ಬೆಂಗಳೂರು: ಹೈಕಮಾಂಡ್ ನನ್ನನ್ನು ಕರೆಯದೆ ಏಕೆ ಹೋಗಲಿ, ಇಲ್ಲಿ ನನಗೆ ಬಜೆಟ್ ಕೆಲಸ ಇದೆ. ಕರೆದರೆ ಹೋಗ್ತೀನಿ, ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಉತ್ತರಿಸಿದರು.

ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಹೋಗಿರುವುದರಿಂದ ಸಭೆಗಳಿಗೆ ಬರಲಾಗುವುದಿಲ್ಲ ಎಂದು ಅರ್ಜಿ ಕೊಟ್ಟಿದ್ದಾರೆ. ಅಸ್ಸಾಂ ಚುನಾವಣೆ ಹಿನ್ನಲ್ಲೆಯಲ್ಲಿ ದೆಹಲಿಗೆ ತೆರಳಿರುವುದಾಗಿಯೂ ಹೇಳಿದ್ದಾರೆ. ಅದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ಉತ್ತರಿಸಿದರು. ಹೈಕಮಾಂಡ್ ಒಪ್ಪಂದವಾದಾಗ ಸಿದ್ದರಾಮಯ್ಯ ಸಹ ಇದ್ರು ಎಂದು ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅದನ್ನೆಲ್ಲ ಅವರಿಗೇ ಕೇಳಿಕೊಳ್ಳಿ ಎಂದರು.
ತಾವೂ ಸಹ ಹೈಕಮಾಂಡ್ ಭೇಟಿ ಮಾಡ್ತೀರಾ ? ಎಂದು ಮಹಿಳಾ ಪತ್ರಕರ್ತೆ ಕೇಳಿದ ಪ್ರಶ್ನೆಗೆ ʻಕರೆಯದೆ ನಾನೇಕಮ್ಮ ಹೋಗ್ಲಿ, ಇಲ್ಲೇ ಬೇಕಾದಷ್ಟು ಕೆಲಸವಿದೆ, ಬಜೆಟ್ ಮಂಡಿಸಬೇಕಿದೆ. ಕರೆದರೆ ಮಾತ್ರ ಹೋಗ್ತೀನಿʼ ಎಂದು ಕೊಂಚ ಗರಂ ಆಗಿ ಉತ್ತರ ನೀಡಿದರು.
ಧೀಮಂಗ ನಾಯಕ ಕೆಂಗಲ್ ಹನುಮಂತಯ್ಯ:
ಕರ್ನಾಟಕ ರಾಜ್ಯದ ಮೊದಲ ಚುನಾಯಿತ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ನಮ್ಮ ಸುಂದರ ವಿಧಾನಸೌಧವನ್ನು ನಿರ್ಮಿಸಿದ ಅವರು ಸಂವಿಧಾನ ರಚನಾ ಸಮಿತಿಗೆ ಅನೇಕ ಸಲಹೆಗಳನ್ನು ನೀಡಿದ್ದರು. ಅವರ ಹೋರಾಟ, ನೀಡಿದ ಕೊಡುಗೆಗಳು ನಮಗೆ ಆದರ್ಶ ಎಂದು ಸಿಎಂ ಬಣ್ಣಿಸಿದರು.

