Online News in ಕನ್ನಡ

ಇಲ್ಲಿ ದಲಿತರಿಗೆ ಇಲ್ಲ ʻಮಾನ್ಯʼತೆ,  ಇದು ಭಾರತದ ನಿತ್ಯದ ವ್ಯಥೆ…! ಓದಿ ಪತ್ರಕರ್ತ ಕೆ.ದೀಪಕ್‌ ಸಂಪಾದಕತ್ವ ʻಕಾಲಮಾನ-12ʼ

2025ರ ಏಪ್ರಿಲ್‌ 14ರಂದು ಮಂಡ್ಯ ಜಿಲ್ಲಾಡಳಿತ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.‌ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದ ಮುಖ್ಯ ಭಾಷಣಕಾರನಾಗಿ ಭಾವಹಿಸಿದ್ದ ನಾನು, ಈ ದೇಶದಲ್ಲಿ ಜಾತಿಯ ಕಾರಣಕ್ಕಾಗಿ ನಡೆದಿರುವ ಮತ್ತು ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಕುರಿತು ಆಡಿದ ಮಾತುಗಳನ್ನು ಆಲಿಸಿದ ಮೇಲ್ವರ್ಗದ ಅಧಿಕಾರಿ ಮತ್ತು ರಾಜಕೀಯ ವರ್ಗದ ಕೆಲವರು ʻ ದೀಪಕ್‌ ಅವರು ಹೇಳುವಷ್ಟು ಜಾತಿಯ ಕ್ರೌರ್ಯ ಭಾರತದಲ್ಲಿ ಇದೆಯೇ ? ನಮಗೇನೋ ಹಾಗೆ ಅನ್ನಿಸುವುದಿಲ್ಲʼ ಎಂದು ಹಿರಿಯ ಪತ್ರಕರ್ತ ಸೋಮಶೇಖರ್‌ ಕೆರಗೋಡು ಅವರ ಬಳಿ ಹೇಳಿಕೊಂಡಿದ್ದರು.
ಇದಾದ ಕೆಲವೇ ದಿನಗಳಲ್ಲಿ (2025, ಏಪ್ರಿಲ್‌ 19ರಂದು) ಮೈಸೂರು ತಾಲೂಕಿನ ವಾಜಮಂಗಲ ಗ್ರಾಮದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ಮಲ ಎರಚಿ, ಫ್ಲಕ್ಸ್‌ಗಳಿಗೆ ಚಪ್ಪಲಿ ಹಾರ ಹಾಕಿ ಅವಮಾನಿಸಿದ್ದ ಹೀನಕೃತ್ಯ ಜರುಗಿತ್ತು. ಇಂತಹ ಸಹಸ್ರ ಸಹಸ್ರ ಅವಮಾನಗಳನ್ನು ಡಾ.ಬಿ.ಆರ್.‌ ಅಂಬೇಡ್ಕರ್‌ ಅವರು ಬದುಕಿದ್ದಾಗ ಮತ್ತು ಅಗಲಿದ ಬಳಿಕವೂ ಅನುಭವಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇಂತಹ ಅವಮಾನ ಕೃತ್ಯಗಳು ಕೇವಲ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ. ಭಾರತ ಹೊರತಾಗಿ ಡಾ. ಅಂಬೇಡ್ಕರ್‌ ಅವರನ್ನು ಇತರೆ ದೇಶಗಳು ಜ್ಞಾನ ಶಿಖರದ ಉತ್ತುಂಗದಲ್ಲಿಟ್ಟು ಗೌರವಿಸುತ್ತಿವೆ.

ಈಗ ಹುಬ್ಬಳ್ಳಿಯ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಬರೋಣ. ಈ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳನ್ನೇ (ಮಾನ್ಯಾ) ಕೊಡಲಿನಿಂದ ಕೊಚ್ಚಿ ಪಾಪಿ ತಂದೆ ಕೊಲೆಗೈದಿದ್ದಾನೆ. ಅಲ್ಲದೆ, ಈಕೆಯ ದಲಿತ ಪತಿ ವಿವೇಕಾನಂದ ದೊಡ್ಡಮನಿ, ಈತನ ತಾಯಿ ರೇಣವ್ವ ಹಾಗೂ ದೊಡ್ಡಪ್ಪ ಯಲ್ಲಪ್ಪ ಅವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು ಇಡೀ ಕುಟುಂಬವನ್ನೇ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಈ ಘಟನೆ ಇಡೀ ದೇಶದ ಗಮನ ಸೆಳೆದಿದ್ದು ಅಂದು ಮಂಡ್ಯದಲ್ಲಿ ಕೆಲ ಮೇಲ್ವರ್ಗದ ಮಂದಿ ಎತ್ತಿದ್ದ ಪ್ರಶ್ನೆಗೆ ಉತ್ತರ ದೊರಕಿದಂತ್ತಾಗಿದೆ.
