ಕೆ.ದೀಪಕ್,
ಪ್ರಧಾನ ಸಂಪಾದಕ, ವಿಜಯಕಾಲ
ಕಾಲಮಾನ-5
ಮೈಸೂರಲ್ಲಿ ಬುಧವಾರ ಹಿಂದೂ ಜಾಗೃತಾ ವೇದಿಕೆಯ ಹೆಸರಿನಲ್ಲಿ ಕಾರ್ಯಕ್ರಮ ನಡೆಯಿತು. `ಹಿಂದುತ್ವದ’ ಜಾಗೃತಿಗಾಗಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಭಾವಹಿಸಿದ್ದರು. ಮಾಮೂಲಿಯಂತೆ `ಹಿಂದೂ ಧರ್ಮದ ರಕ್ಷಣೆ ಆಗಬೇಕು’ ಎಂದು ಅಬ್ಬರಿಸಿ ಬೊಬ್ಬೆರೆದು ಭಾಷಣ ಮಾಡಿದ್ರು. ಮೈಸೂರಿನ ಒಂದಷ್ಟು ಗಣ್ಯಾತೀಗಣ್ಯರು, ಮಹಾ ಸ್ವಾಮೀಜಿಗಳು ಯತ್ನಾಳ್ ಅವರೊಂದಿಗೆ ಕಾಣಿಸಿಕೊಂಡರು. ಸಾಂಸ್ಕøತಿಕ ಕೇಂದ್ರ ಕಲಾಮಂದಿರ, ಮುಖ್ಯ ರಸ್ತೆಗಳು ಕೆಸರಿಮಯವಾಗಿತ್ತು. ಇದಕ್ಕೆ ನಮ್ಮದೇನೂ ತಕರಾರು ಇಲ್ಲ, ವಿರೋಧ ಇಲ್ಲವೇ ಇಲ್ಲ.
ಸಂವಿಧಾನದ ವಿಧಿ 25-28 ಪ್ರಕಾರ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಆತ ಬಯಸಿದ ಧರ್ಮವನ್ನು ಅನುಸರಿಸಬಹುದು, ಜೀವನದಲ್ಲಿ ಆಚಾರ ವಿಚಾರ ಪದ್ಧತಿಯನ್ನು ರೂಢಿಸಿಕೊಳ್ಳುವ ಸ್ವಾತಂತ್ರ ಮತ್ತು ಅವಕಾಶ ಇದೆ. ಹಾಗೆಯೇ ತಾನು ಪಾಲಿಸುತ್ತಿರುವ ಧರ್ಮ ಶ್ರೇಷ್ಠ ಎಂದು ಹೇಳಿಕೊಳ್ಳುವ ಹಕ್ಕು ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಹೇಗೆ ಅಂಧರಿಗೆ ಹೊರ ಲೋಕ ಕಾಣುವುದಿಲ್ಲ. ಹಾಗೆಯೇ ಮತಾಂಧರಿಗೆ ಅವರೊಳಗಿನ ದೋಷ ಗೋಚರಿಸುವುದಿಲ್ಲ. ಸುಳ್ಳು ಪೊಳ್ಳು ಹೇಳಿ ಮುಗ್ಧ ಜನರನ್ನು ಧಿಕ್ಕು ತಪ್ಪಿಸುವ ಕಲೆಗಾರಿಕೆ ಮಾತ್ರ ಗೊತ್ತಿರುತ್ತದೆ. ತಲೆಯೊಳಗೆ ಏನೂ ಇಲ್ಲದವನಿಗೆ `ಧರ್ಮ’ ಸದಾ ಜಾಗೃತವಾಗಿರುತ್ತದೆ. (ಎಲ್ಲ ಧರ್ಮಿಯರಿಗೂ ಅನ್ವಯ)
ವಿಷಯಕ್ಕೆ ಬರೋಣ… ಈಗ ಹಿಂದೂಗಳನ್ನು ಮತ್ತು ಹಿಂದೂ ಧರ್ಮವನ್ನು ರಕ್ಷಣೆ ಮಾಡಬೇಕೆಂದು ಬೊಬ್ಬೆ ಹೊಡೆಯುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್ ತಮ್ಮ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಹಿಂದೂ ಧರ್ಮದ ರಕ್ಷಣೆಗೆ ಮಾಡಿದ್ದೇನು ಎಂದು ಪರಾಮರ್ಶಿಸಿದರೆ ಉತ್ತರ `ಶೂನ್ಯ’. ಯತ್ನಾಳ್ ಅವರ ಪೊಲಿಟಿಕಲ್ ಟ್ರ್ಯಾಕ್ ರೆಕಾರ್ಡ್ ಗಮನಿಸಿದರೆ, ಅವರು ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದ್ದು, ಅಧಿಕಾರ ಗಿಟ್ಟದಿದ್ದಾಗ ಪಕ್ಷ ತೊರೆದದ್ದು, ಅವಕಾಶ ಕೊಟ್ಟ ನಾಯಕರನ್ನೇ ತೇಜೋವಧೆ ಮಾಡಿದ್ದು, ಸಂದರ್ಭಕ್ಕೆ ತಕ್ಕಂತೆ ವೇಷ ಬದಲಿಸಿದ್ದು, ಹಿಂದೂಗಳ ಓಲೈಕೆಗೆ ಮುಸ್ಲಿಂ-ಕ್ರೈಸ್ತರನ್ನು ಟೀಕಿಸೋದಷ್ಟೇ ಇವರ ರಾಜಕೀಯ ಸಾಧನೆಯಾಗಿದೆ.
