Online News in ಕನ್ನಡ

ಸಕ್ಕರೆ ಕಾರ್ಖಾನೆ ಮಾಲೀಕರು ಆತ್ಮಹತ್ಯೆ ಮಾಡಿಕೊಂಡಿದ್ದಾರಾ ? ಕಬ್ಬು ಬೆಳೆಗಾರರ ಪ್ರಶ್ನೆ !

ಮೈಸೂರು :  ಈ ದೇಶದಲ್ಲಿ ಬಂಡವಾಳಶಾಹಿಗಳು, ಸಕ್ಕರೆ ಕಾರ್ಖಾನೆ ಮಾಲೀಕರು ಅಥವಾ ಉದ್ಯಮಿಗಳು ಸೇರಿ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ, ಪ್ರತಿ ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಯಾವುದೇ ಸರ್ಕಾರಗಳು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆರೋಪಿಸಿದರು.
ಮೈಸೂರು ಮೆಡಿಕಲ್ ಕಾಲೇಜು ಅಮೃತೋತ್ಸವ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಒಕ್ಕೂಟದಿಂದ ಏರ್ಪಡಿಸಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಗಳ ರೈತ ವಿರೋಧಿ ನೀತಿಗಳಿಂದ ಮುಂದಿನ ತಲೆಮಾರಿಗೆ ರೈತ ವರ್ಗವನ್ನು ಹುಡುಕುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.
ಕೃಷಿಗೆ ಸಾಕಷ್ಟು ಅನುದಾನ ಕೊಡುತ್ತೇವೆ, ಆದರೇ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಲು ಆಗಲ್ಲ ಎನ್ನುವ ರಾಜಕಾರಣಿಗಳು, ಇದುವರೆಗೂ ಕೃಷಿಗೆ ಯಾವುದೇ ಅನುದಾನ ಕೊಟ್ಟಿಲ್ಲ. ಕೊರೊನಾ ಸಂದರ್ಭದಲ್ಲಿ ಎಲ್ಲಾ ಕಡೆ ಬಾಗಿಲು ಹಾಕಿದರೂ ರೈತರು ಬಾಗಿಲು ಹಾಕದೇ ಕೆಲಸ ಮಾಡಿದ್ದಾರೆ. ೫ ವರ್ಷಕ್ಕೊಮ್ಮೆ ಜನರ ಸೇವಕನಾಗಿರುತ್ತೇನೆಂದು ಬರುವ ರಾಜಕಾರಣಿಗಳು ಗೆದ್ದ ನಂತರ ತಮ್ಮ ಆದಾಯ ದುಪ್ಪಟ್ಟು ಮಾಡಿಕೊಂಡಿರುತ್ತಾರೆ ಎಂದು ಗುಡುಗಿದರು.
ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಮಠದ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರು ಮಾತನಾಡಿ, ಎಲ್ಲರಿಗೂ ಎಲ್ಲ ಭಾಗ್ಯಗಳನ್ನು ನೀಡಿದ ಈ ಸರ್ಕಾರ ರೈತರಿಗೆ ಯಾವುದೇ ಭಾಗ್ಯ ನೀಡಿಲ್ಲ, ವರ್ಷ ಪೂರ್ತಿ ಕಷ್ಟಪಟ್ಟು ಬೆಳೆ ಬೆಳೆದು ಮಾರಾಟಕ್ಕೆ ಹೋದಾಗ ಆತನಿಗೆ ಬೆಲೆ ಸಿಗುವುದಿಲ್ಲ, ಇಂತಹ ಸಂದರ್ಭದಲ್ಲಾದರೂ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದು ರೈತರ ಸಂಕಷ್ಟಕ್ಕೆ ನೆರವಾಗಬೇಕೆಂದು ತಿಳಿಸಿದರು.

ರಾಜಕಾರಣಿಗಳು ರೈತರ ಕಾರ್ಯಕ್ರಮಕ್ಕೆ ಹೋದರೆ, ರೈತರು ಸಾಲ ಮನ್ನಾ ಮಾಡಿ ಅಂತಾರೆ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊಡಿ ಎಂದು ಕೇಳುತ್ತಾರೆ ಈ ಕಾರಣಕ್ಕಾಗಿ ರಾಜಕಾರಣಿಗಳು ರೈತರ ಯಾವುದೇ ಕಾರ್ಯಕ್ರಮಗಳಿಗೂ ಬರುವುದಿಲ್ಲ. ನಾವು ಇನ್ನುಮುಂದೆ ಅವರನ್ನು ಕರೆಯುವುದೂ ಇಲ್ಲ.
-ಇಂಗಲಗುಪ್ಪೆ ಕೃಷ್ಣೇಗೌಡ, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ (ರೈತ ಬಣ)

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅರಮನೆ ಮೈದಾನದಿಂದ ಸಾವಿರಾರು ರೈತರು, ರೈತ ಮಹಿಳೆಯರು ಮೆರವಣಿಗೆ ಮೂಲಕ ಆಗಮಿಸಿದರು. ವೀರಗಾಸೆ ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಅರಮನೆ ಎದುರು ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಲಂಕೃತ ಎತ್ತಿನಗಾಡಿ ಮೆರವಣಿಗೆಗೆ ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಎತ್ತಿನಗಾಡಿಗೆ ಪೂಜೆ ಸಲ್ಲಿಸಿದ ಬಳಿಕ ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಮಠದ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರು ಮೆರವಣಿಗೆಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಮಹಾ ಒಕ್ಕೂಟದ ಪದಾಧಿಕಾರಿಗಳಾದ ಬೀರಪ್ಪ ದೇಶನೂರು, ಬಸನಗೌಡ ಪಾಟೀಲ, ನಾಸೀರ್ ಭಗವಾನ್, ಪಿ.ಎಂ.ರವಿಕುಮಾರ್, ದಾದಾ ಮೆಹಬೂಬ ಸಾಬ ನವಲಗುಂದ, ಸುರೇಶ್ ಮೂಲಿಮನಿ, ಮಹಾದೇವಿ ಹೂವಿನಗೋಳ, ಈರಣ್ಣ ಅಂಗಡಿ, ಗಣೇಶ್ ಇಳಿಗೆರೆ, ಹೇಮಾ ಕಾಜಗಾರ, ಕೆಆರ್‌ಎಸ್ ರಾಮೇಗೌಡ, ಮಂಡ್ಯ ಜಿಲ್ಲೆಯ ಹೆಸರಾಂತ ಪೈಲ್ವಾನ್ ಮುಕುಂದ, ದೇವರಾಜು, ಶೌಕತ್, ಬೆಂಗಳೂರು ಕೃಷ್ಣ, ಹನುಮಂತಪ್ಪ, ಕಮಲ್, ಶಿವಮೂರ್ತಿ, ರಘುನಾಥ್, ಮಲ್ಲಿಕಾರ್ಜುನ, ಬಿ.ಅಶೋಕ್ ದಾಸೇಗೌಡ, ಮಾಜಿ ಸೈನಿಕರಾದ ದಿವಾಕರ ಕೆ.ಪಿ., ಬಸವರಾಜು, ರವಿಕುಮಾರ್, ಡಿ.ಹೆಚ್.ನವಲಗುಂದ ಇತರರು ಇದ್ದರು.

 

Call Now Button