ದಲಿತ ಪರವಾಗಿ ಅನ್ಯ ಜಾತಿಯ ಜನರು ಅದೆಷ್ಟೇ ಅನುಕಂಪದ, ಅಭಿಮಾನದ, ಪ್ರೀತಿಯ ಮಾತುಗಳನ್ನಾಡಿದರೂ ದಲಿತರಾಗಿ ಹುಟ್ಟಿದವರಿಗೆ ಮಾತ್ರ ಜಾತಿಯ ಕ್ರೌರ್ಯ, ಅಪಮಾನದ ತೀವ್ರತೆ ತಟ್ಟಲು ಸಾಧ್ಯ. ಡಾ. ಬಿ.ಆರ್.‌ ಅಂಬೇಡ್ಕರ್‌ ಅವರು ತಮ್ಮ ʻಮೂಕನಾಯಕʼ ಪತ್ರಿಕೆಯ ಸಂಪಾದಕತ್ವದಲ್ಲಿ ಭಾರತದ ಜಾತಿ ವ್ಯವಸ್ಥೆ ಬಗ್ಗೆ ಹೀಗೆ ಬರೆದು ದಾಖಲಿಸಿದ್ದಾರೆ. ʻ ಹಿಂದೂ ಎಂಬ ಈ ಧರ್ಮವು ರೂಪಿಸಿರುವ ಜಾತಿಗಳು ಏಣಿ-ಶ್ರೇಣಿಯ ರೂಪದಲ್ಲಿ ಶ್ರೇಣಿಕೃತವಾಗಿ ಜೋಡಿಸಲ್ಪಟ್ಟಿದೆ. ಹಿಂದೂ ಸಮುದಾಯವೆಂಬುವುದು ಒಂದು ಗೋಪುರ ಇದ್ದಂತೆ. ಅದರಲ್ಲಿ ಪ್ರತಿಯೊಂದು ಜಾತಿಗೂ ಒಂದೊಂದು ಮಹಡಿಯನ್ನು ಕೊಡಲಾಗಿರುತ್ತದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಮುಖ್ಯ ವಿಷಯವೆಂದರೆ, ಈ ಗೋಪುರದ ಒಂದೊಂದು ಮಹಡಿಯಿಂದ ಮತ್ತೊಂದು ಮಹಡಿಗೆ ಮೆಟ್ಟಿಲುಗಳು ಇರುವುದಿಲ್ಲ. ಅಥವಾ ಏಣಿ ಇರುವುದಿಲ್ಲ. ಆದ್ದರಿಂದ ಒಂದು ಮಹಡಿಯಲ್ಲಿರುವ ಯಾರೂ ಕೂಡಾ ಮೇಲಿನ ಮಹಡಿಗೆ ಹತ್ತುವ ಅಥವಾ ಕೆಳಗಿನ ಮಹಡಿಗೆ ಇಳಿಯುವ ಸಾಧ್ಯತೆ ಇರುವುದಿಲ್ಲ. ಯಾರು ಯಾವ ಮಹಡಿಯಲ್ಲಿ ಹುಟ್ಟುತ್ತಾರೋ ಅವರು ಅಲ್ಲಿಯೇ ಸಾಯುತ್ತಾರೆ. ಕೆಳಗಿನ ಮಹಡಿಯಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ಎಷ್ಟೇ ಪ್ರತಿಭಾವಂತ, ಯೋಗ್ಯನಾಗಿದ್ದರೂ ಆತ ಮೇಲಿನ ಮಹಡಿಗೆ ಹತ್ತುವ ಯಾವುದೇ ಮಾರ್ಗ ಇರುವುದಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿ ಯಾವುದೇ ಬಗೆಯ ಪ್ರತಿಭೆ ಅಥವಾ ಜ್ಞಾನವನ್ನೂ ಹೊಂದದೆ ಇದ್ದರೂ ತಾನು ಹುಟ್ಟಿರುವ ಮತ್ತು ತನಗೆ ವಹಿಸಲ್ಪಟ್ಟಿರುವ ಮಹಡಿಯಿಂದ ಕೆಳಗಿನ ಮಹಡಿಗೆ ಆತನನ್ನು ಇಳಿಸಲು ಯಾವ ಸಾಧ್ಯತೆ ಇರುವುದಿಲ್ಲ’ ಎಂದು ವಿಮರ್ಶಿಸಿದ್ದಾರೆ. ಈ ಸಾಲುಗಳನ್ನು ಅರ್ಥ ಮಾಡಿಕೊಂಡರೆ ಸಾಕು.

