Online News in ಕನ್ನಡ

ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಎರಡು ವರ್ಷ ! ಸಿಎಂ ಸಿದ್ದರಾಮಯ್ಯ ಗೆದ್ರಾ…? ಬಿದ್ರಾ…?

ಕೆ.ದೀಪಕ್,

ಹಿರಿಯ ಪತ್ರಕರ್ತ, ಮೈಸೂರು.

ಇಡೀ ಸಮಾಜವು  ಜಾತಿ, ಧರ್ಮದ ಅಮಲಿನಲ್ಲಿ ತೇಲುತ್ತ, ರಣಕೇಕೆ ಹಾಕುತ್ತ ಮನುಷ್ಯ ಮನುಷ್ಯರ ನಡುವೆ ದ್ವೇಷ ಬಿತ್ತುತ್ತಿರುವ ಈ ಭೀಕರ ಸನ್ನಿವೇಶದಲ್ಲಿ ಸದ್ಯ ಕರ್ನಾಟಕದ ಆಡಳಿತದೊಳಗೆ ಸಮಾನತೆ, ಜಾತ್ಯಾತೀತತೆ, ಸಮಾಜವಾದಿ ಚಿಂತನೆಗಳನ್ನು  ಕಾಣುತ್ತಿರುವುದು ಪ್ರಜಾಪ್ರಭುತ್ವದ ಉಳಿವಿನ ಭರವಸೆಯನ್ನು ಹುಟ್ಟು ಹಾಕುತ್ತಿದೆ. ಇದನ್ನು ಸಾಕಾರಗೊಳಿಸಲು ಹೆಜ್ಜೆ ಹೆಜ್ಜೆಗೂ ಎದುರಾಗುತ್ತಿರುವ ಇಕ್ಕಟ್ಟು-ಬಿಕ್ಕಟ್ಟುಗಳನ್ನು ಮೆಟ್ಟಿ-ದಾಟಿ ಮುನ್ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕಾರಣದ ಸಂಧ್ಯಾ ಕಾಲದಲ್ಲಿ ಹಿರಿಯ ರಾಜಕಾರಣಿ ಎಂಬ ಇಮೇಜ್‍ನಿಂದ ಸಮಾಜ ಸುಧಾರಕರಾಗಿ ಪ್ರಸಿದ್ಧರಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ…ತಮ್ಮ ಆಡಳಿತದುದ್ದಕ್ಕೂ ನೀಡಿದ ದಿಟ್ಟ ಹೇಳಿಕೆಗಳು, ಸಮರ್ಥನೆಗಳು ಮತ್ತು ಕೈಗೊಂಡ ನಿರ್ಧಾರಗಳು ಮತ್ತು ಕಾರ್ಯಗತಗೊಳಿಸಿದ ಕಾರ್ಯಕ್ರಮಗಳು.

