ನಂಜನಗೂಡು, ಜುಲೈ 1: ತಾಲೂಕಿನ ದೇವನೂರು ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠದಲ್ಲಿ ಮಹಾತ್ಮ ಶ್ರೀ ಗುರುಮಲ್ಲೇಶ್ವರರ 127ನೇ ಪುಣ್ಯಾರಾಧನೆ ಅಂಗವಾಗಿ ನಿರ್ಮಿಸಲಾದ ಬಸವ ಮಹಾದ್ವಾರ ಹಾಗೂ ಕಲ್ಯಾಣಿಯ ಲೋಕಾರ್ಪಣೆ ಜೊತೆಗೆ ಶ್ರೀ ಗುರುಮಲ್ಲೇಶ್ವರರ ರಥೋತ್ಸವ ಮತ್ತು ತೆಪ್ಪೋತ್ಸವಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ಕಾರ್ಯಕ್ರಮಗಳು ಬುಧವಾರ ಜರುಗಿದವು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ದರ್ಶನ್ ಧ್ರುವನಾರಾಯಣ್ ಭಾಗವಹಿಸಿ, ದೇವನೂರು ಮಠದ ಪೀಠಾಧಿಪತಿ ಶ್ರೀ ಮಹಾಂತ ಸ್ವಾಮೀಜಿ, ಸೋಮಹಳ್ಳಿ ಮಠದ ಸಿದ್ದಮಲ್ಲ ಸ್ವಾಮೀಜಿ ಹಾಗೂ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಬಸವ ಮಹಾದ್ವಾರ ಮತ್ತು ಕಲ್ಯಾಣಿಯನ್ನು ಉದ್ಘಾಟಿಸಲಾಯಿತು .

ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕೊಟ್ಟ ಮಾತಿನಂತೆ ಯಾವುದೇ ಮರುಮಾತಿಲ್ಲದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅಧಿಕಾರ ಶಾಶ್ವತವಲ್ಲ, ಆದರೆ ಮಾತು ಉಳಿಸಿಕೊಳ್ಳುವುದು ಮುಖ್ಯ,” ಎಂದು ಹೇಳಿದರು.
ತಾವು ಬಸವಣ್ಣನವರ ಅನುಯಾಯಿಯಾಗಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸುವಂತೆ ಆದೇಶಿಸಿದ್ದಾಗಿ ತಿಳಿಸಿದರು.
ಸುಮಾರು 850 ವರ್ಷಗಳ ಹಿಂದೆ ಬಸವಾದಿ ಶರಣರು ವಚನಗಳ ಮೂಲಕ ಸಮಾಜಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶವನ್ನು ನೀಡಿದ್ದರು. ಆದರೆ ಅವರು ಕಂಡ ಸಮಾನತೆಯ ಕನಸು ಇನ್ನೂ ಸಂಪೂರ್ಣವಾಗಿ ನನಸಾಗಿಲ್ಲ. ಸಮಾಜದಲ್ಲಿ ಯಾವುದೇ ತಾರತಮ್ಯ ಇರಬಾರದು ಎಂಬುದು ಬಸವಣ್ಣನವರ ಆಶಯವಾಗಿತ್ತು ಎಂದು ಹೇಳಿದರು.
ಶ್ರೀ ಗುರುಮಲ್ಲೇಶ್ವರರು ಬಸವಣ್ಣನವರ ತತ್ವಗಳಿಂದ ಪ್ರೇರಿತರಾಗಿ “ಕಾಯಕವೇ ಕೈಲಾಸ” ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಶ್ರಮದ ಮಹತ್ವವನ್ನು ಸಾರಿದರು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನಿಂದ ದೇವನೂರಿಗೆ ಆಗಮಿಸಿ ಕಂತೆ ಭಿಕ್ಷೆಯ ಮೂಲಕ ದಾಸೋಹ ಆರಂಭಿಸಿದ ಅವರು ಸ್ಥಾಪಿಸಿದ ಮಠ ಇಂದು ರಾಜ್ಯದ ಪ್ರಮುಖ ಧಾರ್ಮಿಕ ಮತ್ತು ಸಮಾಜಸೇವಾ ಕೇಂದ್ರವಾಗಿ ಬೆಳೆದಿರುವುದು ಅವರ ತ್ಯಾಗ, ಸೇವೆ ಮತ್ತು ಸಮಾಜಮುಖಿ ಚಿಂತನೆಯ ಪ್ರತೀಕವಾಗಿದೆ ಎಂದು ಶ್ಲಾಘಿಸಿದರು.
