Online News in ಕನ್ನಡ

ಮೈಸೂರಿನಲ್ಲಿ ಎರಡು ದಿನ ಅವರೆಕಾಯಿಯ ಸೋನೆ ಸೊಗಡು ಜೋರು…!

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡು ದಿನಗಳ ಅವರೆಕಾಯಿ ಮೇಳೆ ಆರಂಭಗೊಂಡಿದ್ದು ಮೊದಲ ದಿನ ಸಾರ್ವಜನಿಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಯೋಜಿಸಿರುವ ಮೇಳಾವನ್ನು ಜೆಎಸ್‌ಎಸ್‌ ಆರ್ಯುವೇದ ವೈದ್ಯಕೀಯ ಕಾಲೇಜಿನ ಉಪ ಪ್ರಾಚಾರ್ಯ ಡಾ. ಶಿವಪ್ರಸಾದ್‌ ಹುಡೇದ್‌ ಉದ್ಘಾಟಿಸಿರು. ಈ ಮೇಳವನ್ನು ಸಹಜ ಸಮೃದ್ಧ ಹಾಗೂ ಸಹಜ ಸೀಡ್ಸ್‌ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಎರಡು ದಿನಗಳ ಕಾಲ ನಡೆಯುವ ಮೇಳಾದಲ್ಲಿ ಅವರೆಕಾಯಿ, ತೊಗರಿಕಾಯಿ, ಹಸಿ ಕಡಲೆಕಾಯಿ, ಸುವರ್ಣಗೆಡ್ಡೆ, ಕೆಂಪು ಮುಸುಕಿನ ಜೋಳ , ಬಳ್ಳಿ ಆಲೂಗೆಡ್ಡೆ ಮೊದಲಾದ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಜಿಲ್ಲೆಯಹೆಚ್.ಡಿ.ಕೋಟೆ, ಪಿರಿಯಾಪಟ್ಟಣ ತಾಲೂಕು, ತುಮಕೂರು, ಧಾರವಾಡ, ಬೆಂಗಳೂರು ಜಿಲ್ಲೆಗಳಿಂದ ಕರಕುಶಲ ವಸ್ತುಗಳ ಪ್ರದರ್ಶನವಿದೆ.

ಅವರೆಕಾಳು ಉಪ್ಪಿಟ್ಟು , ಅವರೆಕಾಳು ದೋಸೆ, ಮುದ್ದೆ – ಹಿಚುಕು ಅವರೆಕಾಳು ಸಾರು, ಅವರೆಕಾಳು ಬಾತ್, ಅವರೆಕಾಳಿನ ಜಾಮೂನು ಬಾಯಿ ಚಪ್ಪರಿಸಲು ಸಿಗುತ್ತಿವೆ.

ಉತ್ತರ ಕರ್ನಾಟಕದ ಜೋಳದ ರೊಟ್ಟಿ – ಕಾಳು ಪಲ್ಯದ ಅಡುಗೆಗಳನ್ನು ಕೂಡ ಮೇಳದಲ್ಲಿ ಸವಿಯಬಹುದು.

ಅಲ್ಲದೆ, ಈ ಮೇಳದಲ್ಲಿ ದೇವಧಾನ್ಯ ರೈತ ಉತ್ಪಾದಕರ ಕಂಪನಿಯು ಸಿರಿಧಾನ್ಯ, ಜವಾರಿ ಬೇಳೆ ಕಾಳುಗಳು ಹಾಗೂ ಕೆಂಪಕ್ಕಿ, ಉದುರು ಸಾಳಿ ಮೊದಲಾದ ದೇಸಿ ಅಕ್ಕಿಗಳನ್ನು ಕೂಡ 2 ದಿನ ಮಾರಾಟಕ್ಕೆ ತಂದಿದೆ. ಪ್ರದರ್ಶನಕ್ಕೆ ಬಂದಿರುವ ವಿವಿಧ ಗಾತ್ರ ಮತ್ತು ಆಕಾರದ ವೈವಿಧ್ಯಮಯ ಸೋರೆಗಳು ನೋಡುಗರನ್ನು ಆಕರ್ಷಿಸುತ್ತಿವೆ. ಕ್ರಿಸ್‌ಮಸ್‌ ಹಬ್ಬಕ್ಕೆ ಆಕರ್ಷಕ ಬೊಂಬೆಗಳು ಹಾಗೂ ವೈವಿಧ್ಯಮಯ ಸೋರೆ ಕಲಾಕೃತಿಗಳನ್ನು ಮಾರಾಟಮಾಡಲಾಗುತ್ತಿದೆ.
ಧಾರವಾಡದ ಮಹಿಳಾ ಸ್ವಸಹಾಯ ಸಂಘ ವತಿಯಿಂದ ಬ್ಯಾಡಗಿ ಮೆಣಸಿನ ಕಾಯಿಯ ಕಾರದಪುಡಿ , ಮಸಾಲ ಪುಡಿ ಮಾರಾಟ, ನಿರ್ಲಕ್ಷಿತ ಹಣ್ಣಿನ ಬೇಲದ ಜ್ಯೂಸ್, ಹುಣಸೇ ಜ್ಯೂಸ್ ಲಭ್ಯವಿದೆ. ಚಳಿಗಾಲದ ತರಕಾರಿ ಬೀಜ, ಬಳ್ಳಿ ಆಲೂಗಡ್ಡೆ, ಪರ್ಪಲ್ ಯಾಮ್, ಬಿಳಿ ಕಾಚಲ್ , ಬಿತ್ತನೆಯ ಬೇಸಿಗೆ ಭತ್ತ ಮತ್ತು ರಾಗಿಯನ್ನು ಮಾರಾಟಕ್ಕೆ ಇಡಲಾಗಿದೆ. ಹೆಚ್.ಡಿ ಕೋಟೆಯ ನಾಡ ತೊಗರಿ, ಅವರೆ, ಗೆಡ್ಡೆ ಗೆಣಸು, ರಾಗಿ ಮತ್ತು ದಿನ ಬಳಕೆಯ ಅಕ್ಕಿಯನ್ನು ಮೇಳದಲ್ಲಿ ಇಡಲಾಗಿದೆ. ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳು, ಮೌಲ್ಯವರ್ಧಿತ ಉತ್ಪನ್ನಗಳು, ಶೃಂಗಾರ ವರ್ಧಕಗಳು, ಕೋತಿ ಓಡಿಸುವ ಬಂದೂಕು, ಬಿದಿರಿನ ಉತ್ಪನ್ನಗಳು ಮತ್ತು ದೇಸಿ ಅಕ್ಕಿಗಳು ಇವೆಲ್ಲವೂ ಮೇಳದಲ್ಲಿ ಖರೀದಿಗೆ ಸಿಗಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

Call Now Button