ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಚನೆಯಾದ ದಿನದಿಂದ ವಿವಾದಗಳಿಂದ ಗುರುತಿಸಿಕೊಂಡವರು ಕೆಎನ್ ರಾಜಣ್ಣ. ಆರಂಭದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆ ಮೊದಲು ಧ್ವನಿ ಎತ್ತಿದವರು. ಇದರಿಂದ ಡಿಕೆ ಶಿವಕುಮಾರ್ ಹಾಗೂ ರಾಜಣ್ಣ ನಡುವೆ ತೀವ್ರ ಅಸಮಾಧಾನ ಉಂಟಾಗಿತ್ತು. ಇದೀಗ ರಾಜಣ್ಣ ಸಂಪುಟದಿಂದ ವಜಾಗೊಂಡಿದ್ದಾರೆ. ನಿರ್ಗಮನದ ನಂತರ ಅವರ ಮುಖದಲ್ಲಿ ಶಾಂತತೆಯಿದೆ, ಆದರೆ ಒಳಗೊಳಗೆ ಕುದಿಯುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮಿತ್ರ, ಎಸ್‍ಟಿ ಸಮುದಾಯದ ಪ್ರಮುಖ ನಾಯಕರಾಗಿದ್ದ 74 ವರ್ಷದ ರಾಜಣ್ಣ ಅವರನ್ನು ವಿಧಾನಸಭೆ ಅಧಿವೇಶನದ ಮೊದಲ ದಿನದಂದು ಅಮಾನತು ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಅಮಾನತಿಗೆ ಹಲವು ಕಾರಣ..?
ಮತಗಳ್ಳತನದ ಬಗ್ಗೆ ರಾಜಣ್ಣ ಹೇಳಿಕೆ ಕಾಂಗ್ರೆಸ್ ಹೈಕಮಾಂಡ್, ವಿಶೇಷವಾಗಿ ರಾಹುಲ್ ಗಾಂಧಿಯನ್ನು ಕೆರಳಿಸಿತ್ತು. ಮಹದೇವಪುರ ವಿಧಾನಸಭಾ ಕ್ಷೇತ್ರದ ವಿವಾದಾತ್ಮಕ ಮತದಾರರ ಪಟ್ಟಿಯನ್ನು ತಮ್ಮದೆ ಪಕ್ಷದ ಸರ್ಕಾರ ರಚಿಸಿತ್ತು ಎಂದು ರಾಜಣ್ಣ ಹೇಳಿದ್ದರು. ಇದರಿಂದ ಕಾಂಗ್ರೆಸ್ ಗೆ ತೀವ್ರ ಮುಜುಗರವಾಗಿತ್ತು. ಕಾಂಗ್ರೆಸ್ ಹೈಕಮಾಂಡ್‍ಗೆ, ಇದು ಪಕ್ಷದ್ರೋಹಿ ನಡವಳಿಕೆಯಂತೆ ಭಾಸವಾಯ್ತು. ಜನತಾ ಪರಿವಾರದ ಯುಗದಿಂದಲೂ ರಾಜಣ್ಣ ಅವರ ರಾಜಕೀಯ ಮಿತ್ರರಾಗಿದ್ದ ಸಿದ್ದರಾಮಯ್ಯಗೆ, ಇದು ದೊಡ್ಡ ಮುಜುಗರವಾಗಿತ್ತು. ಇದರ ಜೊತೆಗೆ ಈ ಮೊದಲು ರಾಜಣ್ಣ ನೀಡಿದ್ದ ಹೇಳಿಕೆಗಳು, ನಡೆದುಕೊಂಡಿದ್ದ ರೀತಿಯೂ ಅಮಾನತಿಗೆ ಕಾರಣ ಎನ್ನಲಾಗುತ್ತಿದೆ.
ರಾಜೀನಾಮೆಗೆ ಸಿದ್ಧವಾಗಿದ್ದ ರಾಜಣ್ಣ
ರಾಜಣ್ಣ ತಮ್ಮ ರಾಜೀನಾಮೆ ನೀಡುವ ಮೊದಲೇ, ಮುಖ್ಯಮಂತ್ರಿ ಕಚೇರಿ ಸಚಿವರ ಪದಚ್ಯುತಿಗೆ ತನ್ನ ಶಿಫಾರಸನ್ನು ರಾಜಭವನಕ್ಕೆ ರವಾನಿಸಿತ್ತು. ರಾಜ್ಯಪಾಲರ ಕಚೇರಿಯಿಂದ ಬಂದ ಒಂದು ಪ್ರಕಟಣೆ ಅವರ ರಾಜಕೀಯ ಭವಿಷ್ಯವನ್ನೇ ಅತಂತ್ರ ಮಾಡಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಚಿವ ಸಂಪುಟದಿಂದ ವಜಾಗೊಳಿಸಲಾಗಿತ್ತು. ಇದು ರಾಜೀನಾಮೆ ಅಲ್ಲ ಬದಲಿಗೆ ಸಂಪುಟದಿಂದ ವಜಾಗೊಳಿಸಿದ್ದಾಗಿ ಸ್ಪಷ್ಟ ಸಂದೇಶ ರವಾನಿಸಿತ್ತು.
ಮತಗಳ್ಳತನ ನಡೆದಿರುವ ಬಗ್ಗೆ ಕಾನೂನು ಇಲಾಖೆ ಪರಿಶೀಲನೆ : ಸಿಎಂ ಸಿದ್ದರಾಮಯ್ಯ
ಈ ಬಾರಿ ಸಿಗದ ಸಿದ್ದು ಶ್ರೀರಕ್ಷೆ..!
