ಬೆಂಗಳೂರು: ನಾಡಹಬ್ಬ ದಸರಾದ ಉದ್ಘಾಟಕರಾಗಿ ಈ ಬಾರಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದ್ದು, ಖ್ಯಾತ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಈ ಬಾರಿಯ ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಸಂಬಂಧ ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದ ಹೆಮ್ಮೆಯ ಸಾಹಿತ್ಯಕಾರ್ತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಕರಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಈ ಬಾರಿಯ ದಸರಾವನ್ನು ಸೋನಿಯಾ ಗಾಂಧಿ ಅವರು ಉದ್ಘಾಟನೆ ಮಾಡುತ್ತಾರೆ ಎನ್ನುವ ವದಂತಿಗೆ ತೆರೆ ಬಿದ್ದಿದ್ದು, ಬಾನು ಮುಷ್ತಾಕ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ಬಾರಿ ದಸರಾವನ್ನು ಸಾಹಿತಿ ಹಂಪಾ ನಾಗರಾಜಯ್ಯ ಅವರು ಉದ್ಘಾಟನೆ ಮಾಡಿದ್ದರು. ಈ ಬಾರಿಯೂ ಸಾಹಿತಿಗೆ ಈ ಗೌರವ ಸಂದಿರುವುದು ವಿಶೇಷ.
ಬಾನು ಮುಷ್ತಾಕ್ ಬಗ್ಗೆ
ಬಾನು ಮುಷ್ತಾಕ್ ಕನ್ನಡದ ಪ್ರಮುಖ ಬರಹಗಾರ್ತಿ, ಸಮಾಜ ಸೇವಕಿ ಹಾಗೂ ವಕೀಲೆಯಾಗಿದ್ದಾರೆ. ದೀಪಾ ಭಸ್ತಿ ಇಂಗ್ಲಿಷ್ಗೆ ಅನುವಾದಿಸಿದ ಅವರ ಕಥಾ ಸಂಕಲನ ಹಾರ್ಟ್ ಲ್ಯಾಂಪ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸಿತವಾಗಿದ್ದು, 2025ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದಿದೆ. ಹಾಸನದಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಬಾನು ಮುಷ್ತಾಕ್, ಬಾಲ್ಯದಲ್ಲೇ ಕನ್ನಡ ಭಾಷೆಯ ಮಿಷನರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿದರು. ಕೇವಲ ಆರು ತಿಂಗಳಲ್ಲಿ ಕನ್ನಡ ಓದು-ಬರಹ ಕಲಿತು, ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡರು. ಕೆಲ ಕಾಲ ಲಂಕೇಶ್ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದರು. ಜೊತೆಗೆ ಬೆಂಗಳೂರಿನ ಆಲ್ ಇಂಡಿಯಾ ರೇಡಿಯೋದಲ್ಲೂ ಸೇವೆ ಸಲ್ಲಿಸಿದ್ದರು. ಸಾಹಿತ್ಯ ಕ್ಷೇತ್ರದಲ್ಲಿನ ತಮ್ಮ ಅದ್ಭುತ ಕೊಡುಗೆಯಿಂದ ಬಾನು ಮುಷ್ತಾಕ್ ಅವರು ಕನ್ನಡದ ಹೆಮ್ಮೆ ಹೆಚ್ಚಿಸಿರುವ ವ್ಯಕ್ತಿಯಾಗಿದ್ದಾರೆ.


