ಮೈಸೂರು: ಶಾಂತಿ ಮತ್ತು ಸ್ನೇಹದ ಸಂಕೇತ ಕ್ರಿಸ್ಮಸ್ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತಿದ್ದು ಮೈಸೂರಿನ ಸಂತ ಫಿಲೋಮಿನಾಸ್ ಚರ್ಚ್ನಲ್ಲಿ ಮಧ್ಯರಾತ್ರಿ ವಿಶೇಷ ಪ್ರಾರ್ಥನೆ ನಡೆಯಿತು. ವಿದ್ಯುತ್ ದೀಪಾಲಂಕಾರ, ಕಲಾಕೃತಿಗಳ ಸಿಂಗಾರ, ನಕ್ಷತ್ರಗಳ ಚಿತ್ತಾರಗಳಿಂದ ಕಂಗೊಳಿಸುತ್ತಿರುವ ಸಂತ ಫಿಲೋಮಿನಾಸ್ ಚರ್ಚ್ನಲ್ಲಿ ಬಾಲ ಯೇಸುವಿನ ಪ್ರತಿಷ್ಠಾಸಿ ಸಮ್ಮೂಹ ಪ್ರಾರ್ಥನೆ ನಡೆಸಲಾಯಿತು.

ಕ್ರಿಸ್ಮಸ್ ಹಬ್ಬದ ಪ್ರಮುಖ ಕಾರ್ಯಕ್ರಮವಾಗಿ ತಡರಾತ್ರಿ ವಿಶೇಷ ಪ್ರಾರ್ಥನಾ ವಿಧಿಗಳು ಜರುಗಿದವು. ಸಾವಿರಾರು ಕ್ರೈಸ್ತ ಬಾಂಧವರು ಚರ್ಚ್ಗೆ ಆಗಮಿಸಿ ಯೇಸು ಕ್ರಿಸ್ತನ ಜನನವನ್ನು ಭಕ್ತಿಭಾವದಿಂದ ಸ್ಮರಿಸಿದರು. ಚರ್ಚ್ ಆವರಣದಲ್ಲಿ ಕ್ರಿಸ್ಮಸ್ ಕೇರೋಲ್ ಹಾಡುಗಳು, ಪ್ರಾರ್ಥನಾ ಗೀತಗಳು ಮೊಳಗಿತು. ಮೈಸೂರಿನ ಬಿಷಪ್ ಮೋಸ್ಟ್ ರೆವರೆಂಡ್ ಡಾ. ಎಸ್.ಜೆ. ಫ್ರಾನ್ಸಿಸ್ ಸೆರ್ರೋ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನಾ ವಿಧಿಗಳು ಜರುಗಿತು.

ಹಬ್ಬದ ಅಂಗವಾಗಿ ದೇಶದ ಶಾಂತಿ, ರಾಜ್ಯದ ಸಮೃದ್ಧಿ ಹಾಗೂ ಜನರ ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಯೇಸು ಕ್ರಿಸ್ತನು ಸಾರಿದ ಪ್ರೀತಿ, ಕ್ಷಮೆ ಹಾಗೂ ಸಹೋದರತ್ವದ ಸಂದೇಶವನ್ನು ನೆನಪಿಸಿಕೊಂಡ ಭಕ್ತರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಈ ವೇಳೆ ಕ್ರಿಸ್ಮಸ್ ಹಬ್ಬದ ಸಂತೋಷ ಎಲ್ಲರ ಮುಖದಲ್ಲೂ ಸ್ಪಷ್ಟವಾಗಿ ಕಂಡುಬಂತು.
ಮಕ್ಕಳಿಗಾಗಿ ಸಾಂಟಾ ಕ್ಲಾಸ್ ವೇಷಧಾರಿಗಳು ವಿಶೇಷ ಆಕರ್ಷಣೆಯಾಗಿದ್ದು, ಮಕ್ಕಳಿಗೆ ಸಿಹಿ ಪದಾರ್ಥಗಳು ಹಾಗೂ ಉಡುಗೊರೆಗಳನ್ನು ವಿತರಿಸಿದರು. ಇದರಿಂದ ಮಕ್ಕಳಲ್ಲಿ ಹಬ್ಬದ ಖುಷಿ ಮತ್ತಷ್ಟು ಹೆಚ್ಚಾಯಿತು. ಕುಟುಂಬ ಸಮೇತವಾಗಿ ಜನರು ಚರ್ಚ್ಗೆ ಆಗಮಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ಪ್ರವಾಸಿ ನಗರಿಯಾಗಿರುವ ಮೈಸೂರಿನಲ್ಲಿ ಕ್ರಿಸ್ಮಸ್ ಸಂಭ್ರಮಕ್ಕೆ ದೇಶಿ ಹಾಗೂ ವಿದೇಶಿ ಪ್ರವಾಸಿಗರೂ ಸಾಕ್ಷಿಯಾದರು. ಸಂತ ಫಿಲೊಮಿನಾ ಚರ್ಚ್ನಲ್ಲಿ ನಡೆದ ಹಬ್ಬದ ಆಚರಣೆಗಳು ಪ್ರವಾಸಿಗರನ್ನು ಆಕರ್ಷಿಸಿತು. ಚರ್ಚ್ ಸುತ್ತಮುತ್ತ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದ್ದು, ಭದ್ರತೆ ಹಾಗೂ ಸಂಚಾರ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿತ್ತು.
ಮೈಸೂರು ನಗರದ ಎಲ್ಲ ಚರ್ಚ್ಗಳಲ್ಲಿ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿದ್ದು, ಗುರುವಾರ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಪ್ರಾರ್ಥನೆಗಳು ಜರುಗಿತು.


