Online News in ಕನ್ನಡ

ನನಗೆ ಅಧಿಕಾರ ಇದ್ದಿದ್ದರೆ ನಾನೇ ಕ್ರಮ ಕೈಗೊಳ್ಳುತ್ತಿದ್ದೆ; ಪ್ರಿಯಾಂಕ್‌

ಬೆಂಗಳೂರು: ನಾನು ಸರ್ಕಾರಿ ಸ್ಥಳಗಳಲ್ಲಿ ಆರ್‌ ಎಸ್‌ ಎಸ್‌ ಚಟುವಟಿಕೆ ಬೇಡ ಎಂದಿದ್ದೇನೆ. ಈ ಬಗ್ಗೆ ಸಿಎಂ ಗೆ ಪತ್ರವನ್ನೂ ಬರೆದಿದ್ದೇನೆ. ನನಗೆ ಅಧಿಕಾರ ಇದ್ದಿದ್ದರೆ ನಾನೇ ಆರ್‌ ಎಸ್‌ ಎಸ್‌ ಚಟುವಟಿಕೆಗಳನ್ನು ಸ್ಥಗಿತ ಮಾಡುತ್ತಿದ್ದೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಅ. 4ರಂದು ಪತ್ರ ಬರೆದು ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ ಎಸ್‌ ಚಟುವಟಿಕೆಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಇದೀಗ ಸಿಎಂ ಈ ಪತ್ರವನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗೆ ರವಾನೆ ಮಾಡಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಇದು ಈಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ತೆರೆದುಕೊಂಡಿದ್ದು, ಸಹಜವಾಗಿಯೇ ಬಿಜೆಪಿ ನಾಯಕರು ಪ್ರಿಯಾಂಕ್‌ ಖರ್ಗೆ ಅವರ ವಾದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ಆರ್‌ ಎಸ್‌ ಎಸ್‌ ಗೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸಂಘವೂ ಕೆಲವಾರು ಯೋಜನೆಗಳನ್ನು ಹಾಕಿಕೊಂಡು ಸಂಘಟನೆಯತ್ತ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ಈ ಪರ-ವಿರೋಧ ಚರ್ಚೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ನಾನು ಹಿಂದೂ, ಹಿಂದೂ ವಿರೋಧಿ ಅಲ್ಲ, ನಾನು ಆರ್ ಎಸ್ ಎಸ್ ವಿರೋಧಿ ಎಂದು ಹೇಳಿರುವ ಸಚಿವ ಪ್ರಿಯಾಂಕ್ ಖರ್ಗೆ,  ಬಿಜೆಪಿ ಆರ್ ಎಸ್ ಎಸ್ ನ ಕೈಗೊಂಬೆ. ಆರ್ ಎಸ್ ಎಸ್ ಇಲ್ಲದ ಬಿಜೆಪಿ ಶೂನ್ಯ. ಆರ್ ಎಸ್‌ ಎಸ್‌ ಕಾರ್ಯಕರ್ತರುಉ ಲಾಟಿ ಹಿಡಿದು ಓಡಾಡುವುದನ್ನ ನಿಲ್ಲಿಸಿ ತ್ರಿವರ್ಣಧ್ವಜ ಹಿಡಿದು ಓಡಾಡಿ. ಬೇರೆ ಸಂಘಟನೆಗಳು ದೊಣ್ಣೆ ಹಿಡಿದುಕೊಂಡು ಓಡಾಡಿದರೆ ಒಪ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಶಾಲೆಗಳಲ್ಲಿ ಆರ್ ಎಸ್ ಎಸ್ ನಿಂದ ಮಕ್ಕಳ ಬ್ರೈನ್‌ ವಾಶ್‌ ಮಾಡಲಾಗುತ್ತಿದೆ. ಇದು ನಿಲ್ಲಬೇಕು. ಅವರಿಗೆ ಇತಿಹಾಸ ಗೊತ್ತಿಲ್ಲದಿದ್ದರೆ ನಾನು ಪಾಠ ಮಾಡುತ್ತೇನೆ. ಸಂವಿಧಾನ ಬೇಡ ಮನಸ್ಮೃತಿ ಬೇಕು ಎನ್ನವವರು ದೇಶಭಕ್ತರಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಇದರೊಂದಿಗೆ ಕಾಂಗ್ರೆಸ್‌ ನ ಪ್ರಮುಖ ನಾಯಕರು ಪ್ರಿಯಾಂಕ್‌ ಖರ್ಗೆ ವಾದಕ್ಕೆ ಬೆಂಬಲವಾಗಿ ನಿಂತಿದ್ದಾರೆ.

 

Call Now Button