ಇಂಡಿಯನ್ ಕ್ರೈಮ್ ರಿಪೋರ್ಟ್ ಬ್ಯೂರೋ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ದಲಿತರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗುತ್ತಿದ್ದು, ಪ್ರತಿ 18 ನಿಮಿಷಕ್ಕೆ ಒಬ್ಬ ದಲಿತನ ಮೇಲೆ ದೌರ್ಜನ್ಯ ಮತ್ತು ಒಂದು ವಾರಕ್ಕೆ 13 ದಲಿತರ ಹತ್ಯೆ, 20 ನಿಮಿಷಕ್ಕೆ ದಲಿತ ಮಹಿಳೆಯ ಮೇಲೆ ಅತ್ಯಾಚಾರ, ಪ್ರತಿ ದಿನ 27 ಅಟ್ರಾಸಿಟಿ ಪ್ರಕರಣಗಳು ದಾಖಲಾಗುತ್ತಿದೆ. 2022ರಲ್ಲಿ ದೇಶದಾದ್ಯಂತ 51,656 ಅಟ್ರಾಸಿಟಿ ಪ್ರಕರಣಗಳು ದಾಖಲಾಗಿದೆ. ಇನ್ನು ಊರಿನ ಹಂತದಲ್ಲೇ, ಮುಖ್ಯಸ್ಥರ ಹಂತದಲ್ಲಿಯೇ, ಪೊಲೀಸರ ಹಂತದಲ್ಲಿಯೇ, ಪ್ರಭಾವಿಗಳ ಹಂತದಲ್ಲಿಯೇ ಸಾವಿರಾರು ಪ್ರಕರಣಗಳು ದಾಖಲೆಯಾದೆ ಉಳಿದಿದೆ

ಸ್ವಾತಂತ್ರ್ಯ ನಂತರ ದಲಿತರ ಮೇಲೆ ‌ ನಡೆದ ಪ್ರಮುಖ ದೌರ್ಜನ್ಯ ಪ್ರಕರಣಗಳು…
ಸ್ವಾತಂತ್ರ್ಯ ಪೂರ್ವದ ದಲಿರತರ ಮೇಲಿನ ದೌರ್ಜನ್ಯ, ಶೋಷಣೆ, ವಂಚನೆ ಪ್ರಕರಣಗಳು ಲಕ್ಷ ಲಕ್ಷವಿದೆ. ಆದರೆ, ಇದು ಸ್ವಾತಂತ್ರ್ಯ ಪಡೆದು ಸಂವಿಧಾನ ಜಾರಿಗೆ ಬಂದು ದಲಿತರ ರಕ್ಷಣೆಗೆ ಕಾನೂನು ಇದ್ದಾಗಿಯೂ ನಡೆದ ದೇಶದ ಪ್ರಮುಖ ಘಟನೆಗಳು. 1957ರಲ್ಲಿ ತಮಿಳುನಾಡಿನಲ್ಲಿ ನಡೆದ ರಾಮನಾಡ್ ಗಲಭೆಯಲ್ಲಿ 52 ಮಂದಿ ದಲಿತರ ಮಾರಣಹೋಮ. 1968ರಲ್ಲಿ ಕಿಲ್ವೆನ್‍ಮಣಿ ಹತ್ಯೆಕಾಂಡದಲ್ಲಿ ಕೂಲಿ ಹೆಚ್ಚು ಮಾಡುವಂತೆ ಕೇಳಿದ ಕಾರಣಕ್ಕೆ 44 ದಲಿತ ಕೂಲಿ ಕಾರ್ಮಿಕರನ್ನು ಹತ್ಯೆ ಮಾಡಿದ ಘಟನೆ. 1978ರಲ್ಲಿ ವೆಲ್ಲುಪುರಂನಲ್ಲಿ ನೂರಕ್ಕೂ ಹೆಚ್ಚು ದಲಿತರ ಮನೆಗಳಿಗೆ ಬೆಂಕಿ ಹಚ್ಚಿ 12 ಮಂದಿಯನ್ನು ಹತ್ಯೆ ಮಾಡಿ, ಹೆಣ್ಣು ಮಕ್ಕಳ ಮಾನಭಂಗ ಮಾಡಿದ ಘಟನೆ. 