ಬೆಂಗಳೂರು: ವಿಧಾನ ಪರಿಷತ್ ಗೆ ನಾಮನಿರ್ದೇಶನಗೊಂಡ ನೂತನ ನಾಲ್ಕು ಸದಸ್ಯರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಪತ್ರಕರ್ತ ಕೆ.ಶಿವಕುಮಾರ್, ರಮೇಶ್ ಬಾಬು, ಆರತಿ ಕೃಷ್ಣ, ಜಕ್ಕಪ್ಪನವರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ಗೆ ನಾಮನಿರ್ದೇಶನಗೊಂಡ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶುಭ ಹಾರೈಸಿದರು.
ಹಿರಿಯ ಪತ್ರಕರ್ತ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಮೈಸೂರು ಬ್ಯುರೊ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ. ಶಿವಕುಮಾರ್ ಮತ್ತು ರಮೇಶ್ ಬಾಬು, ಆರತಿ ಕೃಷ್ಣ, ಜಕ್ಕಪ್ಪನವರ್ ಅವರನ್ನು ನಾಮ ನಿರ್ದೇಶನ ಮಾಡಿ ಸರ್ಕಾರ ಆದೇಶ ಮಾಡಿತ್ತು.
ಪ್ರಮಾಣ ವಚನ ಸ್ವೀಕಾರದ ಬಳಿಕ ಮಾತನಾಡಿದ ಶಿವಕುಮಾರ್ ಅವರು, ನನ್ನ ಮೇಲೆ ನಂಬಿಕೆ ಇಟ್ಟು ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್ ಮುಖಂಡರು ಈ ಸ್ಥಾನಮಾನ ನೀಡಿದ್ದಾರೆ. ತಳ ಸಮುದಾಯದಿಂದ ಬಂದ ಪತ್ರಕರ್ತನಿಗೆ ಅವಕಾಶ ನೀಡಿರುವುದು ಇದೇ ಮೊದಲು. ನಾನು ರಾಜ್ಯದ ಎಲ್ಲಾ ಪತ್ರಕರ್ತರ ಪರವಾಗಿ, ಅವರ ದನಿಯಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.


