ಬೆಂಗಳೂರು: ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಅಗತ್ಯ ಕಾನೂನು ತಿದ್ದುಪಡಿಗಳನ್ನು ತರುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ಮಾಧ್ಯಮಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್ ಅವರು, ಸ್ಥಳೀಯ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು, ಅಗತ್ಯ ಪರಿಷ್ಕರಣೆ ಮಾಡಲು, ಅಗತ್ಯ ಕಾನೂನು ಮತ್ತು ನಿಯಮಾವಳಿ ಬದಲಾವಣೆ ಮಾಡುವ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ನಿರ್ಣಯ ಮಾಡಿದೆ ಎಂದು ಹೇಳಿದರು.
ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಮತಪತ್ರಗಳ ಮೂಲಕ ಚುನಾವಣೆ ಮಾಡುವುದಕ್ಕೆ ಸಚಿವ ಸಂಪುಟ ನಿರ್ಣಯ ಮಾಡಿದೆ. ಇದಕ್ಕೆ ಕೆಲವು ತಿದ್ದುಪಡಿಗಳು ಮತ್ತು ನಿಯಮಾವಳಿಗಳು ಬೇಕಾಗುತ್ತವೆ. ಅಗತ್ಯ ಕಾನೂನು ತಿದ್ದುಪಡಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಇತ್ತೀಚೆಗೆ ರಾಜ್ಯದಲ್ಲಿ ಮತದಾರರ ಪಟ್ಟಿ ತಯಾರಿಕೆಯಲ್ಲಿ ವ್ಯತ್ಯಾಸಗಳಾಗಿದ್ದವು. ಮತಗಳ್ಳತನ ಆರೋಪಗಳು ಕೇಳಿಬಂದಿವೆ. ಜೊತೆಗೆ ಇವಿಎಂ ಬಗ್ಗೆ ಜನರಲ್ಲಿ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಜನರ ಮನಸ್ಥಿತಿಯ ಆಧಾರದ ಮೇಲೆ ಈ ತೀರ್ಮಾನ ಮಾಡಲಾಗಿದೆ. ಹಾಗಾಗಿ, ಅಗತ್ಯ ಕಾನೂನು ತಿದ್ದುಪಡಿ ತರಲು ಮತ್ತು ನಿಯಮಾವಳಿ ರಚನೆ ಮಾಡಲು ಶಿಫಾರಸ್ಸಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ರಾಷ್ಟ್ರಾದ್ಯಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನ ಆರೋಪ ಮಾಡಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದನ್ನು ಸ್ಮರಿಸಬಹುದು. ಇನ್ನು ಇವಿಎಂ ಬಗ್ಗೆ ಮೊದಲಿನಿಂದಲೂ ಕಾಂಗ್ರೆಸ್ ವಲಯದಲ್ಲಿ ಅನುಮಾನಗಳು ಏಳುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ತುಂಬಾ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚುನಾವಣಾ ಆಯೋಗದ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದು, ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ಶಾಸಕಾಂಗ ಸೂಕ್ತ ಕಾನೂನು ತಿದ್ದುಪಡಿಯನ್ನು ತಂದರೆ ನಾವು ಅದರಂತೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದೆ. ಅಲ್ಲಿಗೆ ರಾಜ್ಯ ಸರ್ಕಾರ ಸೂಕ್ತ ಕಾನೂನು ತಿದ್ದುಪಡಿ ತಂದು ಮತ್ತೆ ಬ್ಯಾಲೆಟ್ ಪೇಪರ್ ಗಳ ಮೂಲಕ ಚುನಾವಣೆ ನಡೆಸಿದರೆ ಅದರಂತೆ ಚುನಾವಣಾ ಆಯೋಗ ಮತದಾನ ಪ್ರಕ್ರಿಯೆ ನಡೆಸಲಿದೆ.