ಇರಲಿ…ಬುಧವಾರ ನಡೆದ ಹಿಂದೂ ಜಾಗೃತಾ ವೇದಿಕೆಯ ಕಾರ್ಯಕ್ರಮದಲ್ಲಿ ಗೊತ್ತು, ಗುರಿ, ಉದ್ದೇಶ ಅಸ್ಪಷ್ಟವಾಗಿತ್ತು. ಸಮಾರಂಭದ ಉದ್ಘಾಟನಾ ಚಿತ್ರಗಳು ಗಮನಿಸಿದಾಗ ದೊಡ್ಡ ಆಚ್ಚರಿ ಕಾದಿತ್ತು. ವೇದಿಕೆಯ ಮುಂಭಾಗ ಅವಳವಡಿಸಿದ್ದ ಬ್ಯಾಕ್ ಡ್ರಾಪ್ ಫ್ಲೆಕ್ಸ್‍ನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಭಾವಚಿತ್ರವನ್ನು ಬಳಸಲಾಗಿತ್ತು. ಕುಲದ ನೆಲೆಯ ಬಲ್ಲಿರ ಎಂದು ಪ್ರಶ್ನಿಸಿದ ಸಮಾಜ ಸುಧಾರಕ ಕನಕದಾಸ ಶ್ರೇಷ್ಠರೂ ಇದ್ದರು. ರಾಮಾಯಣ ಬರೆದ ವಾಲ್ಮೀಕಿ ಋಷಿಗಳು ಮೊದಲಿಗರಾಗಿದ್ದರು. ಶಿವಾಜೀ ಮಹಾರಾಜರು ಕಡೆಯಲ್ಲಿ ರಾರಾಜಿಸುತ್ತಿದ್ದರು. ಇದನ್ನು ಗಮನಿಸಿದ ವೈಚಾರಿ ಪ್ರಜ್ಞೆಯುಳ್ಳ ಮನಸ್ಸುಗಳು ` ಶಿವಾಜಿ ಮಹಾರಾಜ ಓಕೆ -ಬುದ್ಧ ಬಸವ ಅಂಬೇಡ್ಕರ್ ಯಾಕೆ ? ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.
ಹಿಂದೂ ಧರ್ಮದ ರಕ್ಷಣೆಗೂ ಬುದ್ಧನ ಚಿಂತನೆಗಳಿಗೂ ಎತ್ತಿಂದೆತ್ತ ಸಂಬಂಧ ? ನಿಕಾಯಗಳಲ್ಲಿ ನೀಡಲಾದ ಸಂಭಾಷಣೆಗಳ ಪ್ರಕಾರ ಬುದ್ಧರು ವೇದಗಳನ್ನು ತಿರಸ್ಕರಿಸಿದ್ದರು. ಪಾಪ ಕರ್ಮ, ಸ್ವರ್ಗ, ನರಕ ಆತ್ಮಗಳನ್ನು ನಂಬಿದವರಲ್ಲ. ದೇವರಿಂದ ಮಾತ್ರ ಮನುಷ್ಯನಿಗೆ ಬೆಳಕು ಎಂದು ಹಿಂದೂ ಧರ್ಮ ಜನರನ್ನು ನಂಬಿಸಿದ್ದರೆ, ನಿನಗೆ ನೀನೇ ಬೆಳಕು ಎಂದು ಬುದ್ಧ ಬೋಧಿಸಿದ್ದಾರೆ. ಮತ್ತೊಂದೆಡೆ, ಹಿಂದೂ ಧರ್ಮದಲ್ಲಿರುವ ಜಾತಿ ಪದ್ಧತಿ, ಅಸಮಾನತೆ, ಅಸ್ಪøಶ್ಯತೆ, ಮೌಢ್ಯ, ಕಂದಾಚಾರ, ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದವರು ಮತ್ತೊಬ್ಬ ಕ್ರಾಂತಿಯೋಗಿ ಬಸವಣ್ಣ.