ಬಸವಣ್ಣನವರ ವಿಚಾರಧಾರೆಯಿಂದ ಪ್ರೇರಿತರಾಗಿ ಮೌಢ್ಯ ನಿಷೇಧಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಇತಿಹಾಸವನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಡಾ. ಬಿ.ಆರ್. ಅಂಬೇಡ್ಕರ್ ಹೇಳಿದಂತೆ, ಹಿಂದೆ ಸಮಾಜದಲ್ಲಿ ಏನಾಗಿತ್ತು ಹಾಗೂ ಸಂವಿಧಾನ ಜಾರಿಯಾದ ಬಳಿಕ ಸಮಾನ ಅವಕಾಶಗಳು ಹೇಗೆ ದೊರಕಿವೆ ಎಂಬ ಅರಿವು ಎಲ್ಲರಿಗೂ ಇರಬೇಕು. ಆದ್ದರಿಂದ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು ಎಂದು ಕರೆ ನೀಡಿದರು.
ವೈಜ್ಞಾನಿಕ ಹಾಗೂ ವೈಚಾರಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಬಸವಾದಿ ಶರಣರು ಮೌಢ್ಯವನ್ನು ತಿರಸ್ಕರಿಸಿ ವಿಚಾರಶೀಲ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಅವರ ಆದರ್ಶಗಳನ್ನು ಪಾಲಿಸಿದಾಗ ಮಾತ್ರ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳು ಬಲಗೊಳ್ಳುತ್ತವೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ದೇವನೂರು ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠವು ತನ್ನದೇ ಆದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ. ಇಂತಹ ಪುಣ್ಯಭೂಮಿ ಇರುವ ನಂಜನಗೂಡು ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ತಮ್ಮ ಭಾಗ್ಯ ಎಂದರು.
ಶ್ರೀ ಮಠವು ಬಸವಣ್ಣನವರ ಆಶಯದಂತೆ ಕಾಯಕ, ದಾಸೋಹ ಹಾಗೂ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ಸಾರುತ್ತಾ, ರಾಜ್ಯದಾದ್ಯಂತ ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾಗಿ ಬೆಳೆದಿದೆ. ಅನ್ನದಾಸೋಹದ ಜೊತೆಗೆ ಶಿಕ್ಷಣದ ದಾಸೋಹವನ್ನು ನೀಡುವ ಮೂಲಕ ಸಮಾಜ ನಿರ್ಮಾಣದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ದೇವನೂರು ಏತ ನೀರಾವರಿ ಯೋಜನೆಗೆ ರೂಪುರೇಷೆ ರೂಪಿಸಿ ಯೋಜನೆಗೆ ಚಾಲನೆ ನೀಡುವಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆ ಈ ಭಾಗದ ರೈತರು ಹಾಗೂ ಜನರ ಬದುಕಿಗೆ ಹೊಸ ಆಶಾಕಿರಣವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಡ ಅಧ್ಯಕ್ಷ ಮರಿಸ್ವಾಮಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಬಸವರಾಜ್, ಇಂದನ್ ಬಾಬು, ಮಹದೇವಪ್ಪ, ಶಿವಪ್ಪ ದೇವರು, ಹರಗುರು-ಚರಮೂರ್ತಿಗಳು, ವಿವಿಧ ಗಣ್ಯರು, ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.


