Online News in ಕನ್ನಡ

62 ಕೇಸ್‌ ವಾಪಸ್‌ ಪಡೆದ ಸರ್ಕಾರ; ಕೈ ಮುಖಂಡರು, ಕಾರ್ಯಕರ್ತರದ್ದೇ ಹೆಚ್ಚು..!

ಬೆಂಗಳೂರು: ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹತ್ತಾರು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಅದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಬೆಂಬಲಿಗರು ಸೇರಿ 62 ಕ್ರಿಮಿನಲ್‌ ಕೇಸ್‌ಗಳನ್ನು ವಾಪಸ್‌ ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ.

ಎಚ್‌.ಡಿ.ಕೋಟೆ ಶಾಸಕ ಅನಿಲ್‌ ಚಿಕ್ಕಮಾದು, ಕೆಆರ್‌ ಕ್ಷೇತ್ರದ ಶಾಸಕ ರವಿಶಂಕರ್‌, ರೈತ ಹೋರಾಟಗಾರ ಬಡಗಲಪುರ ನಾಗೇಂದ್ರ, ಸಕ್ಕರೆ ಸಚಿವ ಶಿವಾನಂದ ಪಾಟೀಲ್‌, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್‌ ಪಾಟೀಲ್‌, ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್‌, ಮಾಜಿ ಸಚಿವ ಎಚ್‌.ವೈ.ಮೇಟಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಮನೋರಾಜ್‌ ರಾಜೀವ್‌, ಔರಾದ್‌ ತಾಲೂಕು ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪ್ರವೀಣ್‌ ಕುಮಾರ್‌, ಬೆಂಗಳೂರು ದಕ್ಷಿಣ ಡಿಸಿಸಿ ಅಧ್ಯಕ್ಷ ಜಿ.ಕೃಷ್ಣಪ್ಪ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳು ಸೇರಿವೆ. ಒಟ್ಟಾರೆಯಾಗಿ ವಾಪಸ್‌ ಪಡೆದ 62 ಪ್ರಕರಣಗಳಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ಕೇಸ್‌ ಗಳೇ ಹೆಚ್ಚಾಗಿವೆ.

ಡಿಕೆ ಶಿವಕುಮಾರ್‌ ಬೆಂಬಲಿಗರ ಕೇಸ್‌ ವಾಪಸ್‌

ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2019 ರಲ್ಲಿ ಡಿಕೆಶಿವಕುಮಾರ್‌ ಅವರನ್ನು ಬಂಧಿಸಿದಾಗ ದಾಂಧಲೆ ನಡೆಸಿದ ಬೆಂಗಲಿಗರ ವಿರುದ್ಧ ಸಾತನೂರು, ಕೋಡಿಹಳ್ಳಿಸೇರಿ ರಾಮನಗರ ಜಿಲ್ಲೆಯ ನಾನಾ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ, ರೈತ ಮುಖಂಡರು, ನಾನಾ ಸಂಘಟನೆಗಳ ಮುಖಂಡರ ವಿರುದ್ಧದ ಮೊಕದ್ದಮೆಗಳನ್ನು ಕೈಬಿಡುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಜೊತೆಗೆ ಹೊನ್ನಾಳಿ ಕ್ಷೇತ್ರದ ಶಾಸಕ ಡಿ.ಜಿ.ಶಾಂತನಗೌಡ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ ಕುಮಾರ್‌ ಸೊರಕೆ ವಿರುದ್ಧ ಸುರತ್ಕಲ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನೂ ಅಭಿಯೋಜನೆಯಿಂದ ಹಿಂಪಡೆಯಲಾಗಿದೆ.

ರೈತ ಸಂಘದ ಗುಂಡ್ಲುಪೇಟೆಯ ಮುಖಂಡ ಟಿ.ಎಸ್‌.ಶಾಂತಮಲ್ಲಪ್ಪ, ಮೈಸೂರಿನ ದಲಿತ ಸಂಘರ್ಷ ಸಮಿತಿಯ ಆಲಗೂಡು ಶಿವಕುಮಾರ್‌, ಕರ್ನಾಟಕ ಮೀಸಲು ಸಂರಕ್ಷಣಾ ಒಕ್ಕೂಟದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ಕೆಲವು ಜನಪರ ಹೋರಾಟಗಾರರ ವಿರುದ್ಧದ ಕೇಸ್‌ಗಳನ್ನು ಕೈಬಿಡುವ ತೀರ್ಮಾನವನ್ನು ಸಂಪುಟ ಕೈಗೊಂಡಿದೆ.

Call Now Button