1981ರಲ್ಲಿ ಉತ್ತರ ಪ್ರದೇಶದಲ್ಲಿ ಪೂಲನ್ ದೇವಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ, 1985ರಲ್ಲಿ ಆಂದ್ರಪ್ರದೇಶದ ಕರಮಚೇದುವಿನಲ್ಲಿ ನಡೆದ ಮಾದಿಗ ಸಮುದಾಯದ ಜನರ ಹತ್ಯಾಕಾಂಡ. 1991ರಲ್ಲಿ ಆಂಧ್ರ ಪ್ರದೇಶದಲ್ಲಿ 8 ಮಂದಿ ದಲಿತರ ಸಾಮೂಹಿಕ ಹತ್ಯೆ ಮತ್ತು 300ಕ್ಕೂ ಹೆಚ್ಚು ಮನೆಗಳ ಧ್ವಂಸ ಪ್ರಕರಣ. 1996ರಲ್ಲಿ ಬೀಹಾರದಲ್ಲಿ ಮೇಲ್ವರ್ಗದ ರಣವೀರ್ ಸೇನೆಯಿಂದ 21 ಮಂದಿ ದಲಿತರ ಹತ್ಯೆ. ಇನ್ನು ಬಿಹಾರದಲ್ಲಿ ಮುಂದುವರೆಗೆ 1997ರಲ್ಲಿ ರಣವೀರ್ ಸೇನೆ 58 ಮಂದಿ ದಲಿತರ ಕತ್ತು ಕತ್ತರಿಸಿ ಹತ್ಯೆ ಮಾಡಲಾಯಿತು. ಇದರಲ್ಲಿ 27 ಮಂದಿ ಮಹಿಳೆಯರು, 10 ಮಂದಿ ಮಕ್ಕಳಿದ್ದರು. ಇಂತಹ ನೂರಾರು ಪ್ರಕರಣ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದು ಹೋಗಿದೆ.
ಇನ್ನು ಕರ್ನಾಟಕಕ್ಕೆ ಬರುವುದಾದರೆ, 2000 ಇಸವಿಯಲ್ಲಿ ಕೋಲಾರದ ಕಂಬಾಲಪಳ್ಳಿ ಪ್ರಕರಣ, ಹೊರಗಿನಿಂದ ಮನೆಗೆ ಬೀಗ ಹಾಕಿ ಬೆಂಕಿ ಹಚ್ಚಿ 7 ಮಂದಿ ದಲಿತರನ್ನು ಸಜೀವವಾಗಿ ದಹಿಸಲಾಯಿತು. 2011ರಲ್ಲಿ ನಡೆದ ಹರಿಯಾಣ ಪ್ರಕರಣ, ಧರ್ಮಾಪುರಿಯಲ್ಲಿ ನಡೆದ ಜಾತಿ ಗಲಭೆ, 2016ರಲ್ಲಿ ಅಲಿಯೂರು ಸಾಮೂಹಿಕ ಅತ್ಯಾಚಾರ ಪ್ರಕರಣ, ಈಗ 2018ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕೊರೊಗಾಂ ಹಿಂಸಾಚಾರ, ಇನ್ನು ಈ ವರ್ಷ ಅಟ್ರಾಸಿಟಿ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ದೇಶವ್ಯಾಪಿ ನಡೆದ ಪ್ರತಿಭಟನೆಯಲ್ಲಿ 14 ಮಂದಿ ದಲಿತರ ಪ್ರಾಣಬಿಟ್ಟರು.
