ಬೆಂಗಳೂರು: ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆತಾಗ ಮಾತ್ರ ಸಮ ಸಮಾಜದ ನಿರ್ಮಾಣ ಮತ್ತು ಮೂಢನಂಬಿಕೆಯನ್ನು ಬುಡಸಮೇತ ಕಿತ್ತು ಹಾಕಲು ಸಾಧ್ಯ. ಈ ನಿಟ್ಟಿನಲ್ಲಿ ಅಜೀಂ ಪ್ರೇಮ್ ಜೀ ಅವರ ಸಮಾಜಮುಖಿ ಕಾರ್ಯಗಳು ಅನುಕರಣೀಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಆಯೋಜಿಸಿದ್ದ ದೀಪಿಕಾ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಾರ್ಷಿಕ 30,000 ರೂ. ದಂತೆ ಒಟ್ಟು 37,000 ವಿದ್ಯಾರ್ಥಿನಿಯರಿಗೆ ’ದೀಪಿಕಾ ವಿದ್ಯಾರ್ಥಿ ವೇತನ’ ನೀಡುವ ಈ ಯೋಜನೆಯಿಂದ ಬಡಹೆಣ್ಣುಮಕ್ಕಳಿಗೆ ಹೆಚ್ಚಿನ ಲಾಭವಾಗಲಿದೆ. ನಮ್ಮ ರಾಜ್ಯದ ಪ್ರತಿಷ್ಠಿತ ಐಟಿ ದಿಗ್ಗಜರಾದ ಅಜೀಂ ಪ್ರೇಂಜಿ ಅವರು ಅಜೀಂ ಪ್ರೇಂಜಿ ಫೌಂಡೇಶನ್ ನ ಮೂಲಕ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಪೂರೈಸುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣದಲ್ಲಿ ತೊಡಗುವಂತಾಗುವ ದೃಷ್ಠಿಯಿಂದ ‘’ದೀಪಿಕಾ ವಿದ್ಯಾರ್ಥಿ ವೇತನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಈ ಯೋಜನೆಯಡಿ ಪದವಿ ಕೋರ್ಸ್ ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ ರೂ.30,000/- ಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ. ಈ ವರ್ಷ ಅಜೀಂ ಪ್ರೇಂಜಿ ಫೌಂಡೇಶನ್ ನಿಂದ ಒಟ್ಟು 37,000 ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವುದಕ್ಕೆ ವಿದ್ಯಾರ್ಥಿನಿಯರು ಹತ್ತನೇ ತರಗತಿಯನ್ನು ಮತ್ತು 12ನೇ ತರಗತಿಯನ್ನು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಪೂರ್ಣಗೊಳಿಸಿರಬೇಕು. ಈ ಯೋಜನೆಯ ಲಾಭ ಪಡೆಯಬೇಕಾದರೆ, ವಿದ್ಯಾರ್ಥಿನಿಯರು ಪ್ರತಿ ವರ್ಷ ತಪ್ಪದೇ ಉತೀರ್ಣರಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ಮಕ್ಕಳಾಗಿದ್ದು, ಇಂತಹ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದ್ದಾರೆ.
ನಮ್ಮ ದೇಶದಲ್ಲಿ ಹಿಂದಿನಿಂದಲೂ ಶೂದ್ರರಂತೆ, ಹೆಣ್ಣುಮಕ್ಕಳೂ ಸಹ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಶಿಕ್ಷಣ ಪಡೆದ ಹೆಣ್ಣುಮಕ್ಕಳ ಸರಾಸರಿ, ರಾಷ್ಟ್ರೀಯ ಶಿಕ್ಷಿತರ ಸರಾಸರಿಗಿಂತ ಕಡಿಮೆಯಿದೆ. ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಿತರಾಗಬೇಕೆಂಬ ಸರ್ಕಾರದ ಉದ್ದೇಶದಲ್ಲಿ ಕೈಜೋಡಿಸಿರುವ ಅಜೀಂ ಪ್ರೇಮ್ ಜೀ ಅವರಿಗೆ ಅಭಿನಂದನೆಗಳು.
ಹೆಣ್ಣುಮಕ್ಕಳು ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಸಮಸ್ಯೆ, ಪೋಕ್ಸೋ ಸಮಸ್ಯೆಗಳು, ಬಾಲ ಕಾರ್ಮಿಕ ಪದ್ಧತಿಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಮಹಿಳೆಯರು ಸ್ವಾವಲಂಬಿಗಳಾಗಲು ವಿದ್ಯೆ ಅತ್ಯವಶ್ಯ. ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತದೆ. ಮಹಿಳೆಯರಿಗೆ ಶಿಕ್ಷಣ ದೊರೆತರೆ, ಸಮಾಜದ ಸವಾಲುಗಳನ್ನು ಎದುರಿಸಲು ಸಮರ್ಥರಾಗುತ್ತಾರೆ ಎಂದು ಸಿಎಂ ತಿಳಿಸಿದರು.
- ಪ್ರಮುಖ ಅಂಶಗಳು:
- ಪ್ರತಿ ವಿದ್ಯಾರ್ಥಿನಿಗೆ ವಾರ್ಷಿಕ 30,000 ರೂ. ದಂತೆ ಒಟ್ಟು 37,000 ವಿದ್ಯಾರ್ಥಿನಿಯರಿಗೆ ’ದೀಪಿಕಾ ವಿದ್ಯಾರ್ಥಿ ವೇತನ’
- ಅಜೀಂ ಪ್ರೇಮ್ ಜೀ ಫೌಂಡೇಷನ್ ನಿಂದ ಯೋಜನೆ ಅನುಷ್ಠಾನ, ಬಡ, ಗ್ರಾಮೀಣ ಹೆಣ್ಣು ಮಕ್ಕಳಿಗೆ ಅನುಕೂಲ
- 10ನೇ ಮತ್ತು 12ನೇ ತರಗತಿಯನ್ನು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಪೂರ್ಣಗೊಳಿಸಿರಬೇಕು
- ವಿದ್ಯಾರ್ಥಿನಿಯರು ಪ್ರತಿ ವರ್ಷ ತಪ್ಪದೇ ಉತ್ತೀರ್ಣರಾಗಬೇಕು, ಅನುತ್ತೀರ್ಣವಾದರೆ ವಿದ್ಯಾರ್ಥಿ ವೇತನ ಸ್ಥಗಿತ
- ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ದೊರೆಯಬೇಕು ಎನ್ನುವ ಆಶಯ ಹೊತ್ತಿರುವ ಐಟಿ ದಿಗ್ಗಜ ಅಜೀಂ ಪ್ರೇಮ್ಜೀ


