ಮೈಸೂರು: ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಬಾನು ಮುಷ್ತಾಕ್ ಅವರ ಬದಲಾವಣೆಗೆ ಸಂಬಂಧ ಪಿಐಎಲ್ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಕೋರ್ಟ್ ಮೆಟ್ಟಿಲೇರಿರುವವರನ್ನೇ ಈ ಸಂಬಂಧ ಕೇಳಿ ಎಂದಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದಸರಾ ನಾಡಹಬ್ಬವಾಗಿದ್ದು, ಒಂದು ಧರ್ಮದವರು ಮಾತ್ರ ಭಾಗವಹಿಸಬೇಕು ಎಂದೇನೂ ಇಲ್ಲ. ಉದ್ಘಾಟಕರ ಬದಲಾವಣೆಗೆ ಕಾನೂನು ಸಮರ ಬಗ್ಗೆ ಕೋರ್ಟ್ ಅದನ್ನು ನೋಡಿಕೊಳ್ಳುತ್ತೆ. ನ್ಯಾಯಾಲಯದಲ್ಲಿ ವಿಷಯ ಇತ್ಯರ್ಥವಾಗಲಿ. ದಸರಾ ಎಲ್ಲರ ಹಬ್ಬ ಒಂದು ಜಾತಿ ಧರ್ಮಕ್ಕೆ ಸೇರಿದ ಹಬ್ಬ ಅಲ್ಲ. ಮುಸ್ಲಿಂ, ಕ್ರಿಸ್ಟಿಯನ್ ಎಲ್ಲರೂ ಬರುತ್ತಾರೆ. ಸಾಂಸ್ಕೃತಿಕವಾಗಿ ಎಲ್ಲ ಧರ್ಮದ ಜನರು ಇದರಲ್ಲಿ ಭಾಗವಹಿಸುತ್ತಾರೆ. ಸಾರ್ವತ್ರಿಕ ಹಬ್ಬದಲ್ಲಿ ಎಲ್ಲ ಜಾತಿ ಮತ್ತು ಧರ್ಮದವರು ಭಾಗವಹಿಸಬಹುದು. ಆದರೆ ಇದನ್ನು ಬೇರೆ ರೀತಿ ರಾಜಕೀಯವಾಗಿ ವಿರೋಧ ಮಾಡ್ತಾರೆ. ವಿರೋಧ ಮಾಡೋರನ್ನ ಈ ಬಗ್ಗೆ ಕೇಳಿ ಎಂದು ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಪಿಐಎಲ್ ಸಲ್ಲಿಕೆ ಮಾಡಿರುವ ಇನ್ನಿಬ್ಬರ ವಿರುದ್ಧ ಕಿಡಿ ಕಾರಿದರು.