ಇವೆಲ್ಲ ದಲಿತರ ಮೇಲಿನ ಕ್ರೌರ್ಯದ ಸಂಕೇತವಾದರೆ, ಸಾತ್ವಿಕ ದೌರ್ಜನ್ಯವೊಂದಿದೆ. ಉದಾಹರಣೆಗೆ, ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೆ ಹೋದದ್ದು, ಗೊಲ್ಲರಹಟ್ಟಿಗೆ ಸಂಸದರನ್ನೇ ಪ್ರವೇಶ ನಿರ್ಬಂಧಿಸಿದ್ದು. ಸರಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಮಹಿಳೆ ದಲಿತಳು ಎಂಬ ಕಾರಣಕ್ಕೆ ಮಕ್ಕಳನ್ನೇ ಶಾಲೆಯಿಂದ ಬಿಡಿಸಿದ ಪ್ರಕರಣ ಮೊನ್ನೆ ಮೊನೆ ನಡೆದಿದೆ. ಇಂತಹ ನೂರಾರು ಘಟನೆಗಳು ನಮ್ಮ ನಿಮ್ಮ ಸುತ್ತ ಗಮನಕ್ಕೆ ಬರುವಂತ್ತೆಯೂ, ಬಾರದೆ ಇರುವಂತ್ತೆಯೂ ನಡೆಯುತ್ತಲೇ ಇದೆ.

ಈ ಕಾರಣದಿಂದಲೇ ನಮ್ಮ ದೇಶದಲ್ಲಿ ದಲಿತರ ಜೀವ ಎಷ್ಟು ಅಗ್ಗವಾಗಿದೆ ಎಂದರೆ 1997ರಲ್ಲಿ ತಮಿಳುನಾಡಿನ ಮದುರೈನಲ್ಲಿ ನಡೆದ 6 ಮಂದಿ ದಲಿತರ ಹತ್ಯೆ ಪ್ರಕರಣ. ವಿಚಿತ್ರವೆಂದರೆ, ಹತ್ಯೆಗೆ ಒಳಗಾದ ಇವರ್ಯಾರೂ ಸಹ ಅಧಿಕಾರ ಕೇಳಿದವರಲ್ಲ, ಹೆಚ್ಚು ಕೂಲಿ ಕೇಳಿದವರಲ್ಲ, ಆಸ್ತಿ, ಹಣ ಲೂಟಿ ಮಾಡಿದವರಲ್ಲ, ಅನ್ಯಜಾತಿಯ ಹೆಣ್ಣು ಮಕ್ಕಳನ್ನು ಪ್ರೀತಿಸಿ ಮದುವೆಯಾದವರಲ್ಲ. ಬಲವಂತವಾಗಿ ದೇವಸ್ಥಾನ ಪ್ರವೇಶಿಸಿದವರಲ್ಲ. ಆದರೂ ಇವರನ್ನು ಹತ್ಯೆ ಮಾಡಲಾಯಿತು. ಕಾರಣ, ಮಧುರೈನ ಮೆಲ್ಲೂರು ಪಂಚಾಯ್ತಿ ವಾರ್ಡ್‌ ಸಾಮಾನ್ಯ ವರ್ಗದಿಂದ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದೇ ಈ ಹತ್ಯೆಗೆ ಕಾರಣ.

ಬುದ್ಧನ ನಾಡು, ಬಸವಣ್ಣನ ಬೀಡು, ಸಾಧು ಸಂತ ಸುಧಾರಕರು ಹುಟ್ಟಿದ ನೆಲೆವೀಡಿನಲ್ಲಿ ಜಾತಿಯ ಕಾರಣಕ್ಕೆ ಇಂದಿಗೂ ಹುಬ್ಬಳ್ಳಿಯ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿರುವುದಕ್ಕೆ ಯಾರನ್ನು ಹೊಣೆ ಮಾಡಬೇಕು. ಜಾತಿ ಮೀರಿ ಪ್ರೀತಿ ನಂಬಿ ಬಂದ ಮಾನ್ಯಾಳನ್ನೇ ? ಜಾತಿಯ ಮಿತಿ ಮರೆತು ಪ್ರೀತಿಗೆ ಸೋತ ದಲಿತ ವಿವೇಕಾನಂದನನ್ನೇ ? ಹೆತ್ತ ಅಪ್ಪ ಅಮ್ಮ ತಿರಸ್ಕರಿಸಿದರೂ ಅನ್ಯರ ಹೆಣ್ಣು ಮಗಳನ್ನು ಸೊಸೆಯಂದು ಸ್ವೀಕರಿಸಿ ಅವಳ ಹಾರೈಕೆ ಮಾಡಿದ ತಾಯಿ ರೇಣಮ್ಮರನ್ನೇ ಅಥವಾ ತಲೆಗೆ ಜಾತಿಯ ಮಲ ತುಂಬಿಕೊಂಡು ಪ್ರೀತಿಯ ಮಗಳನ್ನೇ ಕೊಂದ ಪಾಪಿ ತಂದೆ ಪ್ರಕಾಶಗೌಡ ಪಾಟೀಲನನ್ನೋ ? ಅಥವಾ ಈ ವ್ಯವಸ್ಥೆಯನ್ನೇ ಹೇಳಿ.

