ಬೆಂಗಳೂರು: `ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ’ ಎಂದು ಹೇಳುತ್ತಲೇ ತಮ್ಮ ತಮ್ಮ ರಾಜಕೀಯ ದಾಳವನ್ನು ಉರುಳಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರವೂ ಅನೇಕ ಬೆಳವಣಿಗೆಗೆ ರಾಜ್ಯ ಸಾಕ್ಷಿಯಾಯಿತು. ಒಂದೆಡೆ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಎಲ್ಲವೂ ಸರಿ ಇರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದೇಶ ರವಾನಿಸುತ್ತಿದ್ದು, ಮತ್ತೊಂದೆಡೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಬೆಂಬಲಿಗ ಶಾಸಕರ ನಿಯೋಗವನ್ನು ದೆಹಲಿಗೆ ಕಳುಹಿಸಿ ವರಿಷ್ಠರ ಮೇಲೆ ಒತ್ತಡದ ತಂತ್ರ ಪ್ರಯೋಗಿಸುತ್ತಿದ್ದಾರೆ. ರಾಜ್ಯಕ್ಕೆ ಆಗಮಿಸಿ ಮುಖ್ಯಮಂತ್ರಿ ಸೇರಿದಂತೆ ವಿವಿಧ ನಾಯಕರೊಂದಿಗೆ ಚರ್ಚೆ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, `ನನ್ನ ಹತ್ರ ಹೇಳೋಕೆ ಏನೂ ಇಲ್ಲ, ಎಲ್ಲ ಹೈಕಮಾಂಡ್ ನಿರ್ಧರಿಸಲಿದೆ’ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ನವ ದೆಹಲಿಗೆ ತೆರಳಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ವರಿಷ್ಠರ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ. ಆನಂತರವಷ್ಟೆ ಹೈಕಮಾಂಡ್ ನಿಂದ ಸೂಚನೆ ಹೊರ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಕರ್ನಾಟಕದ ಚಿತ್ತ ದೆಹಲಿಯತ್ತ ನೆಟ್ಟಿದೆ.
ಚಿಕ್ಕಬಳ್ಳಾಪುರ: ಹೈಕಮಾಂಡ್ ಹೇಳಿದಂತೆ ಎಲ್ಲರೂ ಕೇಳಬೇಕು. ಹೈಕಮಾಂಡ್ ನನ್ನನ್ನು ಮುಂದುವರೆಯಿರಿ ಎಂದರೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ಹೈಕಮಾಂಡ್ ಅಂತ ಇದೆ. ಯಾವುದೇ ವಿಷಯವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಮಾತನ್ನು ಎಲ್ಲ ನಾಯಕರು ಕೇಳಬೇಕು, ನಾನೂ ಕೇಳಬೇಕು ಮತ್ತು ಡಿ.ಕೆ.ಶಿವಕುಮಾರ್ ಸಹ ಕೇಳಬೇಕು.
ಐದು ತಿಂಗಳ ಹಿಂದೆ ನಾನೇ ದೆಹಲಿಗೆ ಹೋಗಿದ್ದ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ವರಿಷ್ಠರಿಗೆ ಕೇಳಿದ್ದೆ. ಅವರು ಎರಡೂವರೆ ವರ್ಷ ಕಳೆಯಲಿ ಎಂದು ಹೇಳಿದ್ದರು. ಅದರಂತೆ ನಾನು ನಡೆದುಕೊಂಡೆ. ಈಗಲೂ ಸಹ ಹೈಕಮಾಂಡ್ ಹೇಳಿದಂತೆ ನಡೆಯಬೇಕು. ಅವರು ನನ್ನನ್ನು ಮುಂದುವರೆಯಿರಿ ಎಂದು ಹೇಳಿದರೆ ಮುಂದುವರೆಯುತ್ತೇನೆ
– ಸಿದ್ದರಾಮಯ್ಯ, ಮುಖ್ಯಮಂತ್ರಿ
ನವೆಂಬರ್ನಲ್ಲಿ ಯಾವ ಕ್ರಾಂತಿಯೂ ಆಗುವುದಿಲ್ಲ ಎಂದು ಹೇಳುತ್ತಿದ್ದ ನಾಯಕರು ಇದೀಗ ತಮ್ಮ ಮಾತಿನ ವರಸೆ ಬದಲಾಯಿಸುತ್ತಿದ್ದಾರೆ. ಮೊನ್ನೆ ಮೊನ್ನೆಯವರೆಗೂ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ` ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಿರಿ’ ಎಂದು ಹೇಳಿದರೆ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳು ಹಿರಿಯರಿದ್ದಾರೆ, ಅವರ ಮಾತನ್ನು ನಾನು ಒಪ್ಪುತ್ತೇನೆ. ನಾನೂ ಹೈಕಮಾಂಡ್ ಹೇಳಿದಂತೆ ಕೇಳಬೇಕು. ಅವರು ನಮ್ಮ ಪಕ್ಷದ ಆಸ್ತಿ ಎಂದು ಪ್ರತಿಕ್ರಿಯಿಸಿದ್ದಾರೆ. ಈನಡುವೆ, ಕಳೆದ ರಾತ್ರಿ ಕಾಂಗ್ರೆಸ್ ಸರಕಾರದ ಹಿರಿಯ ಸಚಿವರಾದ ಟಿ.ಜೆ.ಜಾರ್ಜ್ ಅವರನ್ನು ರಹಸ್ಯವಾಗಿ ಭೇಟಿ ಮಾಡಿರುವ ಡಿಸಿಎಂ ಶಿವಕುಮಾರ್ ಸರಕಾರ ರಚನೆಯ ವೇಳೆ ನಡೆದಿರುವ ಮಾತುಕತೆ, ಭರವಸೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.
ರಾಹುಲ್ ಭೇಟಿ ಮಾಡಿದ ಬಿ.ಕೆ.ಹರಿಪ್ರಸಾದ್:
ಅಚ್ಚರಿಯ ಬೆಳವಣಿಗೆಯಲ್ಲಿ ಸೋಮವಾರ ಕಾಂಗ್ರೆಸ್ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ದೆಹಲಿಯಲ್ಲಿ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಡಿಸಿಎಂ ಪ್ರಯತ್ನಿಸುತ್ತಿದ್ದಾಗಿಯೂ ಸಾಧ್ಯವಾಗದಿದ್ದಾಗ, ದಿಢೀರ್ ಬೆಳವಣಿಗೆಯಲ್ಲಿ ಬಿ.ಕೆ.ಹರಿಪ್ರಸಾದ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭೇಟಿಯ ವೇಳೆ ರಾಜ್ಯ ರಾಜಕಾರಣ ಬಗ್ಗೆ ರಾಹುಲ್ ಗಾಂಧಿ ಸಮಗ್ರ ಮಾಹಿತಿ ಪಡೆದಿದ್ದಾರೆ ಎಂದು ಹೇಳಲಾಗಿದೆ.


