Online News in ಕನ್ನಡ

ಕೋಲ್ಕತಾದ ಮೈಸೂರು ಉದ್ಯಾನದಲ್ಲಿ 10ನೇ ಚಾಮರಾಜ ಒಡೆಯರ್ ಮಾಹಿತಿ ಫಲಕಕ್ಕೆ ಮನವಿ

ಮೈಸೂರು : ಮೈಸೂರು ಕೇಂದ್ರಿತ ಕಾಯಕ ಪ್ರತಿಷ್ಠಾನವು ದಕ್ಷಿಣ ಕರ್ನಾಟಕದಲ್ಲಿ ಶಿಕ್ಷಣ ಹಾಗೂ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಟ್ರಸ್ಟ್ ಮೈಸೂರಿನಲ್ಲಿರುವ ಒಂದು ಟ್ರಸ್ಟ್ ಆಗಿದ್ದು, ಇದು ಶಿಕ್ಷಣ, ಸಂಸ್ಕೃತಿ, ಜಾನಪದ, ಪಾರಂಪರಿಕ ಮೌಲ್ಯಗಳ ಮಹತ್ವದ ಪ್ರಸಾರ ಹಾಗೂ ಐತಿಹಾಸಿಕ ಸ್ಥಳಗಳ ಜಾಗೃತಿ ಹಾಗೂ ಸಂರಕ್ಷಣೆ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಬರುತ್ತಿದೆ.
ಮೈಸೂರು ರಾಜಮನೆತನದ 10ನೇ ಚಾಮರಾಜೇಂದ್ರ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ 1881- 1947 ಅವಧಿಯು ಭಾರತೀಯ ಇತಿಹಾಸದಲ್ಲೂ ಸುವರ್ಣಾಕ್ಷರಗಳಲ್ಲಿ ಬರೆದಿರುವ ಯುಗ. ಆ ದಿನಗಳಲ್ಲಿ ಆಧುನಿಕ ಮೈಸೂರು ಸಂಸ್ಥಾನವು ಭಾರತದ ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿತ್ತು.
1911 ರವರೆಗೆ ಕಲ್ಕತ್ತಾ ಬ್ರಿಟಿಷ್ ರಾಜರ ರಾಜಧಾನಿಯಾಗಿತ್ತು. ಆ ದಿನಗಳಲ್ಲಿಯೇ 10ನೇ ಚಾಮರಾಜೇಂದ್ರ ಒಡೆಯರ್ ಅವರು ಆಗಿನ ಗವರ್ನರ್ ಜನರಲ್ ಅವರನ್ನು ಭೇಟಿ ಮಾಡಲು ಕಲ್ಕತ್ತಾಗೆ ಹೋಗಿದ್ದರು.ಆಗ
ಇದ್ದಕ್ಕಿದ್ದಂತೆ ಅವರು ಡಿಫ್ತೀರಿಯಾದಿಂದ ಅನಾರೋಗ್ಯಕ್ಕೆ ತುತ್ತಾಗಿ 1894ನೇ ಡಿಸೆಂಬರ್ 28 ರಂದು ಕಲ್ಕತ್ತಾದಲ್ಲಿ ನಿಧನರಾದರು.
ಅವರ ದೇಹವನ್ನು ಸಹನಗರದ ಟೋಲಿಗುಂಜ್ ಕಿರೋತಲ ಘಾಟ್ ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಈ ಜಾಗವನ್ನು ಮೈಸೂರು ಉದ್ಯಾನವನ ಎಂದೇ ಕರೆಯಲಾಗುತ್ತಿದೆ.
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಜನರಿಗೆ ಮೈಸೂರಿನ ರಾಜವಂಶಸ್ಥರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಇದೆ.

“ಕೋಲ್ಕತಾದಲ್ಲಿರುವ ‘ಮೈಸೂರು ಉದ್ಯಾನ’ದ ಬಳಿ 10ನೇ ಚಾಮರಾಜ ಒಡೆಯರ್ ಅವರ ಮಾಹಿತಿ ಫಲಕ ಅಳವಡಿಸಲು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್. ರಘು (ಕೌಟಿಲ್ಯ )ಅವರು ಕೋಲ್ಕತಾ ಮುನ್ಸಿಪಲ್ ಆಯುಕ್ತರಿಗೆ ತಮ್ಮ ನೈಪುಣ್ಯ ಶಿಕ್ಷಣ ಸಂಸ್ಥೆಯ ಕಾಯಕ ಪ್ರತಿಷ್ಠಾನದ ಮುಖೇನ ಮನವಿ ಸಲ್ಲಿಸಿದ್ದಾರೆ.”