ಈಗ ಹುಬ್ಬಳ್ಳಿ ಘಟನೆಯಿಂದ ಹಲವು ಪ್ರಶ್ನೆಗಳು ಹುಟ್ಟುಕೊಂಡಿದೆ. ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಒಬ್ಬ ಹಿಂದೂ ಹೆಣ್ಣು ಮಗಳ ಹತ್ಯೆ ಮಾಡಿದ ಘಟನೆ ಹಿಂದೂ ರಕ್ಷಕರ ಕಣ್ಣಿಗೆ ಬಿದ್ದಿಲ್ಲವೇ ? ಬಸವಣ್ಣನ ತತ್ವ ಹೇಳುವ ಸ್ವಾಮೀಜಿಗಳ ಗಮನಕ್ಕೆ ಈ ಸುದ್ದಿ ಬಂದಿಲ್ಲವೇ ? ಇಂತಹ ಸಾಮಾಜಿಕ ಹೇಯ್ಯ ಕೃತ್ಯ ನಡೆದರೂ ಸಮಾಜ ಸುಧಾರಣೆಯ ಹೊಣೆ ಹೊತ್ತವರು ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ ? ವೈಜ್ಞಾನಿಕ ಯುಗದಲ್ಲೂ ಜಾತಿಯತೆ ಎಂಬ ಹೀನ ಪದ್ಧತಿಯನ್ನು ಆಚರಿಸುತ್ತಿರುವ ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲನ ಅಜ್ಞಾನಕ್ಕೆ ಕಾರಣ ಏನು ?
ಈನಡುವೆ, ದುರದೃಷ್ಟಕರ ಸಂಗತಿಯೆಂದರೆ… ನಟ ಸುದೀಪ್‌ ಮತ್ತು ನಟ ದರ್ಶನ್‌ ಫ್ಯಾನ್‌ ವಾರ್‌ ಅನ್ನು ದಿನವಿಡೀ ಬಿತ್ತರಿಸುತ್ತಿರುವ ಈ ರಾಜ್ಯದ ವಿದ್ಯುನ್ಮಾನ ಮಾಧ್ಯಮಗಳು ಜಾತಿಯತೆ ನಿರ್ಮೂಲನೆಗೆ ಒಂದಷ್ಟು ಜಾಗೃತಿ ಮೂಡಿಸುವ ಚರ್ಚೆ, ಸಂವಾದಗಳನ್ನು ನಡೆಸಲಿಲ್ಲ. ನಾಯಕತ್ವ ಬದಲಾವಣೆ ವಿಷಯದಲ್ಲಿ ಸಿಕ್ಕ-ಸಿಕ್ಕ ಶಾಸಕರಿಗೆ ಮೈಕ್‌ ಹಿಡಿದು ಅಭಿಪ್ರಾಯ ಕೇಳುವ ಮಾಧ್ಯಮಗಳು, ಈ ನಾಡಿನ ಪ್ರಭಾವಿ ಸ್ವಾಮೀಜಿಗಳಿಗೆ ಮೈಕ್‌ ಹಿಡಿದು ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆ ಬಗ್ಗೆ ಅಭಿಪ್ರಾಯ ಕೇಳಿ ಸುದ್ದಿ ಮಾಡಲಿಲ್ಲ. ಇಂತಹ ವೈರುಧ್ಯಗಳ ನಡುವೆ, ಹತ್ಯೆಗೀಡಾದ ಮಾನ್ಯಾಳಿಗೆ ಮತ್ತು ವಿವೇಕಾನಂದನ ಕುಟುಂಬದ ನ್ಯಾಯ ಕೊಡುವ ಶಕ್ತಿ ಸಂವಿಧಾನಕ್ಕೆ ಮಾತ್ರ ಇದೆ ಎಂದು ಹೇಳುತ್ತ ʻಕಾಲಮಾನʼಕ್ಕೆ ಅಲ್ಪ ವಿರಾಮ ಹೇಳುತ್ತೇನೆ…

 

Call Now Button