ವೇದಕ್ಕೆ ಒಡೆಯ ಕಟ್ಟುವೆ
ಶಾಸ್ತ್ರಕ್ಕೆ ನಿಗಳ ನಿಕ್ಕುವೆ
ಆಗಮದ ಮೂಗ ಕೊಯ್ಯುವೆ ನೋಡಯ್ಯ
ಮಹಾದಾನಿ ಕೂಡಲ ಸಂಗಮದೇವ
ಮಾದಾರಚನ್ನಯ್ಯನ ಮನೆಯ ಮಗ ನಾನಯ್ಯ
ಎಂದು ವೈದಿಕಶಾಹಿಗೆ ಸವಾಲು ಹಾಕಿ ಬಸವಣ್ಣನವರು ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಿದರು.
ಇಂತವರ ಭಾವಚಿತ್ರವನ್ನು ಹಿಂದೂ ಜಾಗೃತಿಗಾಗಿ ಬಳಸಿದ್ದು ವೈಚಾರಿಕ ಅಜ್ಞಾನ ಮತ್ತು ಸಮಯ ಸಾಧಕತನ ಎನ್ನದೆ ವಿಧಿಯಿಲ್ಲ.
ಇನ್ನು ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮದ ಅನಿಷ್ಠಗಳಿಂದಾಗಿ ನೋವುಂಡು, ಅವಮಾನಕ್ಕೆ ಒಳಗಾಗಿ `ಹಿಂದೂವಾಗಿ ಹುಟ್ಟಿದ್ದೇನೆ ಹಿಂದೂವಾಗಿ ಸಾಯುವುದಿಲ್ಲ’ ಎಂದು ಶಪಥ ಮಾಡಿ, ಅದರಂತೆಯೆ 1956, ಅಕ್ಟೋಬರ್ 14ರಂದು ನಾಗಪುರದಲ್ಲಿ ಬೌದ್ಧ ಧರ್ಮಕ್ಕೆ ಮರಳುತ್ತಾರೆ. ಅಂದು ಅವರು ಮಾಡಿದ ಐತಿಹಾಸಿಕ ಭಾಷಣದಲ್ಲಿ ` ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯುವುದಿಲ್ಲ ಎಂದ ಹೇಳಿದ್ದ ಮಾತು ನಿಜವಾಗಿದೆ. ನನಗೆ ಆನಂದವಾಗಿದೆ, ಪರಮಾನಂದವಾಗಿದೆ. ನಾನು ನರಕದಿಂದ ಹೊರಬಂದಿದ್ದೇನೆ.’ ಎಂದು ಘೋಷಿಸುತ್ತಾರೆ. `ನರಕ’ ಎಂದರೆ ಯಾವುದು ಎಂದು ಶೋಷಿತ ಸಮುದಾಯಗಳಿಗೆ ಅರ್ಥವಾಗಿದೆ.
ಒಟ್ಟಾರೆ, ಹಿಂದೂ ಧರ್ಮದ ಬಗ್ಗೆ ಸ್ಪಷ್ಟ ನಿಲುವು, ವೈಚಾರಿಕ ಸಂಘರ್ಷ, ಪರ್ಯಾಯ ಮಾರ್ಗಗಳನ್ನು ಕಂಡುಕೊಂಡ ಮಹಾನ್ ಸಮಾಜ ಸುಧಾರಕರ ಭಾವಚಿತ್ರವನ್ನು ಹಿಂದೂ ಧರ್ಮದ ಜಾಗೃತಿ ಕಾರ್ಯಕ್ರಮಕ್ಕೆ ಬಳಸಿಕೊಂಡಿದ್ದು ಈ ಮಹಾನ್ ನಾಯಕರಿಗೆ ಮಾಡಿದ ಅವಮಾನ ಮಾತ್ರವಲ್ಲ, ವೈಚಾರಿಕ ದಿವಾಳಿತನವನ್ನು ಪ್ರದರ್ಶಿಸಿ ಹಿಂದೂ ಧರ್ಮಕ್ಕೂ ಅಪಚಾರವೆಸಗಲಾಗಿದೆ. ತಮ್ಮ-ತಮ್ಮ ರಾಜಕೀಯ ಲಾಭಗಳಿಗಾಗಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ಇಂತಹ ಎಡಬಿಡಂಗಿಗಳ ಬಗ್ಗೆ ಹಿಂದೂಗಳು ಜಾಗೃತರಾಗಬೇಕಿದೆ.
