Online News in ಕನ್ನಡ

ಬಿಕ್ಲು ಶಿವ ಕೊಲೆ ಕೇಸ್‌; ಶಾಸಕ ಬೈರತಿ ಬಸವರಾಜುಗೆ ತುಸು ನೆಮ್ಮದಿ..!

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜ್ ಅವರ ಮೇಲೆ ಬಲವಂತದ ಕಾನೂನು ಕ್ರಮ ಜರುಗಿಸಬಾರದು ಎಂದು ಪೊಲೀಸರಿಗೆ ಹೈಕೋರ್ಟ್‌ ಸೂಚನೆ ನೀಡಿದೆ.
ಮುಂದುವರೆದ ಅರ್ಜಿ ವಿಚಾರಣೆಯನ್ನು ಕೈಗಿತ್ತಿಗೊಂಡ ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ಪೀಠವು, ಶಾಸಕರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ತನಿಖಾಧಿಕಾರಿಗಳಿಗೆ ಆದೇಶ ನೀಡಿತು. ಜೊತೆಗೆ ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಬೈರತಿ ಬಸವರಾಜು ಅವರಿಗೆ ಪೀಠ ನಿರ್ದೇಶನ ನೀಡಿದೆ.

ಬಿಕ್ಲು ಶಿವನ ತಾಯಿಯಿಂದ ದೂರು
ಆವಲಹಳ್ಳಿ ಠಾಣೆ ವ್ಯಾಪ್ತಿಯ ಜಮೀನು ವಿವಾದ ಸಂಬಂಧ ಬೈರತಿ ಬಸವರಾಜ್ ಹಾಗೂ ಜಗ್ಗನ ವಿರುದ್ಧ ಬಿಕ್ಲು ಶಿವ ದೂರು ನೀಡಿದ್ದ. ಭಾರತೀನಗರ ಠಾಣೆಯಲ್ಲಿ ಬಿಕ್ಲು ಶಿವ ಎಫ್‍ಐಆರ್ ದಾಖಲಾದ ತಕ್ಷಣ ಕೋರ್ಟ್ ಮೂಲಕ ಜಗ್ಗ ತಡೆಯಾಗ್ಞೆ ತಂದುಕೊಂಡಿದ್ದ. ಪೊಲೀಸರೂ ಜಗ್ಗನ ಮೇಲೆ ಕ್ರಮ ಕೈಗೊಳ್ಳದೇ, ಶಿವನನ್ನು ಠಾಣೆಗೆ ಕರೆದು ವಿಚಾರಣೆ ಮಾಡಿದ್ದರು. ಹೀಗಾಗಿ ಪೊಲೀಸರ ವಿರುದ್ಧವೂ ತನಿಖೆ ಮಾಡಲು ಕಮಿಷನರ್ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಕೆ.ಆರ್. ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಬಿಕ್ಲು ಶಿವ ಕೊಲೆ ಕೇಸ್‍ನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಮಧ್ಯಂತರ ಆದೇಶ ಹೊರಡಿಸಲಾಗಿದೆ. ಜುಲೈ 15, 2025ರಂದು ಬೆಂಗಳೂರಿನ ಹಲಸೂರು ಕೆರೆ ಸಮೀಪದಲ್ಲಿ ರೌಡಿಶೀಟರ್ ಬಿಕ್ಲು ಶಿವನನ್ನು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿತ್ತು. ಈ ಘಟನೆಗೆ ಸಂಬಂಧಿಸಿದಂತೆ, ಮೃತನ ತಾಯಿ ವಿಜಯಲಕ್ಷ್ಮೀ ದೂರು ದಾಖಲಿಸಿದ್ದರು.

ರಾಜಣ್ಣ ಅಮಾನತಿನ ಹಿಂದಿನ ಆಯಾಮ; ಮುಂದಿನ ಸಂದೇಶವೇನು..?

ತನಿಖೆಗೆ ಬೈರತಿ ಬಸವರಾಜು ಸಹಕಾರ
ದೂರಿನಲ್ಲಿ, ಕಿತ್ತಗನೂರು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬೈರತಿ ಬಸವರಾಜು ಸೇರಿದಂತೆ ಜಗದೀಶ್ (ಎ 1), ಕಿರಣ್ (ಎ 2), ವಿಮಲ್ (ಎ 3), ಮತ್ತು ಅನಿಲ್ (ಎ 4) ಸೇರಿ ಒಟ್ಟು 15 ಆರೋಪಿಗಳ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಈ ಆರೋಪದ ಹಿನ್ನೆಲೆಯಲ್ಲಿ, ಶಾಸಕ ಬೈರತಿ ಬಸವರಾಜು ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‍ನಲ್ಲಿ ನಡೆದ ವಿಚಾರಣೆಯಲ್ಲಿ, ಬೈರತಿ ಬಸವರಾಜು ಪರ ವಕೀಲರು, ಶಾಸಕರು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ವಾದಿಸಿದರು.
ಜುಲೈ 18ರಂದು ನೀಡಿದ್ದ ಮಧ್ಯಂತರ ಆದೇಶದಂತೆ, ಬೈರತಿ ಜುಲೈ 19ರಂದು ಭಾರತಿನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಎರಡನೇ ಬಾರಿಯೂ ಪೊಲೀಸರಿಂದ ನೋಟಿಸ್ ಪಡೆದು, ಜುಲೈ 23ರಂದು ಮತ್ತೆ ವಿಚಾರಣೆಗೆ ಒಳಗಾಗಿದ್ದರು. ಈ ಎರಡೂ ಸಂದರ್ಭಗಳಲ್ಲಿ, ಶಾಸಕರು ತನಿಖಾಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಿ, ಸಹಕಾರ ನೀಡಿದ್ದಾರೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠವು ಶಾಸಕರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ತನಿಖಾಧಿಕಾರಿಗಳಿಗೆ ಸೂಚಿಸಿದೆ.

ತನಿಖೆ ಪ್ರಗತಿಯಲ್ಲಿದೆ!
ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಜುಲೈ 24, 2025ರಂದು ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್‍ಮೆಂಟ್ (ಸಿಐಡಿ)ಗೆ ವರ್ಗಾಯಿಸಿತು. ಈಗಾಗಲೇ 11 ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ದುಬೈಗೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಜಗ್ಗನ ವಿರುದ್ಧ ಲುಕ್‍ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ತನಿಖೆಯಲ್ಲಿ, ಕಿತ್ತಗನೂರು ಜಮೀನು ವಿವಾದವೇ ಕೊಲೆಗೆ ಪ್ರಮುಖ ಕಾರಣವಾಗಿದೆ ಎಂದು ಬೆಳಕಿಗೆ ಬಂದಿದೆ. ಕೊಲೆಗೆ 1.5 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು ಎಂಬ ಮಾಹಿತಿಯೂ ದೊರೆತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Call Now Button