ಶ್ರೀರಂಗಪಟ್ಟಣ, ಏ. 30, ಮನುಷ್ಯರನ್ನು ಕೊಲ್ಲುವ ಜನರು ಯಾವ ಧರ್ಮಕ್ಕೂ ಸೇರುವುದಿಲ್ಲ. ಅವರು ಕೇವಲ ಕೊಲೆಗಡುಕರು. ಭಯೋತ್ಪಾದಕರು ಪ್ರತಿಪಾದಿಸುವ ಮುಸ್ಲಿಂ ಧರ್ಮವೇ ಬೇರೆ, ನಾವು ನಂಬಿರುವ ಮುಸ್ಲಿಂ ಧರ್ಮವೇ ಬೇರೆ ಎಂದು ಖ್ಯಾತ ಮಹಿಳಾ ಸಾಹಿತಿ ಬಾನು ಮುಸ್ತಾಕ್ ಅಭಿಪ್ರಾಯ ಪಟ್ಟರು.
ಶ್ರೀರಂಗಪಟ್ಟಣದ ಮುಸ್ಲಿಂ ಸೌಹಾರ್ದ ಒಕ್ಕೂಟದ ವತಿಯಿಂದ ಇಂದು ಇಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸಾಲಿನ ‘ ಸೌಹಾರ್ದ ಸೇತು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕಾಶ್ಮೀರದ ಪಹಲ್ಗಾಮ್ ನಲ್ಲಿ ಮನುಷ್ಯರನ್ನು ಕೊಂದ ಉಗ್ರರು ಯಾವ ಧರ್ಮಕ್ಕೂ ಸೇರುವುದಿಲ್ಲ. ಅವರು ಕೊಲೆಗಡುಕರು ಅಷ್ಟೆ ಎಂದು ತಿಳಿಸಿದರು.
ಹಿಂದೂ ಧರ್ಮದಲ್ಲಿ ಕಂಡುಬರುವ ಎಲ್ಲ ಭಾವ – ಸಾರಗಳು ಹಾಗೂ ಮುಸ್ಲಿಂ ಕ್ರೈಸ್ತ ಧರ್ಮದಲ್ಲಿ ಇರುವ ಭಾವ ಸಾರಗಳು ಒಂದೆ. ಎಲ್ಲ ಧರ್ಮಗಳು ಮನುಷ್ಯರನ್ನು ಪ್ರೀತಿಸುವುದನ್ನೇ ಹೇಳಿಕೊಟ್ಟಿವೆ. ಆದರೆ, ಈ ದೇಶದ ರಾಜಕಾರಣ ಮನುಷ್ಯರನ್ನು ಒಡೆದು ಆಳಲು ಮುಂದಾಗಿದೆ. ಇದರಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಿದೆ ಎಂದು ವಿಷಾದಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಗಾಂಧಿವಾದಿ ಡಾ. ಸುಜಯ್ ಕುಮಾರ್, ಡಾ. ಟಿಪ್ಪು ಸುಲ್ತಾನ್, ಪೈ. ಗಿರೀಶ್ ಅವರಿಗೆ ಸೌಹಾರ್ದ ಸೇತು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಗೌ. ಅಧ್ಯಕ್ಷ ಪ್ರೊ. ಇಲಿಯಾಸ್ ಅಹಮದ್ ಖಾನ್ ವಹಿಸಿದ್ದರು, ಅಧ್ಯಕ್ಷ ಅಫ್ಸರ್ ಹಾಜರಿದ್ದರು. ಕಾರ್ಯಕ್ರಮವನ್ನು ನೂರ್ ಮರ್ಜೆಂಟ್ ನಿರೂಪಿಸಿದರು.