`ನಾನು ಯುದ್ಧವನ್ನು ವಿರೋಧಿಸುತ್ತೇನೆ’ ಎನ್ನುವ ಮಾತು ಬುದ್ಧನ ಪ್ರಜ್ಞೆಯೇ ಹೊರತು ಪಾಕಿಸ್ತಾನದ ಪರವಾದ ಹೇಳಿಕೆ ಅಲ್ಲ ಎಂದು ಅರ್ಥ ಮಾಡಿಕೊಳ್ಳಲು ಸಣ್ಣ ಮನುಷ್ಯರಿಂದ ಸಾಧ್ಯವಿಲ್ಲ. ಸಂಕುಚಿತ ಮನಸ್ಸು, ಸೀಮಿತ ಬುದ್ಧಿಮತೆಯ ಮಂದಿಗಳು ಮಾತ್ರ ಈ ವಿಷಯದಲ್ಲಿ ಸಿದ್ದರಾಮಯ್ಯ ಅವರನ್ನು ವಿರೋಧಿಸಬಹುದು ಅಷ್ಟೆ. ಅಂದು ರೋಹಿಣಿ ನದಿ ನೀರಿಗೆ ಹುಲಿಯಾ-ಶಾಕ್ಯಾರ ನಡುವೆ ಯುದ್ಧ ಘೋಷಣೆಯಾದಾಗ ಇದನ್ನು ವಿರೋಧಿಸಿದ್ಧ ಬುದ್ಧ ದೇಶ ಭ್ರಷ್ಟ ಎಂಬ ಕಳಂಕಕ್ಕೆ ಗುರಿಯಾಗಿದ್ದರು. ಆದರೆ, ಇಂದು ಇಡೀ ಜಗತ್ತು ಬುದ್ಧನನ್ನು ಒಪ್ಪಿಕೊಂಡಿದೆ, `ಯುದ್ಧ ಬೇಡ-ಬುದ್ಧ ಬೇಕು’ ಎಂಬ ಸಾರಿ ಹೇಳುತ್ತಿದೆ. ಸಿದ್ದರಾಮಯ್ಯ ಅವರ ಯುದ್ಧ ವಿರೋಧಿ ಹೇಳಿಕೆಯನ್ನು ಇಂಡಿಯಾ-ಪಾಕಿಸ್ತಾನಕ್ಕೆ ಸೀಮಿತಗೊಳಿಸಿ ದೇಶ ಭ್ರಷ್ಟ ಕಳಂಕವನ್ನು ಹೊರಿಸಲು ನಡೆದ ರಾಜಕೀಯ ಷಡ್ಯಂತರಕ್ಕೆ ಇಂದು, ನಾಳೆ, ನಾಳಿದ್ದು ಉತ್ತರ ಸಿಗಲಾರದು. ಆದರೆ, ಕಾಲವೇ ಇದಕ್ಕೆ ಉತ್ತರ ನೀಡುವುದಂತ್ತೂ ದಿಟ.

ಇನ್ನು ಎಲ್ಲ ಸರಕಾರಗಳಲ್ಲೂ ಜನಪ್ರಿಯ ಕಾರ್ಯಕ್ರಮಗಳು ಘೋಷಣೆ ಆಗುವುದನ್ನು ಸರ್ವೆಸಾಮಾನ್ಯ. ಒಂದೊಂದು ಸ್ವರೂಪದ ಸರಕಾರಗಳು ಬಂದಾಗ ಜನ ಕಲ್ಯಾಣ ಯೋಜನೆಗಳು ಹೊಸ  ರೂಪ-ನಾಮದಲ್ಲಿ ಯೋಜನೆಗಳು ಅನುಷ್ಠಾನಕ್ಕೆ ಬಂದಿದೆ. ಶಿಕ್ಷಣ, ಅನುಧಾನ, ಭವನ, ರಸ್ತೆ, ನೀರು, ಸೂರು…ಎಲ್ಲ ಸರಕಾರಗಳಲ್ಲೂ ಹೆಚ್ಚು ಕಡಿಮೆ ಕಾರ್ಯಗತಗೊಂಡಿದೆ. ಟೀಕೆ-ಠಿಪ್ಪಣಿ, ಆರೋಪ-ಅಪಾಧನೆಗಳು ಈಗ ರಾಜಕಾರಣಕ್ಕೆ ಅಲಂಕಾರವಾಗಿದ್ದು, ಅಧಿಕಾರ ಪಡೆಯಲು ಮತ್ತು ಉಳಿಸಿಕೊಳ್ಳಲು `ಕೌಂಟರ್ ಪಾಲಿಟಿಕ್ಸ್’ ಮಾಡಲೇ ಬೇಕಾದ ಅನಿವಾರ್ಯತೆಯಿಂದ ಯಾರೂ ಹೊರತಾಗಿಲ್ಲ. ಆದರೆ, ವೈಜ್ಞಾರಿಕವಾಗಿ ಮತ್ತು ಸೈದ್ಧಾಂತಿಕವಾಗಿ ಸ್ಪಷ್ಟತೆಯನ್ನು ಹೊಂದಿದ ರಾಜಕಾರಣ ಮತ್ತು ರಾಜಕಾರಣಿಯನ್ನು ಕಾಣಲಾಗದ ಇಂದಿನ ಕಾಲಮಾನದಲ್ಲಿ ಕೋಮುವಾದದ ವಿರುದ್ಧ ರಾಜಿರಹಿತ ಧ್ವನಿಯಾಗಿ, ಮೌಡ್ಯ, ಕಂದಾಚಾರದ ಸೋಂಕನ್ನು ಮೈಗಂಟಿಸಿಕೊಳ್ಳದೆ ಜಾತ್ಯಾತೀತ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸಿಕೊಂಡು ಬಂದವರು ಈ ಸೆಕ್ಯೂಲರ್ ಸಿದ್ದರಾಮಯ್ಯ.

