ಮೈಸೂರು: ನಮಸ್ತೆ, ಎಲ್ಲರೂ ಕಣ್ಣು ಮುಚ್ಚಿ, ಒಂದು ದೀರ್ಘ ಉಸಿರು ತೆಗೆದುಕೊಳ್ಳಿ, ಈಗ ನಿಮ್ಮ ಹೃದಯದಿಂದ ಈ ಕತೆ ಕೇಳಿಸಿಕೊಳ್ಳಿ!
ಈ ರಾತ್ರಿಯ ಕತೆ….
ಸುಮಧುರ ಕಂಠದಿಂದ ಹೊರಡುವ ಈ ಕಥೆ ಕೇಳುತ್ತಾ ಮಕ್ಕಳು ತಮ್ಮದೇ ಕಲ್ಪನೆಯ ಜಗತ್ತಿನಲ್ಲಿ ನಿದ್ದೆಗೆ ಜಾರಿರುತ್ತಾರೆ.
ಅಜ್ಜಿ ಕಥೆಗಳನ್ನು ಕೇಳುತ್ತಾ ಬೆಳೆಯುವ ಅವಕಾಶ-ಅದೃಷ್ಟ ಈಗಿನ ಬಹುಪಾಲು ಮಕ್ಕಳಿಗೆ ಇಲ್ಲ. ಪಂಚತಂತ್ರ, , ರಾಮಾಯಣ, ಮಹಾಭಾರತ, ಭಾಗವತ, ಜಾನಪದ, ವಿಕ್ರಮ ಬೇತಾಳ, ಅಡಗೂಲಜ್ಜಿಯ ಕಥೆ, ಹೀಗೆ ವೈವಿಧ್ಯಮಯ ಕಥಾ ಸಾಗರದ ಶ್ರೀಮಂತಿಕೆಯಿಂದ ಈಗಿನ ಮಕ್ಕಳು ವಂಚಿತರಾಗುತ್ತಿದ್ದಾರೆ. ಆನ್ ಲೈನ್ ನಲ್ಲಿ ಈ ಕಥೆಗಳನ್ನು ತಲುಪಿಸುವ ಪ್ರಯತ್ನ ನಡೆದರೂ, ಹೆಚ್ಚಿನ ಸ್ಕ್ರೀನ್ ಟೈಮಿಂಗ್ಸ್, ಮೊಬೈಲ್ ಚಟದ ಸವಾಲಿಗೆ ಇಂದು ಕಾರಣವಾಗಬಹುದು ಅನ್ನುವ ಭೀತಿ ಹೆತ್ತವರದ್ದು. ಇದನ್ನೆಲ್ಲಾ ಗಮನಿಸಿ, ನಗರದ ೨೧ನೇ ಶತಮಾನದ ಭಾರತೀಯ ಶಾಲೆ ಪೂರ್ಣ ಚೇತನ ಶಾಲೆa ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದೆ. ಪ್ರತಿ ರಾತ್ರಿ, ಮಕ್ಕಳು ಮಲಗುವ ಸಮಯಕ್ಕೆ ಸರಿಯಾಗಿ ಸುಮಾರು ಐದು ನಿಮಿಷದ ಆಡಿಯೋ ಕಥೆಗಳನ್ನು ಮಕ್ಕಳಿಗೆ ಕಳುಹಿಸುವ ವಿನೂತನ ಪ್ರಯತ್ನವನ್ನು ಅದು ಆರಂಭಿಸಿದೆ. ಈ ಪ್ರಯತ್ನ ಅಲ್ಪಕಾಲದಲ್ಲೇ ಅದೆಷ್ಟು ಜನಪ್ರಿಯವಾಗಿದೆ ಎಂದರೆ, ಕೆಲವೇ ದಿನಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಮಕ್ಕಳು ಈ ಕಥಾ ಸರಣಿಯ ನಿಯಮಿತ ಕೇಳುಗರಾಗಿದ್ದಾರೆ.
ಶುಭರಾತ್ರಿ ಕಥೆಗಳು ಹೆಸರಿನ ಈ ಸರಣಿಯ ಕಥೆಗಳ ಅನನ್ಯತೆಯೆಂದರೆ ಅವುಗಳು ಧ್ವನಿಸುವ ಮೌಲ್ಯಗಳು. ಸಹೃದಯತೆ, ಅನುಕಂಪ, ಪ್ರೀತಿ, ತ್ಯಾಗ, ದೇಶಭಕ್ತಿ, ಹೀಗೆ ನಮ್ಮ ನೆಲದ ಮೌಲ್ಯಗಳ ಕಥೆಗಳನ್ನು ಈ ಮೂಲಕ ಮಕ್ಕಳಿಗೆ ಪರಿಚಯಿಸುವ ಪ್ರಯತ್ನವನ್ನು ಶಾಲೆ ಮಾಡುತ್ತಿದೆ.
