ಬೆಂಗಳೂರು: ರಾಜ್ಯದ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ರೂ.ಗಳ ಕೃಷಿ ಸಾಲ ವಿತರಣೆಯ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ತಮ್ಮ ಬಜೆಟ್ನಲ್ಲಿ ರೈತರ ನೆರವಿನ ನಾಲ್ಕು ಆಧಾರ ಸ್ತಂಭಗಳಾದ ವೈಜ್ಞಾನಿಕ ಕೃಷಿ ಮಾರ್ಗದರ್ಶನ, ಹಣಕಾಸು ನೆರವು, ಉತ್ತಮ ಗುಣಮಟ್ಟದ ಕೃಷಿ ಪರಿಕರಗಳು ಮತ್ತು ಬೆಳೆ ನಿರ್ವಹಣೆ ಹಾಗೂ ಕೊಯ್ಲೊತ್ತರ ಸಂಗ್ರಹಣಾ ವಿಸ್ತರಣೆಗೆ ಆಧ್ಯತೆ ನೀಡಲಾಗಿದೆ ಎಂದರು.
ಕೃಷಿ ಬೆಳೆಗಳ ಮೌಲ್ಯವರ್ಧನೆ ಹಾಗೂ ಕೃಷಿ ತ್ಯಾಜ್ಯ ಮರುಬಳಕೆ ಉತ್ತೇಜಿಸಲು ಮುಂದಿನ ಮೂರು ವರ್ಷಗಳಲ್ಲಿ ʻ ಮುಖ್ಯಮಂತ್ರಿ ಕೃಷಿ ವಿಸ್ತಾರʼ ಯೋಜನೆ ಜಾರಿಗೆ 100 ಕೋಟಿ ರೂ.ಗಳನ್ನು ಮೀಸಲಿಡಲು ನಿರ್ಧರಿಸಲಾಗಿದೆ.
ರೈತ ಕರೆ ಕೇಂದ್ರವನ್ನು ಎಐ ತಂತ್ರಜ್ಞಾನದಿಂದ ಉನ್ನತೀಕರಣಗೊಳಿಸಿ ಕೃಷಿಯಲ್ಲಿ ಉತ್ಪಾದನಾ ವೆಚ್ಚ ಕಡಿತಕ್ಕೆ ʻಹೈಟೆಕ್ ಹಾರ್ವೆಸ್ರಟರ್ ಹಬ್ʼ ಯೋಜನೆಯಡಿ ಬಿತ್ತನೆ ಮತ್ತು ನಾಟಿ ಯಂತ್ರಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ.


