ಮೈಸೂರು: ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಆಡಳಿತ ಯಂತ್ರ ಕುಸಿಯುತ್ತಿದೆ. ಯಾರಿಗೂ ಭಯವಿಲ್ಲ ಎನ್ನುವಂತ ವಾತಾವರಣ ಸೃಷ್ಟಿಯಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯದುವೀರ್, ದಸರಾ ಮುಗಿದ ಬಳಿಕವೂ ಹಬ್ಬದ ವಾತಾವರಣ ಇದೆ. ಆದರೆ ಎರಡು ದಿನಗಳಿಂದ ನಡೆದ ಘಟನೆಗಳು ಆತಂಕ ಉಂಟು ಮಾಡಿವೆ. ಮೈಸೂರು ಸ್ವಚ್ಛತೆ, ಒಳ್ಳೆಯ ಆಡಳಿತಕ್ಕೆ, ಶ್ರೀಮಂತ ಇತಿಹಾಸಕ್ಕೆ ಹೆಸರುವಾಸಿ. ಆದರೆ ಇತ್ತೀಚೆಗೆ ನಡೆದ ಘಟನೆಗಳು ಮೈಸೂರಿನ ಹೆಸರಿಕ್ಕೆ ಕಪ್ಪು ಚುಕ್ಕೆಯಾಗಿವೆ. ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಆಯಿತು. ನಂತರ ಮಹಾರಾಷ್ಟ್ರ ಪೊಲೀಸರು 340 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ ಮಾಡಿದರು. ಸಾಲು ಸಾಲು ಕೊಲೆಗಳು ಆದವು. ಈಗ ಅರಮನೆ ಮುಂಭಾಗ ಮೊನ್ನೆ ಒಂದು ಕೊಲೆ ಆಗಿದೆ. ನಿನ್ನೆ ಚಿಕ್ಕ ಮಗು ಮೇಲೆ ಅತ್ಯಾಚಾರ ಕೊಲೆಯಾಗಿದೆ ಇದೆಲ್ಲವನ್ನೂ ನೋಡುತ್ತಿದ್ದರೆ ಆತಂಕ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಲೂನ್ ಮಾರಾಟ ಮಾಡುವ ಮಗು ಮೇಲೆ ಹೀನ ಕೃತ್ಯ ಆಗಿದೆ. ಮೈಸೂರಿನಲ್ಲಿ ಇಂತಹ ಘಟನೆಗಳು ಈ ಹಿಂದೆ ಆಗಿಲ್ಲ. ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ನಗರದ ಹೃದಯ ಭಾಗದಲ್ಲೇ ಇಂತಹ ಘಟನೆಗಳು ನಡೆದರೆ ಹೇಗೆ. ಕಿಡಿಗೇಡಿಗಳಿಗೆ ಯಾವುದೇ ರೀತಿಯ ಭಯ ಇಲ್ಲ. ಸಿಎಂ ಸಿದ್ದರಾಮಯ್ಯ ಚುನಾವಣೆಯಲ್ಲಿ ಇದು ನನ್ನ ತವರು ಅಂತಾರೆ. ಇಂತಹ ಘಟನೆಗಳನ್ನು ಆಗದಂತೆ ತಡೆಯಲು ಆಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಇದು ಕಾಂಗ್ರೆಸ್ ನಾಯಕರ ದಸರಾ
ದಸರಾ ಪಾಸ್ ವಿಚಾರದಲ್ಲಿ ಗೊಂದಲ ಆಯಿತು. ಸಿಟ್ಟಿಂಗ್ ವ್ಯವಸ್ಥೆ ಕಡಿಮೆ ಮಾಡಿ ಪಾಸ್ ಹೆಚ್ಚು ಕೊಟ್ಟರು. ಪಾಸ್ ಇರೋರಿಗೂ ಅರಮನೆ ಒಳಗಡೆ ಬಿಡಲಿಲ್ಲ. ಇದು ಕೇವಲ ಕಾಂಗ್ರೆಸ್ ನಾಯಕರ ದಸರಾ ಆಯಿತು. ಜನ ಸಾಮಾನ್ಯರ ದಸರಾ ಆಗಲಿಲ್ಲ. ನಾಗರಿಕರಿಗೆ ಅನುಕೂಲ ಮಾಡಲಿಲ್ಲ. ಕೇವಲ ಉಳ್ಳವರ ದಸರಾ ದರ್ಬಾರ್ ಆಯಿತು ಎಂದು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಯದುವೀರ್ ವಾಗ್ದಾಳಿ ನಡೆಸಿದರು.
ಸ್ಥಳೀಯ ಜನಪ್ರತಿನಿಧಿಗಳಿಗೆ ಅನ್ಯಾಯ ಆಗಿದೆ
ಸ್ಥಳೀಯ ಚುನಾವಣೆಯ ಚುನಾವಣೆ ಆಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೆ ಅನ್ಯಾಯ ಆಗಿದೆ. ಪಾಲಿಕೆ ಚುನಾವಣೆ ನಡೆಸದೆ ಸರ್ಕಾರ ಕುಳಿತಿದೆ. ಕೇಂದ್ರದಿಂದ ಬಂದ ಹಣ ವಾಪಸ್ ಹೋಗಿದೆ. ಈ ರೀತಿ ಆದರೆ ಮೈಸೂರು ನಗರದ ಅಭಿವೃದ್ಧಿ ಹೇಗೆ ಸಾಧ್ಯ? ಯಾವಾಗಲೂ ಸಂವಿಧಾನ ಸಂವಿಧಾನ ಅಂತ ಹೇಳುತ್ತಾರೆ. ಆದರೆ ಸಂವಿಧಾನದ ಪ್ರಕಾರ ಆಡಳಿತ ಮಾಡುತ್ತಿಲ್ಲ. ಮೈಸೂರು ಪಾಲಿಕೆ ಶೀಘ್ರವೇ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಹೋರಾಟಕ್ಕೆ ಇಳಿಯುತ್ತೇವೆ ಎಂದು ಯದುವೀರ್ ಎಚ್ಚರಿಕೆ ಕೊಟ್ಟರು.


