೆ. ಅನ್ನದಾತನ ಆತ್ಮಹತ್ಯೆ ನಿಲ್ಲಬೇಕು. ಅಭಿವೃದ್ಧಿ ನೆಪದಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ರೈತರ ಅನುಮತಿಯನ್ನೇ ಪಡೆಯದೆ ಸ್ವಾಧೀನಪಡಿಸಿಕೊಳ್ಳಲು ನೋಟಿಸ್ ನೀಡುತ್ತಿರುವುದನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆಯನ್ನು ಎಲ್ಲಾ ಕೃಷಿ ಉತ್ಪನ್ನಗಳಿಗೂ ನಿಗದಿ ಮಾಡುವಂತೆ ಕಾನೂನು ಮಾಡಬೇಕು. ವಿಬಿಜಿ ರಾಮ್ ಜಿ ಯೋಜನೆಯನ್ನು ಕೈಬಿಟ್ಟು, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಪುನರ್ ಸ್ಥಾಪಿಸಿ ಕೃಷಿಗೆ ಪೂರಕವಾಗುವಂತೆ ತಿದ್ದುಪಡಿ ತರಬೇಕು ಮತ್ತು ಕನಿಷ್ಠ 600 ರೂ ನಿಗದಿಪಡಿಸಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಹೊರತರುತ್ತಿರುವ ಸ್ಯಾರ್ಟ್ ಮೀಟರ್ ಯೋಜನೆ, ವಿದ್ಯುಚ್ಛಕ್ತಿ ಮಸೂದೆ 2025 ಇತ್ಯಾದಿ ಒಕ್ಕಲುತನದ ಖರ್ಚನ್ನು ದುಬಾಲಗೊಳಿಸುವ ಯೋಜನೆಗಳಾಗಿವೆ. ಈ ಮಸೂದೆಗಳನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು, ಜೀಜ ಮಸೂದೆ 2025 ರೈತವಿರೋಧಿಯಾಗಿದ್ದು, ಕೇಂದ್ರ ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕೃಷಿ ವಲಯ ನಷ್ಟದಲ್ಲಿ ಮುಳುಗಿರುವ ಕಾರಣ ಕೃಷಿಯನ್ನು ಸಿಬಿಲ್ ನಿಂದ ಹೊರಗಿಡಬೇಕು. ರೈತರು ಪಡೆಯುತ್ತಿರುವ ಸಾಲ ದೇಶದ ಆಹಾರದ ಸಾರ್ವಭೌಮತೆ ರಕ್ಷಿಸುವುದಕ್ಕಾಗಿ ಎಂಬ ಸತ್ಯವನ್ನು ಅರಿತು ಎಲ್ಲ ರೈತರಿಗೆ ಸಾಲ ಸುಲಭವಾಗಿ ಸಿಗುವಂತೆ ಸಾಲ ನೀತಿಯಲ್ಲಿ ತಿದ್ದುಪಡಿಗಳನ್ನು ತರಬೇಕು. ಭಾರತ ದೇಶವು ಅಮೆರಿಕಾ, ಯುರೋಪಿಯನ್ ಒಕ್ಕೂಟ ಸೇರಿದಂತೆ ಯಾವ ದೇಶಗಳ ಜೊತೆಯೂ ಕೃಷಿಗೆ ಸಂಬಂಧಿಸಿದ ಮುಕ್ತ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಬಾರದು ಎಂದು ಹೇಳಿದರು.
ಜಿಲ್ಲೆಯಲ್ಲಿರುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ದುರಸ್ತಿಗೊಳಿಸಬೇಕು. ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಕೆಎಸ್‍ಆರ್‍ಟಿಸಿ ಬಸ್ ಸೌಲಭ್ಯ ಒದಗಿಸಬೇಕು. ಅರಣ್ಯ ಇಲಾಖೆಯವರು ಗೋಮಾಳ ಮತ್ತು ದೊಡ್ಡ ದೊಡ್ಡ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ಕಾಲ್ನಡಿಗೆ ಮೆರವಣಿಗೆಯಲ್ಲಿ ರೈತ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು.

