ಬೆಂಗಳೂರು: ಕೆಂಗೇರಿ ಬಳಿಯ ಅಭಿಮಾನ್ ಸ್ಟುಡಿಯೋದಲ್ಲಿ ನಟ ದಿ.ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿದ ಬಳಿಕ ವಿಷ್ಣು ಅಭಿಮಾನಿಗಳು ಕೆರಳಿದ್ದರು. ಹಿರಿಯ ನಟ ಬಾಲಣ್ಣನವರ ಮಗ ಈ ಜಾಗ ತಮಗೆ ಸೇರಬೇಕು ಎಂದು ಹೇಳಿ ಸಮಾಧಿ ಸ್ಥಳವನ್ನು ಸ್ವಚ್ಛ ಮಾಡಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಇದಾದ ಬಳಿಕ ನಟ ಕಿಚ್ಚ ಸುದೀಪ್ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರವಾಗಿ ಕೆಂಗೇರಿ ಬಳಿಯೇ ಹತ್ತು ಗುಂಟೆ ಜಾಗ ಖರೀದಿ ಮಾಡಿ ಅಲ್ಲಿ ಯಜಮಾನರ ಸ್ಮಾರಕ ಮಾಡಲು ಸಿದ್ಧತೆ ನಡೆಸಿದ್ದರು. ಇದರ ಮುಂದುವರಿದ ಭಾಗವಾಗಿ 25 ಅಡಿ ಎತ್ತರದ ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣಕ್ಕೆ ಇಂದು ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಮೆ ಕೆತ್ತುವ ಶಿಲ್ಪಿಗಳಿಗೆ ಮುಂಗಡ ಹಣವನ್ನು ನೀಡಲಾಗಿದೆ. ಅಲ್ಲಿಗೆ ಸ್ಮಾರಕ ನಿರ್ಮಾಣದ ಕಾರ್ಯಗಳು ಶೀಘ್ರವಾಗಿಯೇ ನಡೆಯುತ್ತಿದ್ದು, ವಿಷ್ಣು ಅಭಿಮಾನಿಗಳು ನಿರಾಳರಾಗಿದ್ದಾರೆ.