ಯಾರು ಈ ಹಿಂದೂ ರಕ್ಷಕ ಯತ್ನಾಳ್ ?
1999ರಲ್ಲಿ ಬಿಜೆಪಿಯಿಂದ ಶಾಸಕರಾಗಿ ರಾಜಕೀಯ ಜೀವನ ಆರಂಭಿಸಿದ ಯತ್ನಾಳ್ 1999 ಮತ್ತು 2004ರಲ್ಲಿ ಬಿಜಾಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 2009ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದ ಕ್ಷೇತ್ರ ಕೈತಪ್ಪಿ ಸ್ಪರ್ಧೆಯ ಅವಕಾಶ ಕಳೆದುಕೊಂಡ ಅವರು, 2010ರಲ್ಲಿ ಜಾತ್ಯಾತೀತ ಜನತಾದಳ ಪಕ್ಷವನ್ನು ಸೇರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದರು. ಈ ಸಂದರ್ಭದಲ್ಲಿ ಹಿಂದೂ ಹುಲಿ ಯತ್ನಾಳ್ ಮುಸ್ಲಿಮರ ಟೋಪಿ ಹಾಕಿ ಅವರ ಮನೆ ಬಾಗಿಲುಗಳನ್ನು ಹತ್ತಿದರು, ಮಸೀದಿಗಳಿಗೆ ಭೇಟಿ ಕೊಟ್ಟು ಪ್ರಾರ್ಥನೆ ಮಾಡಿದ್ರು, ರಂಜಾನ್ ಇಫ್ತಿಯಾರ್ ಕೂಟಗಳಲ್ಲಿ ಭಾಗವಹಿಸಿದ್ದರು. ಈಗಲೂ ಮುಸ್ಲಿಂರ ಟೋಪಿ, ಶಾಲು ಧರಿಸಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ತದ ನಂತರದಲ್ಲಿ ಜನತಾದಳ (ಜಾತ್ಯಾತೀತ) ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಲಿಲ್ಲ ಎಂಬ ಕಾರಣಕ್ಕೆ ಆ ಪಕ್ಷದ ಹಿರಿಯ ನಾಯಕರನ್ನು ನಿಂಧಿಸಿ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡರು. ಆಗಲೂ ಪಕ್ಷಕ್ಕೆ ನಿಷ್ಠರಾಗಿರದೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ ಅವಳಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್. ಪಾಟೀಲ್ ಅವರೊಂದಿಗೆ ಸೇರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಇದರಿಂದಾಗಿ ಬಿಜೆಪಿಯು ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿತು.
ಮೂರು ವರ್ಷಗಳ ಬಳಿಕ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡ ಯತ್ನಾಳ್ 2018ರಲ್ಲಿ ಬಿಜಾಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 2020ರಲ್ಲಿ ಕನ್ನಡ ನಾಡಿನ ಹಿರಿಯ ಸ್ವಾತಂತ್ರ್ಯ ಸೇನಾನಿ ಹೆಚ್.ಎಸ್. ದೊರೆಸ್ವಾಮಿ ಅವರನ್ನು `ಪಾಲಿಸ್ತಾನದ ಏಜೆಂಟ್’ ಎಂದು ನಿಂಧಿಸಿ ವಿವಾದಕ್ಕೆ ಕಾರಣರಾದರು. 2023ರಲ್ಲಿ ಬಿಜಾಪುರ ಕ್ಷೇತ್ರದಿಂದ ವಿಧಾನಸಭೆಗೆ ಮರು ಆಯ್ಕೆಯಾದ ಯತ್ನಾಳ್ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಟೀಕಿಸುವುದನ್ನು `ಒನ್ ಪಾಯಿಂಟ್ ಅಜೆಂಡಾ’ ಮಾಡಿಕೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ವಿರೋಧಿಸಿದರು. ರಾಜಕೀಯ ಮರು ಜೀವ ಕೊಟ್ಟ ಬಿಜೆಪಿಯನ್ನು ಪದೇ ಪದೇ ಮುಜುಗರಕ್ಕೆ ಎಡೆಮಾಡಿದರು. ಪರಿಣಾಮ 2025ರಲ್ಲಿ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.