10ನೇ ಚಾಮರಾಜೇಂದ್ರ ಒಡೆಯರ್ ಅವರಂತೂ ದಾರ್ಶನಿಕ ಆಡಳಿತಗಾರರಾಗಿದ್ದರು, ಆಧುನಿಕ ಮೈಸೂರು ರಾಜ್ಯ ನಿರ್ಮಾಣದಲ್ಲಿ ಅವರ ಪಾತ್ರ ಗಮನಾರ್ಹ. 1881 ರಲ್ಲಿ ಅವರು ಸ್ಥಾಪಿಸಿದ ಮೈಸೂರು ಪ್ರತಿನಿಧಿ ಸಭೆ ಪ್ರಜಾಪ್ರಭುತ್ವದ ಅಡಿಗಲ್ಲು. 1893ರಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ನಗರಕ್ಕೆ ತೆರಳಿದಾಗ, ಅದಕ್ಕೆ ನೆರವು ನೀಡಿದ್ದರು. ಇದೆಲ್ಲವನ್ನೂ ಭಾರತೀಯರು ಮರೆಯುವುದಿಲ್ಲ, ಮರೆಯಲಾಗದೂ ಕೂಡ.
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕೋಲ್ಕತಾಗೆ ಭೇಟಿ ನೀಡುತ್ತಿದ್ದು, ಈ ಪೈಕಿ ಬಹುತೇಕರು ಮೈಸೂರು ಉದ್ಯಾನಕ್ಕೂ ಭೇಟಿ ನೀಡಿತ್ತಾರೆ. ಆದರೆ, ಆ ಉದ್ಯಾನದಲ್ಲಿ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ಕುರಿತು ಸಮಾಧಿ ಸ್ಥಳದ ಮಹತ್ವ ಸೇರಿದಂತೆ ಯಾವುದೇ ಮಾಹಿತಿಯೂ ಸಿಗುತ್ತಿಲ್ಲ. ಸಂದರ್ಶಕರಿಗೆ ತಿಳಿಸಲು ಕನಿಷ್ಠ ಪಕ್ಷ ಸೂಚನಾ ಫಲಕವೂ ಇಲ್ಲ.
ಹಾಗಾಗಿ 10ನೇ ಚಾಮರಾಜೇಂದ್ರ ಒಡೆಯರ್ ಅವ ಜೀವನ ಮತ್ತು ಅವರ ಸಾಧನೆಗಳ ಬಗ್ಗೆ ಬಂಗಾಳಿ, ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಸೇರಿ 4 ಭಾಷೆಗಳಲ್ಲಿ ಮಾಹಿತಿ ನೀಡುವ ತುರ್ತು ಇದೆ. ನಮ್ಮ ಟ್ರಸ್ಟ್ ಸ್ವಂತ ಖರ್ಚಿನಲ್ಲಿಯೇ ಮಾಹಿತಿ ಫಲಕವನ್ನು ಅಳವಡಿಸಲು ಉತ್ಸುಕವಾಗಿದೆ.
ಪಶ್ಚಿಮ ಬಂಗಾಳ ಸರಕಾರ, ಸ್ಥಳೀಯ ಪಾಲಿಕೆ ಆಡಳಿತ ನಮಗೆ ಅನುಮತಿ ನೀಡುವಂತೆ ಕೋರಿಕೊಳ್ಳುತ್ತೇನೆ. ಈ ವ್ಯವಸ್ಥೆಯನ್ನು ನಗರ ಪಾಲಿಕೆಯೇ ಮಾಡಿದರೂ ಸಂತೋಷ. ಈ ಸ್ಮಾರಕವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕೆಂದು ಕೋರುವೆ.
ಈ ಉಪಕ್ರಮವು ಕೋಲ್ಕತಾಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಮೈಸೂರು ರಾಜಮನೆತನದ ಬಗ್ಗೆ ಅರಿವು ಮೂಡಿಸಲು, ಪಾರಂಪರಿಕ ತಾಣದ ಸಂರಕ್ಷಿಸಲು ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಹಾಯ ಮಾಡುತ್ತದೆ ಎಂದು ರಘು ಕೋಲ್ಕತಾ
ಮುನ್ಸಿಪಲ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

Call Now Button