Online News in ಕನ್ನಡ

ಬದಲಾವಣೆ ಕೂಗು: ಸಿಎಂ ಸಿದ್ದರಾಮಯ್ಯ ಪರ ತವರು ಜಿಲ್ಲೆಯಲ್ಲಿ ಅಹಿಂದ ಸಮಾವೇಶ ಜ.೨೫ಕ್ಕೆ

ಮೈಸೂರು : ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕೂಗು ದಿನದಿಂದ ದಿನಕ್ಕೆ ಹೊಸ ದಿಕ್ಕನ್ನು ಪಡೆದುಕೊಳ್ಳುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಧ್ವನಿಯೆತ್ತಲು ತವರು ಜಿಲ್ಲೆ ಮೈಸೂರಿನ ಜನರು ನಿರ್ಧರಿಸಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬಾರದು ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಲು ವೇದಿಕೆ ಸಜ್ಜಾಗಿದೆ.
ಈ ಸಂಬಂಧ ಬುಧವಾರ ಮೈಸೂರು ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಅಹಿಂದ, ಮೈಸೂರು ಘೋಷಣೆಯಡಿ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳ ಸ್ಥಳೀಯ ಮುಖಂಡರ ಸಭೆ ನಡೆಸಲಾಯಿತು. ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಯಕತ್ವ ಬದಲಾವಣೆಗೆ ತೀರ್ವ ವಿರೋಧ ವ್ಯಕ್ತವಾಯಿತು.
ರಾಜ್ಯ ಕಂಡ ಧೀಮಂತ ನಾಯಕ ಡಿ. ದೇವರಾಜ ಅರಸ್‌ ನಂತರ ಹಿಂದುಳಿದ ವರ್ಗಗಳ ಧ್ವನಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳ ಶ್ರೇಯೋಭವೃದ್ಧಿಗೆ ದುಡಿಯುತ್ತಿದ್ದಾರೆ. ಅಲ್ಲದೆ, ಅಹಿಂದ ವರ್ಗವೂ ಸಹ ಕಾಂಗ್ರೆಸ್‌ ಪರವಾಗಿ ನಿಂತಿದ್ದು, ಆಕಾರಣದಿಂದಲೇ ಈ ಬಾರಿ ಕಾಂಗ್ರೆಸ್‌ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ಈ ವರ್ಗಗಳಿಗೆ ಅನ್ಯಾಯ ಮಾಡಿದಂತ್ತಾಗುತ್ತದೆ ಎಂದು ಸಭೆಯಲ್ಲಿದ್ದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಅದೃಷ್ಟದಿಂದ ಮುಖ್ಯಮಂತ್ರಿ ಆದವರಲ್ಲ. ರಾಜಕೀಯ ಬದ್ಧತೆ ಅವರನ್ನು ಈ ಸ್ಥಾನಕ್ಕೆ ತಂದಿದೆ. ನಾವು ಮಾಡಲು ಹೊರಟಿರುವ ಸಮಾವೇಶ ಯಾರ ವಿರುದ್ಧವೂ ಇಲ್ಲ. ಶಕ್ತಿ ಪ್ರದರ್ಶನವೂ ಅಲ್ಲ. ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಅವಶ್ಯಕತೆ ಇದೆ ಎನ್ನುವ ಕಾರಣಕ್ಕೆ ಸಮಾವೇಶ ನಡೆಸುತ್ತಿದ್ದೇವೆ.      – ಕೆ.ಎಸ್.ಶಿವರಾಂ, ವೇದಿಕೆ ಅಧ್ಯಕ್ಷ

ರಾಜ್ಯದಲ್ಲಿ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷಾ ವರದಿ ಜಾರಿಯಾಗಬೇಕು, ಇದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ, ಇವರ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಕೋಮುವಾದಿಗಳ ಚಟುವಟಿಕೆಗೆ ತಡೆಯೊಡ್ಡಿದ್ದಾರೆ. ಸಿದ್ದರಾಮಯ್ಯನವರು ಅಹಿಂದ ಸಮುದಾಯಗಳ ಅಸ್ಮಿತೆ, ಯಾವುದೇ ಕಾರಣಕ್ಕೂ ಅವರನ್ನು ನಾವು ಬಿಟ್ಟುಕೊಡುವುದಿಲ್ಲ, ರಾಜ್ಯದಲ್ಲಿ 23 ಮಂದಿ ಮುಖ್ಯಮಂತ್ರಿ ಆಗಿದ್ರೂ ಕೂಡಾ ಅಹಿಂದ ವರ್ಗಕ್ಕೆ ನ್ಯಾಯ ಸಿಕ್ಕಿಲ್ಲ‌‌. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಮುಂದಿನ ಜನವರಿ 25ನೇ ತಾರೀಖು ಮೈಸೂರಿನ ವಸ್ತು ಪ್ರದರ್ಶನದ ಆವರಣದಲ್ಲಿ ಬೃಹತ್ ಸಮಾವೇಶ ನಡೆಸಲು ಸಭೆ ತೀರ್ಮಾನಿಸಿತು.


ಪೂರ್ವಭಾವಿ ಸಭೆಯಲ್ಲಿ ಅಹಿಂದ ಮುಖಂಡರಾದ ಯೋಗೇಶ್ ಉಪ್ಪಾರ, ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್, ಪ್ರಗತಿಪರ ಚಿಂತಕಿ ಸವಿತಾ ಮಲ್ಲೇಶ್, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ರವಿನಂದನ್ ಮಡಿವಾಳ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಶಿವಪ್ಪಕೋಟೆ, ದಲಿತ ಮಹಾಸಭಾದ ಅಧ್ಯಕ್ಷ ರಾಜೇಶ್, ಖಲೀಮ್ ಎಫ್. ವಿಶ್ವಕರ್ಮ ಬಡಗಿ ಸಂಘದ ಮುದ್ದಣ್ಣಾಚಾರ್, ಕೆಂಡಗಣ್ಣ , ಅಹಿಂದ ಕರ್ಯದರ್ಶಿ ಶಿವಣ್ಣ, ದೊಳ್ಳೇಗೌಡ , ಮಂಜುನಾಥ್, ಪೌರಕಾರ್ಮಿಕ ಸಂಘದ ಮಾರ, ಪತ್ರಕರ್ತ ಟಿ.ಗುರುರಾಜ್‌, ಬೆಸ್ತ ಸಮಾಜದ ನಾಗೇಂದ್ರ ಗೋವಿಂದ, ರೇವಣ್ಣ, ಬಸಪ್ಪ , ಮಲ್ಲೇಗೌಡ ಮೊದಲಾದವರು ಭಾಗವಹಿಸಿದ್ದರು.

Call Now Button