ಚಾಮರಾಜನಗರ : ತಾಲೂಕಿನ ನಂಜೇದೇವನಪುರ ಬಳಿ ಬೀಡುಬಿಟ್ಟಿರುವ 5 ಹುಲಿಗಳನ್ನು ಸೆರೆ ಹಿಡಿಯಲು ಈಗಾಗಲೇ ಅರಣ್ಯ ಇಲಾಖೆ ಕೂಂಬಿಂಗ್ ಆರಂಭಿಸಿದ್ದು ಡ್ರೋನ್ ಮೂಲಕ ಹುಲಿಗಳ ಚಲನವಲನಗಳ ಮೇಲೆ ನಿಗಾ ಇರಿಸಿದೆ.
ಡಿ.20 ರಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾದ 5 ಹುಲಿಗಳ ಓಡಾಟ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು ಈಶ್ವರ ಹಾಗೂ ಲಕ್ಷ್ಮಣ ಎಂಬ ಸಾಕಾನೆಗಳ ಮೂಲಕ ಹುಲಿಗಳನ್ನು ಸೆರೆ ಹಿಡಿಯಲು ಕೂಂಬಿಂಗ್ ಆರಂಭಿಸಿದೆ.
ಕಳೆದ 4 ದಿನಗಳಿಂದಲೂ ತಾಯಿ ಹುಲಿ ಹಾಗೂ 4 ಮರಿ ಹುಲಿಗಳು ಒಂದೆಡೆ ಇದ್ದು ನಂಜೇದೇವನಪುರ ಆಸುಪಾಸಿನಲ್ಲಿಯೇ ಬೀಡುಬಿಟ್ಟಿವೆ. ಈಗಾಗಲೇ ಅರಣ್ಯ ಇಲಾಖೆ ಡ್ರೋನ್ ಮೂಲಕ ಹುಲಿಗಳ ಚಲನವಲನ ಮೇಲೆ ನಿಗಾ ಇರಿಸಿದೆ.
5 ಹುಲಿಗಳ ಓಡಾಟ ಹಿನ್ನೆಲೆಯಲ್ಲಿ ಈಗಾಗಲೇ ನಂಜೇದೇವನಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಎರಡು ಸಾಕಾನೆಗಳೊಂದಿಗೆ ಅರಿವಳಿಕೆ ತಜ್ಞರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗಳ ಸೆರೆ ಹಿಡಿಯುವ ಕಾರ್ಯಾಚರಣೆಗೆ ಇಳಿದಿದ್ದಾರೆ. ಇಂದು ಕೂಡ ಹುಲಿಗಳ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿದಿದೆ.
ಹುಲಿಗಳ ಸೆರೆ ಹಿಡಿಯುವುದು ಸುಲಭವಲ್ಲ : ನಂಜೇದೇವನಪುರ ಆಸುಪಾಸಿನಲ್ಲಿರುವ 5 ಹುಲಿಗಳ ಸೆರೆ ಹಿಡಿಯುವುದು ಅಷ್ಟು ಸುಲಭವಲ್ಲ. ತಾಯಿ ಹುಲಿ ಹಾಗೂ 4 ಮರಿ ಹುಲಿಗಳು ಒಂದೆಡೆ ಇರುವುದು ಈಗಾಗಲೇ ಡ್ರೋನ್ ಕ್ಯಾಮರಾರದಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಹುಲಿಗಳನ್ನು ಸೆರೆ ಹಿಡಿಯಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರು 5 ಹುಲಿಗಳು ಐದು ಕಡೆ ಚದುರಿದರೆ ಕಷ್ಟಕರವಾಗಲಿದೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಎರಡು ಸಾಕಾನೆಗಳ ಮೂಲಕ ಕೂಂಬಿಂಗ್ ಆರಂಭಿಸಿದ್ದರೂ ಕೂಡ ಎಚ್ಚರಿಕೆಯಿಂದ ಕಾರ್ಯಾಚರಣೆ ಮಾಡಬೇಕಿದೆ. ಇದರಿಂದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಆತಂಕದಲ್ಲಿ ಜನರು : ನಂಜೇದೇವನಪುರ ಬಳಿ 5 ಹುಲಿಗಳ ಓಡಾಟ ಹಿನ್ನೆಲೆಯಲ್ಲಿ ಈ ಭಾಗದ ರೈತರು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಹುಲಿಗಳನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಈ ಭಾಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು ಜನರು ಒಂಟಿಯಾಗಿ ಓಡಾಡದಂತೆ ಹಾಗೂ ಹೊರಗೆ ಬಾರದಂತೆ ಸೂಚಿಸಲಾಗಿದೆ. ಇದರಿಂದಾಗಿ ರೈತರು ತಮ್ಮ ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ. ಆದಷ್ಟು ಬೇಗ ಹುಲಿಗಳನ್ನು ಸೆರೆ ಹಿಡಿಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.


