Online News in ಕನ್ನಡ

ಮಳವಳ್ಳಿ: ಜೆಎಸ್‌ಎಸ್‌ ಜಯಂತಿಯಲ್ಲಿ ಭಾಗವಹಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಮಂಡ್ಯ/ಮೈಸೂರು: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆಯುತ್ತಿರುವ ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಮೋಗಿಗಳವರ ೧೦೬೬ನೇ ಜಯಂತಿ ಮಹೋತ್ಸವದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಿದ್ದಾರೆ.

ಇದಕ್ಕು ಮುನ್ನ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಬೃಹತ್‌ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್‌ ಸ್ವಾಗತಿಸಿದರು. ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ, ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್‌ ಹಾಜರಿದ್ದರು. ನಂತರ ವಾಯುಸೇನೆಯ ವಿಮಾನದಲ್ಲಿ ಮಳವಳ್ಳಿ ತಲುಪಿದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.‌ ಚಲುವರಾಯಸ್ವಾಮಿ ಮತ್ತು ಜಿಲ್ಲಾಧಿಕಾರಿ ಕುಮಾರ್‌ ಅವರು ರಾಷ್ಟ್ರಪತಿಗಳನ್ನು ಬರಮಾಡಿಕೊಂಡರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಶಾಸಕ ನರೇಂದ್ರ ಸ್ವಾಮಿ ಸೇರಿದಂತೆ ಅನೇಕ ಮಠಾಧಿಪತಿಗಳು ಭಾಗವಹಿಸಿದ್ದರು.
ಇದಕ್ಕು ಮುನ್ನ ಬೆಳಗ್ಗೆ ಧ್ವಜಾರೋಹಣ ಮತ್ತು ಮಹನೀಯರ ಹೆಸರಿನಲ್ಲಿ ದ್ವಾರಗಳ ಉದ್ಘಾಟನೆ ನಡೆಯಿತು. ರಾಷ್ಟ್ರಪತಿಗಳ ಆಗಮನದ ಹಿನ್ನಲ್ಲೆಯಲ್ಲಿ ಮಳವಳ್ಳಿ ಪಟ್ಟಣ ಮದುವಣಗಿತ್ತಿಯಂತೆ ಕಂಗೋಳಿಸುತ್ತಿದ್ದು, ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Call Now Button