ಚಾಮರಾಜನಗರ: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಹುಲಿ, ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳ ಕೊರತೆ ಇರುವುದು ಬೆಳಕಿಗೆ ಬಂದಿದೆ. ಕಾಡು ಪ್ರಾಣಿಗಳ ಚಲನವಲನಗಳನ್ನು ಗಮನಿಸಲು ಥರ್ಮಲ್ ಡ್ರೋನ್ಗಳ ಅಗತ್ಯವಿದೆ ಎಂದು ಮಲೈಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಮನವಿ ಮಾಡಿದ್ದಾರೆ.
ಕಳೆದ ಕೆಲ ದಿನಗಳಲ್ಲಿ ಚಾಮರಾಜಕನಗರದ ನಂಜೇದೇವನಪುರದ ಬಳಿ ತಾಯಿ ಹುಲಿಯ ಜೊತೆಗೆ ನಾಲ್ಕು ಹುಲಿಗಳು ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿ ಸೃಷ್ಟಿಯಾಗಿರುವ ಹಿನ್ನಲ್ಲೆಯಲ್ಲಿ ಹುಲಿಗಳ ಸೆರೆಗೆ ಆನೆ ಕಾರ್ಯಾಚರಣೆ ಆರಂಭಗೊಂಡಿರುವ ಬೆನ್ನಹಿಂದೆಯೆ ಅರಣ್ಯ ಇಲಾಖೆಯಲ್ಲಿನ ನ್ಯೂನತೆಗಳನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನ ನಡೆದಿದೆ.

ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ, ಅರಣ್ಯ, ಕುಡಿಯುವ ನೀರು ಸೇರಿದಂತೆ ಇತರೆ ವಿಷಯಗಳ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ನಡೆಸಿದ ಸಭೆಯ ವೇಳೆ ಡಿಸಿಎಫ್ ಈ ವಿಷಯ ತಿಳಿಸಿದರು.
ಕಾಡು ಪ್ರಾಣಿಗಳ ಚಲನವಲನಗಳನ್ನು ಗಮನಿಸಲು ಥರ್ಮಲ್ ಡ್ರೋಣ್ಗಳ ಅಗತ್ಯವಿದೆ. ಆದರೆ, ನಮ್ಮಲ್ಲಿ ನಾರ್ಮಲ್ ಡ್ರೋಣ್ಗಳಿವೆ. ಜೊತೆಗೆ ಜಿಲ್ಲೆಗೆ ಪ್ರತ್ಯೇಕ ಚಿರತೆ ಟಾಸ್ಕ್ ಫೋರ್ಸ್ ಸಮಿತಿ ರಚನೆಯಾಗಬೇಕು. ಒಂದೊಂದು ಥರ್ಮಲ್ ಡ್ರೋನ್ಗಳಿಗೆ ೧೨ ಲಕ್ಷ ರೂ.ಗಳ ವೆಚ್ಚವಾಗಲಿದ್ದು, ಜಿಲ್ಲೆಯ ಮೂರು ವಿಭಾಗಗಳಿಗೆ ಪ್ರತ್ಯೇಕ ಥರ್ಮಲ್ ಡ್ರೋನ್ ಬೇಕಿದೆ ಎಂದು ತಿಳಿಸಿದರು.

- ಹುಲಿ, ಚಿರತೆ, ಆನೆಗಳ ಹಾವಳಿ ತಡೆಗೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.
- ಅರಣ್ಯ ಇಲಾಖೆಗೆ ಅಗತ್ಯವಿರುವ ಥರ್ಮಲ್ ಡ್ರೋನ್ಗಳ ಖರೀದಿಗೆ ಮುಂದಾಗಬೇಕು.
- ಚಿರತೆ ಟಾಸ್ಕ್ ಫೋರ್ಸ್ ಸಮಿತಿ ರಚನೆಗೂ ಕ್ರಮವಹಿಸಲಾಗುವುದು.
– ಕೆ.ವೆಂಕಟಶ್, ಜಿಲ್ಲಾ ಉಸ್ತುವಾರಿ ಸಚಿವರು.
ಎಂಎಂ ಹಿಲ್ಸ್ನಲ್ಲಿ ಮಿನಿ ವೀರಪ್ಪನ್ !
ಮಲೈಮಹದೇಶ್ವರ ವನ್ಯಜೀವಿ ಧಾಮದ ಮೀಣ್ಯಂ ಅರಣ್ಯದಲ್ಲಿ ವಿಷವಿಟ್ಟು 5 ಹುಲಿಗಳನ್ನು ಕೊಂದ ಹಾಗೂ ಒಂದು ಹುಲಿಯನ್ನು ಕೊಂದು ಮೂರು ತುಂಡುಗಳಾಗಿ ಕತ್ತರಿಸಿ ಹೂಳಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ದೊರೆತಿರುವುದಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಮಿನಿ ವೀರಪ್ಪನ್ ಹುಟ್ಟಿಕೊಂಡಿದ್ದು ಅವನನ್ನು ಯಾಕೆ ಇನ್ನೂ ಅರೆಸ್ಟ್ ಮಾಡಿಲ್ಲ ಎಂದು ಶಾಸಕರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಇದಕ್ಕೆ ಡಿಸಿಎಫ್ ಭಾಸ್ಕರ್ ಪ್ರತಿಕ್ರಿಯಿಸಿ, 5 ಹುಲಿಗಳನ್ನು ಕೊಂದಿದ್ದ ಮೂವರು ಆರೋಪಿಗಳು 58 ದಿನಗಳ ಕಾಲ ಜೈಲಿನಲ್ಲಿದ್ದು ಆ ನಂತರ ಜಾಮೀನು ದೊರೆತಿದೆ. ಅಲ್ಲದೇ ಹುಲಿ ಕತ್ತರಿಸಿ ಹೂತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳ ಪೈಕಿ 6 ಜನರನ್ನು ಅರೆಸ್ಟ್ ಮಾಡಲಾಗಿತ್ತು. ಅವರು 62 ದಿನ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಗೋವಿಂದ ಎಂಬಾತ ತಲೆಮರೆಸಿಕೊಂಡಿದ್ದು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯಲ್ಲಿ ಆತನ ಮೇಲೆ ಹಲವು ಪ್ರಕರಣಗಳಿದ್ದು ರೌಡಿಶೀಟರ್ ತೆರೆಯಲಾಗುವುದು. ಅಲ್ಲದೇ ಬೇಲ್ ರದ್ದತಿಗೆ ಅಫೀಲು ಹಾಕಲಾಗುವುದು. 7 ವರ್ಷದೊಳಗಿನ ಪ್ರಕರಣಗಳಿಗೆ 60 ದಿನಗಳಿಗೆ ಜಾಮೀನಿಗೆ ಅವಕಾಶವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾರೋತ್, ಎಸ್ಪಿ ಡಾ.ಬಿ.ಟಿ.ಕವಿತಾ, ಎಡಿಸಿ ಜವರೇಗೌಡ ಸೇರಿದಂತೆ ಇತರರಿದ್ದರು.