ಈ ಕಥಾಸರಣಿಯ ಆರಂಭದ ಹಿಂದೊಂದು ಮನಕಲಕುವ ಸನ್ನಿವೇಶವಿದೆ. ಶಾಲೆಯ ಪುಟ್ಟ ಮಗುವೊಂದರ ಜೊತೆಗೆ ಶಾಲಾ ಶಿಕ್ಷಕಿಯರು ಸಂವಾದ ನಡೆಸುತ್ತಿದ್ದಾಗ, ಆ ಮಗು, ತಾನು ಅಜ್ಜಿ ಕಥೆಗಳನ್ನು “ಮಿಸ್ ಮಾಡಿಕೊಳ್ಳುತ್ತಿದ್ದೇನೆ,” ಎಂದು ತಿಳಿಸಿತ್ತು. “ಅಜ್ಜಿ ಹೇಳುವ ನಾನಾ ಕಥೆ ಕೇಳುತ್ತಾ ನಿದ್ದೆ ಮಾಡುತ್ತಿದ್ದೆ. ಈಗ ಅಜ್ಜಿಯ ಕಥೆ ಇಲ್ಲ,” ಅನ್ನುವ ಮಗುವಿನ ನುಡಿ, ಶಾಲೆಯ ಶಿಕ್ಷಕರಿಗೆ ಈ ಹೊಸ ಕಥಾ ಸರಣಿ ಆರಂಭಿಸುವ ಆಲೋಚನೆ ಮೂಡಿಸಿತು. ಶಾಲೆಯ ಶಿಕ್ಷಕರು ಸ್ವತಃ ಈ ಕಥೆಗಳನ್ನು ನೂತನ ತಂತ್ರಜ್ಞಾನದ ನೆರವಿನೊಂದಿಗೆ ಧ್ವನಿ ಮುದ್ರಿಸುತ್ತಾರೆ.
ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ದರ್ಶನ್ ರಾಜ್ ಹಾಗು ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಅವರ ಪ್ರಕಾರ, ಕಥೆ ಕೇಳುತ್ತಾ ನಿದ್ದೆಗೆ ಜಾರುವುದು ಪ್ರತಿ ಮಗುವಿನ ಕನಸು. ಈ ಕನಸಿನ ಮೂಲಕವೇ ಸಾಮಾಜಿಕ ಮೌಲ್ಯಗಳನ್ನು ಅವರಿಗೆ ಪರಿಚಯಿಸುವ ಪ್ರಯತ್ನವಿದು. ಈ ಆಡಿಯೋ ಕಥೆಗಳನ್ನು ಉಚಿತವಾಗಿ ಎಲ್ಲೆಡೆ ಭಿತ್ತರಿಸಲಾಗುತ್ತದೆ. “ನಮ್ಮ ಉದ್ದೇಶ, ಕಥೆಗಳನ್ನು ಕೇಳುತ್ತಲೇ ನಮ್ಮ ಮಕ್ಕಳು ಈ ನಾಡಿನ ಹೆಮ್ಮೆಯ ಪ್ರಜೆಗಳಾಗಲಿ,” ಎಂದು ಅವರು ಹೇಳುತ್ತಾರೆ.
ನಿಮ್ಮ ಮಗುವು ಕೂಡ ಈ ಕಥೆಗಳನ್ನು ಕೇಳಬೇಕೆ? ಈ 72048 36513 ಸಂಖ್ಯೆಗೆ ಒಂದು ಸಂದೇಶ ಕಳುಹಿಸಿ. ಪ್ರತಿನಿತ್ಯ ಮುಸ್ಸಂಜೆ, ನಿಮ್ಮ ಮಗು ಇಷ್ಟ ಪಡುವ ಕಥೆ ನಿಮ್ಮ ಮೊಬೈಲ್ ಸೇರುತ್ತದೆ.
ಶುಭರಾತ್ರಿ ಕಥೆಗಳು ಆಡಿಯೋ ಸಂಗ್ರಹವನ್ನು ಇಲ್ಲಿ ಕೇಳಬಹುದು.
https://drive.google.com/drive/folders/1lZrMsuw2q_NDxMzdAl8-jRutTkF3lUCa
ಹೆಚ್ಚಿನ ಮಾಹಿತಿಗೆ ಸಂಪರ್ಕ: 9901010990


