Online News in ಕನ್ನಡ

ಜಗದಗಲ ಬೆಳಕ ಚೆಲ್ಲಿದ ‘ದಲಿತ ಸೂರ್ಯ’

* ಕೆ.ದೀಪಕ್

ಇಪ್ಪತ್ತನೆಯ ಶತಮಾನದಲ್ಲಿ ಭಾರತದಲ್ಲಿ ಪ್ರಜ್ವಲಿಸಿದ ಮಹಾನ್ ನಾಯಕರಲ್ಲಿ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಪ್ರಮುಖರು. ಇವರ ಪ್ರಭಾವವು ಇಪ್ಪತ್ತೊಂದನೇ ಶತಮಾನಕ್ಕೂ ವ್ಯಾಪಿಸಿದ್ದು ತಮ್ಮ ಜೀವನದುದ್ದಕ್ಕೂ ಶೋಷಿತ ಸಮುದಾಯಗಳ ಸ್ವಾಭೀಮಾನದ ಬದುಕಿಗಾಗಿ ಹೋರಾಡುತ್ತಾ,  ಭಾರತಕ್ಕೆ ಸದೃಢ ಸಂವಿಧಾನವನ್ನು‌ ಬರೆದು, ಕೊನೆಯಲ್ಲಿ ಭಾರತದಲ್ಲಿ ಬೌದ್ಧಧರ್ಮದ ಪುನರುಜ್ಜೀವನಕ್ಕಾರರಾಗಿ ಅವರು ಸಾಧಿಸಿದ ಬೆಳವಣಿಗೆ ಭೀಮ ಸದೃಶ್ಯವಾದದ್ದು.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ದಾಪೋಟಿ ತಾಲೂಕಿನಲ್ಲಿ ಅಸ್ಪೃಶ್ಯ ಮಹಾರ್ ಜನಾಂಗದಲ್ಲಿ 1891, ಏಪ್ರಿಲ್ 14ರಂದು ಜನಿಸಿದ ಅಂಬೇಡ್ಕರ್, ತಮ್ಮ ಜೀವನದ ಹಾದಿಯಲ್ಲಿ ಅನುಭವಿಸಿದ ದಾರುಣ ನೋವು, ಅಪಮಾನಗಳನ್ನು ಹೃದಯಸ್ಪರ್ಶಿಯಾಗಿ ದಾಖಲಿಸಿದ್ದಾರೆ. ಶಿಕ್ಷಣದ ಮೂಲಕವೇ ವಿಮೋಚನೆ ಸಾಧ್ಯವೆಂದು ಅರಿತಿದ್ದ ಇವರು, ಗಳಿಸಿದ ಪದವಿ, ಓದಿದ ಪರಿ, ತನ್ನ ಜನರ ನೋವು ಸಂಕಟವನ್ನು ಅಕ್ಷರ ರೂಪದಲ್ಲಿ ಬರೆದಿಟ್ಟಿದ್ದು  ಅನುಕರಣೀಯ.

ಡಾ. ಅಂಬೇಡ್ಕರ್ ಅವರ ಚಿಂತನೆಗಳಾದ ಜಾತಿಯ ನಿರಾಕರಣೆ, ಆತ್ಮಗೌರವದ ಬದುಕು, ಕಲಿಕೆಯ ಅವಕಾಶ, ಮಹಿಳಾ ಸಮಾನತೆ, ಮೌಡ್ಯ ಕಂದಾಚಾರ ತುಂಬಿದ ಧರ್ಮದ ತಿರಸ್ಕಾರ… ಇವು ಇಂದಿಗೂ ಚರ್ಚೆಗೆ, ವಿಮರ್ಶೆಗೆ, ಅನುಕರಣೆಗೆ  ಸವಾಲಾಗಿದೆ. ಈ ದೇಶದ ಅಸ್ಪೃಶ್ಯತೆ ಆಚರಣೆ ವಿರುದ್ಧ ಬಾಬಾ ಸಾಹೇಬರು ನಡೆಸಿದ ಅವಿರತ ಹೋರಾಟದ ಫಲವೇ ಇಂದು ಬಹುಜನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಈ ಎಲ್ಲ ವಿಚಾರಗಳನ್ನು ತಮ್ಮ ‘ಮೂಕ ನಾಯಕ’ ‘ ಬಹಿಷ್ಕೃತ ಭಾರತ’ ಪತ್ರಿಕೆಗಳಲ್ಲಿ ಪ್ರತಿಪಾದಿಸಿದ್ದಾರೆ.

‘ The Problem of Rupees ‘ ಸಂಶೋಧನ ಬರಹದ ಮೂಲಕ ಭಾರತದಲ್ಲಿ ಆರ್ಥಿಕ ವ್ಯವಸ್ಥೆಯು ಇಲ್ಲಿನ ಜಾತಿ ವ್ಯವಸ್ಥೆಯೊಂದಿಗೆ ತಳಕು ಹಾಕಿಕೊಂಡಿದೆ. ನಮ್ಮ ದೇಶದ ಬಹುಸಂಖ್ಯಾತ ದಲಿತರು ಬಡವರಾಗಿರಲು ಇಲ್ಲಿನ ಜಾತಿ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಉದ್ಯೋಗಗಳೇ ಕಾರಣ. ಅದಕ್ಕಾಗಿ ದಲಿತರಿಗೆ ಭೂಮಿ ಮತ್ತು ಕೈಗಾರಿಕೀಕರಣ ಅಗತ್ಯ ಎಂಬುವುದನ್ನು ಅಂಬೇಡ್ಕರ್ ಬಲವಾಗಿ ನಂಬಿದ್ದರು.

ಅಂಬೇಡ್ಕರ್ ಅವರು ಹಿಂದೂ ಧರ್ಮದ ಕಟು ಟೀಕಾರರಾಗಿದ್ದು ‘ ನಾನು ಖಂಡಿತಾ ಹಿಂದೂ ಆಗಿ ಸಾಯಲಾರೆ ‘ ಎಂದು ಘೋಷಿಸಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ 1956, ಅಕ್ಟೋಬರ್ 24 ರಂದು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ.  ಕೊನೆಯ ದಿನಗಳಲ್ಲಿ ತನ್ನ ಜನರ ವರ್ತನೆ, ನಡವಳಿಕೆಗಳಿಂದ ನೋವನ್ನುಂಡು ತಾವು ಕಟ್ಟಿ ಎಳೆದುಬಂದ  ‘ ವಿಮೋಚನೆ ‘ ರಥವನ್ನು ಮುನ್ನೆಡಸುವವರು ಯಾರು ? ಎಂದು ಪ್ರಶ್ನಿಸುತ್ತ ಕಣ್ಣೀರು ಹಾಕುತ್ತಾರೆ. ತಮ್ಮ ಬದುಕನ್ನೇ ಅಸ್ಪೃಶ್ಯ, ಶೋಷಿತ ಸಮುದಾಯಗಳಿಗೆ ಮುಡುಪಾಗಿಟ್ಟ ‘ದಲಿತ ಸೂರ್ಯ’ ಅಂಬೇಡ್ಕರ್ ಅವರು  1956, ಡಿಸೆಂಬರ್ 6ರಂದು ನಿಧನರಾಗುತ್ತಾರೆ. ಆದರೆ, ಇವರ ಪ್ರಭಾವಳಿ ಜಗತ್ತಿನಾದ್ಯಂತ ಇಂದಿಗೂ ಪ್ರಜ್ವಲಿಸುತ್ತಿದೆ.

Call Now Button