ಈ ಹಿಂದೆಯೇ ರಾಜಣ್ಣ ಅವರನ್ನು ವಜಾಗೊಳಿಸಬೇಕಿತ್ತು, ಆದರೆ ಸಿದ್ದರಾಮಯ್ಯ ಶ್ರೀರಕ್ಷೆಯಿಂದ ಬಚಾವಾಗಿದ್ದರು. ಈ ವರ್ಷದ ಆರಂಭದಲ್ಲಿ, ತಮ್ಮನ್ನು ಹನಿಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿದೆ ಎಂದು ವಿಧಾನಸಭೆ ಅಧಿವೇಶನದಲ್ಲಿ ಆರೋಪಿಸಿದ್ದರು. ಇದು ರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯಿತು , ಅವರ ವಿರುದ್ಧ ಹೈಕಮಾಂಡ್ ಗೆ ದೂರು ನೀಡಲಾಗಿತ್ತು. ಸಿದ್ದರಾಮಯ್ಯ ಅವರೊಂದಿಗಿನ ಅವರ ದೀರ್ಘಕಾಲದ ಬಾಂಧವ್ಯದಿಂದ ಆಗ ರಕ್ಷಿಸಲ್ಪಟ್ಟರು. ಆದರೆ ಈ ಬಾರಿ ಅದು ಸಾಕಾಗಲಿಲ್ಲ. ರಾಜಣ್ಣ ಅವರನ್ನು ಪದಚ್ಯುತಗೊಳಿಸಿದ್ದರಿಂದ, ರಾಜ್ಯ ಸಚಿವ ಸಂಪುಟದಲ್ಲಿ ಕೇವಲ ಒಬ್ಬ ಎಸ್‍ಟಿ ನಾಯಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉಳಿದಿದ್ದಾರೆ.
ಮೇಲಾಯ್ತಾ ಡಿಕೆಶಿ ಕೈ..?
ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವ ಮೂಲಕ ಡಿ.ಕೆ.ಶಿವಕುಮಾರ್ ಅವರ ಕೈಮೇಲಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಪುನರ್‌ಸ್ಥಾಪನೆಯ ಪ್ರಯತ್ನಗಳಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್ ಮಾಡುತ್ತಿದ್ದ ಸಚಿವರು ಮತ್ತು ಶಾಸಕರಿಗೆ ಥಂಡಾ ಒಡೆದಂತಾಗಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಬೆಳಗಾವಿಯ ರಮೇಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ವಿರುದ್ಧ ಒಳಗೊಳಗೆ ಕತ್ತಿ ಮಸಿಯುತ್ತಿದ್ದರು. ಕೊನೆಗೆ ಅವರು ಲೈಂಗಿಕ ಹಗರಣಕ್ಕೆ ಸಿಲುಕಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ತಮ ವಿರುದ್ಧ ಸೆಟೆದು ನಿಂತ ಎಲ್ಲರ ಲೆಕ್ಕಗಳನ್ನು ಚುಕ್ತಾ ಮಾಡಿದ್ದೇವೆ ಎಂದು ಚನ್ನಪಟ್ಟಣ ವಿಧಾನ ಸಭೆ ಉಪಚುನಾವಣೆಯ ಬಳಿಕ ಖುದ್ದು ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದು ಗಮನಿಸಬೇಕಾದ ವಿಚಾರ.
ಕೆ.ಎನ್. ರಾಜಣ್ಣ ಸಹಕಾರ ಸಚಿವರಾಗಿದ್ದರು. ಅಪೆಕ್‌್ಸ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಅವರ ಒತ್ತಡಕ್ಕೆ ಕ್ಯಾರೆ ಎಂದಿರಲಿಲ್ಲ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ತಮ ಸಹೋದರ ಡಿ.ಕೆ. ಸುರೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಪ್ರಯತ್ನವನ್ನು ಡಿ.ಕೆ.ಶಿವಕುಮಾರ್ ನಡೆಸಿದರು. ಅದಕ್ಕೆ ರಾಜಣ್ಣ ಅಡ್ಡಗಾಲಾಗಿದ್ದರು ಎನ್ನಲಾಗಿದೆ. ಎಲ್ಲಾ ಸಂದರ್ಭಗಳಲ್ಲೂ ಸಮಯ ಕಾಯುತ್ತಿದ್ದ ಡಿ.ಕೆ. ಶಿವಕುಮಾರ್, ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ರಾಹುಲ್‌ಗಾಂಧಿ ವಿರುದ್ಧವಾಗಿ ಹೇಳಿಕೆ ನೀಡಿದ್ದನ್ನೇ ಬಳಸಿಕೊಂಡು ದಾಳ ಉರುಳಿಸಿದ್ದಾರೆ. ಈ ಮೂಲಕ ರಾಜಣ್ಣ ಅವರ ಪದಚ್ಯುತಿಯಾಗಿದ್ದು, ಒಂದೇ ಕಲ್ಲಿನಲ್ಲಿ ಡಿ.ಕೆ. ಶಿವಕುಮಾರ್ ಹಲವು ಹಕ್ಕಿಗಳನ್ನು ಹೊಡೆದಿದ್ದಾರೆ.
ಪಕ್ಷದ ಶಿಸ್ತು ಉಲ್ಲಂಘಿಸುವವರಿಗೆ ಛಡಿ ಏಟು ಬಿದ್ದಂತಾಗಿದ್ದು, ಕಾಂಗ್ರೆಸ್‌ನಲ್ಲಿ ಹೈಕಮಾಂಡೇ ಅಂತಿಮ ಎಂಬ ಸಂದೇಶದ ಜೊತೆಗೆ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತು ಹದ್ದು ಮೀರಿದವರಿಗೆ ಗ್ರಹಚಾರ ತಪ್ಪಿದ್ದಲ್ಲ ಎಂಬ ಸಂದೇಶವು ರವಾನೆಯಾಗಿದೆ.