ಒಂದೆಡೆ ಜಾತಿಗ್ರಸ್ಥ ಸಮಾಜ ಮತ್ತೊಂದೆಡೆ ಧರ್ಮ ಮತಾಂಧತೆಯಲ್ಲಿ ಮುಳುಗಿದ ದೇಶ, ಇಂತಹ ನೆಲದಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ ಏನು ತಪ್ಪು ? ಎಂದು ಕೇಳಿದ ಪ್ರಶ್ನೆ, ಚಾಮರಾಜನಗರದಲ್ಲಿ ಮಂತ್ರಿ ಮಂಡಲದ ಕ್ಯಾಬಿನೆಟ್ ಸಭೆ ನಡೆಸಿ ಅಧಿಕಾರ ಕಳೆದುಕೊಳ್ಳುವ ಕಳಂಕವನ್ನು ಹುಸಿ ಮಾಡಿದ್ದು, ಹಸಿರು ಮುಕ್ಕಳಿಸುವ ಕಾನನದಲ್ಲಿ ಕೆಂಪು ಹಣತೆಯ ಗೂಡು ಕಟ್ಟಿಕೊಂಡು ಕ್ರಾಂತಿಯ ಹಾಡು ಹಾಡುತ್ತಿದ್ದ ನಕ್ಸಲರ ಶರಣಾಗತಿಯ ದಿಟ್ಟ ಹೆಜ್ಜೆ, ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಬೋಧನೆ ನಿರ್ಧಾರ, ಅಪ್ರತಿಮ ಹೋರಾಟಗಾರ ಮೈಸೂರು ಹುಲಿ ಟಿಪ್ಪು ಸುಲ್ತಾನ್‍ರವರ ಜಯಂತಿ ಆಚರಣೆಯ ಸಮರ್ಥನೆ, ಸಮ ಸಮಾಜ ನಿರ್ಮಾಣಕ್ಕೆ ಒಳ ಮೀಸಲಾತಿ ಜಾರಿಗೆ ಜಾತಿ ಜನಗಣತಿಗೆ ತೀರ್ಮಾನ ಕೈಗೊಳ್ಳುವುದು ಬರೆದಷ್ಟು, ಭಾಷಣ ಮಾಡಿದ್ದಷ್ಟು ಸುಲಭದ ಮಾತಲ್ಲ. ಇಷ್ಟೆಲ್ಲದರ ನಡುವೆ, ಮಾಧ್ಯಮವನ್ನೂ ಉದ್ದೇಶಿಸಿ `ನಾನೂ ತಪ್ಪು ಮಾಡಿದ್ರೆ ಬರೀರಿ…’ ಎಂದು ಕರೆಕೊಟ್ಟ ಪರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಜಾಪ್ರಭುತ್ವದೊಳಗಿನ ಅಭಿವ್ಯಕ್ತಿ ಪ್ರೇಮಕ್ಕೆ ಸಾಕ್ಷಿಯಾಗಿದೆ.

ಒಟ್ಟಾರೆ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ದಾಖಲೆ ಬರೆಯುತ್ತಾರೋ ಇಲ್ಲವೋ ಗೊತ್ತಿಲ್ಲ, ಇವರು ಎಷ್ಟು ಬಜೆಟ್ ಮಂಡಿಸಿದ್ರು ಎಂಬ ಸಂಖ್ಯೆ ಮುಖ್ಯವಲ್ಲ. ಯಾವ ಯಾವ ಜಾತಿ ಧರ್ಮಕ್ಕೆ ಎಷ್ಟೆಷ್ಟು ಅನುದಾನ ನೀಡಿದ್ದಾರೆ ಎಂಬ ಲೆಕ್ಕ ಬೇಕಾಗಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕಾಣುತ್ತಿರುವ ಬುದ್ಧನ ಕರುಣೆ, ಬಸವಣ್ಣನ ಸಮಾನತೆಯ ಸೆಲೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯ ಕಿಡಿ ಪ್ರಭುದ್ಧ ಭಾರತದ ನಿರ್ಮಾಣದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಲಿದೆ.

Call Now Button