ಬೆಂಗಳೂರು: ಎಸ್.ಎಲ್ ಬೈರಪ್ಪನವರು ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಮೈಸೂರು ಅವರ ಕರ್ಮಭೂಮಿಯಾಗಿತ್ತು. ಇದೀಗ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೈರಪ್ಪನವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಬೈರಪ್ಪನವರು ಸುಮಾರು 25 ಕಾದಂಬರಿಗಳನ್ನು ಬರೆದಿದ್ದು, ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ನಡೆಸಿದ್ದರು. ಅವರ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆಯಾಗಿದ್ದು, ಇಷ್ಟು ಸಂಖ್ಯೆಯಲ್ಲಿ ಸಾಹಿತಿಯೊಬ್ಬರ ಕೃತಿಗಳು ತರ್ಜುಮೆಯಾಗಿರುವುದು ಅಪರೂಪ. ವಿವಿಧ ಭಾಷೆಗಳ ಓದುಗರನ್ನು ಸಂಪಾದಿಸಿದ್ದರು. ಸಣ್ಣ ಗ್ರಾಮವೊಂದರಲ್ಲಿ ಜನಿಸಿದ ಬೈರಪ್ಪನವರು, ಫಿಲಾಸಫಿಯನ್ನು ಓದಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡವರು ಎಂದರು.
ಬೋಧನಾ ವೃತ್ತಿಯಲ್ಲಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನೂ ತೊಡಗಿಸಿಕೊಂಡಿದ್ದರು. ಕಾದಂಬರಿಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತಿದ್ದ ಅವರ ಕೃತಿಗಳು ಜಗತ್ಪ್ರಸಿದ್ಧವಾಗಿದ್ದವು. ನಾನು ಅವರ ಕೆಲವೊಂದು ಕಾದಂಬರಿಗಳನ್ನು ಓದಿದ್ದೇನೆ. ಬದುಕಿನ ಅನುಭವಗಳನ್ನಾಧರಿಸಿ ಬರೆಯುವ ಸಾಹಿತಿ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರು, ಸಾಹಿತ್ಯಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸಲು ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಕ್ರಮ
ಎಸ್.ಎಲ್.ಬೈರಪ್ಪನವರ ಸ್ಮಾರಕ ನಿರ್ಮಾಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಹೇಳಿದರೆಂದು ಸ್ಮಾರಕ ನಿರ್ಮಿಸುವುದಿಲ್ಲ. ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಮೈಸೂರಿನಲ್ಲಿಯೇ ತಮ್ಮ ಜೀವಿತಾವಧಿಯನ್ನು ಕಳೆದಿದ್ದು, ವಿದ್ಯಾಭ್ಯಾಸ, ಸಾಹಿತ್ಯ ಕೃಷಿಯಲ್ಲಿ ನಡೆಸಿದ್ದರು ಎಂದರು.
ಇಂದು ಮೈಸೂರಿನಲ್ಲಿ ಅಂತಿಮ ದರ್ಶನ
ಬೆಂಗಳೂರಿನಿಂದ ಬೈರಪ್ಪನವರ ಪಾರ್ಥೀವ ಶರೀರ ಮೈಸೂರಿಗೆ ಆಗಮಿಸಿದ್ದು, ಕಲಾಮಂದಿರದ ಮುಂಭಾಗ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಚಾಮುಂಡಿ ಬೆಟ್ಟದ ಪಾದದಲ್ಲಿ ಇರುವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.


