ಮೈಸೂರು: ದಸರಾ ವಸ್ತು ಪ್ರದರ್ಶನದ ಮಹಿಳಾ ಮತ್ತು ಮಕ್ಕಳ ಉಪ ಸಮಿತಿ ವತಿಯಿಂದ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ 5 ರಿಂದ 10 ವರ್ಷದೊಳಗಿನ ಹಾಗೂ 11 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ವೇಷ–ಭೂಷಣ ಸ್ಪರ್ಧಾ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಮಕ್ಕಳಲ್ಲಿನ ಸೃಜನಶೀಲತೆ, ಸಂಸ್ಕೃತಿ ಅರಿವು ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪೋಷಕರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.



ಈ ವೇಷ–ಭೂಷಣ ಸ್ಪರ್ಧೆಯಲ್ಲಿ 40 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಮ್ಮ ವಿಭಿನ್ನ ಹಾಗೂ ವಿಶಿಷ್ಟ ವೇಷಗಳಿಂದ ಎಲ್ಲರ ಗಮನ ಸೆಳೆದರು. ಮಕ್ಕಳು ರೈತ, ಸೈನಿಕ, ಮಹದೇಶ್ವರ, ದೇವಿ ಅವತಾರ, ಸಂತಾ ಕ್ಲಾಸ್, ಟಿಪ್ಪು ಸುಲ್ತಾನ್, ಸಿಂಡ್ರಲ್ಲಾ, ವಿರಾಗಸೆ, ತಾಯಿ–ಮಗು ಪೋಷಣೆ ಮಾಡುವ ದೃಶ್ಯ, ಸುಬ್ರಮಣ್ಯ, ಷಣ್ಮುಖ ಸೇರಿದಂತೆ ಹಲವು ವೇಷಗಳನ್ನು ಧರಿಸಿ ವೇದಿಕೆಯಲ್ಲಿ ಪ್ರದರ್ಶನ ನೀಡಿದರು. ಪ್ರತಿಯೊಂದು ವೇಷವೂ ಮಕ್ಕಳ ಕಲ್ಪನಾಶಕ್ತಿ, ಸಂಸ್ಕೃತಿಪ್ರಜ್ಞೆ ಮತ್ತು ಸಮಾಜದ ಬಗ್ಗೆ ಅವರ ಅರಿವನ್ನು ಪ್ರತಿಬಿಂಬಿಸಿತು.
ಕಾರ್ಯಕ್ರಮದ ವೇಳೆ ಮಕ್ಕಳ ಧೈರ್ಯ, ಮಾತಿನ ಶೈಲಿ ಹಾಗೂ ವೇದಿಕೆಯ ಮೇಲಿನ ಆತ್ಮವಿಶ್ವಾಸವನ್ನು ನೋಡಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿದ ಮಹಿಳಾ ಮತ್ತು ಮಕ್ಕಳ ಉಪಸಮಿತಿಗೆ ಕೃತಜ್ಞತೆ ಸಲ್ಲಿಸಿದರು. ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಬಾಲ್ಯದಲ್ಲೇ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರೋತ್ಸಾಹವಾಗಿ ಆಟಿಕೆ ವಸ್ತುಗಳನ್ನು ಬಹುಮಾನವಾಗಿ ನೀಡಲಾಗಿದ್ದು, ಜೊತೆಗೆ ಸಿಹಿ ವಿತರಿಸಲಾಯಿತು. ಇದರಿಂದ ಮಕ್ಕಳು ಅಪಾರ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ವಾತಾವರಣ ಹಬ್ಬದ ಸಂಭ್ರಮದಂತೆ ಕಂಗೊಳಿಸಿತು.
ಮಹಿಳಾ ಮತ್ತು ಮಕ್ಕಳ ಉಪಸಮಿತಿ ಸದಸ್ಯರು ಮಾತನಾಡಿ, ಮುಂದಿನ ದಿನಗಳಲ್ಲಿ ಕೂಡ ಮಕ್ಕಳ ಪ್ರತಿಭೆ ಅನಾವರಣಕ್ಕೆ ಇಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು. ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆದ ಈ ವೇಷ–ಭೂಷಣ ಸ್ಪರ್ಧಾ ಕಾರ್ಯಕ್ರಮವು ಮಕ್ಕಳಿಗೆ ನೆನಪಿನಲ್ಲಿ ಉಳಿಯುವ ಸಾರ್ಥಕ ಅನುಭವವಾಗಿ ಪರಿಣಮಿಸಿತು.


