‘ಮುಂದೆ ಗುರಿ; ಹಿಂದೆ ಗುರು ಇದ್ದರೆ ಸಾಧನೆ ಸರಳಸಾಧ್ಯ. ಗುರಿ ಮತ್ತು ಗುರುವಿನ ಜತೆಗೆ ಪೋಷಕರ ಬೆಂಬಲ; ಸಾಧಿಸುವ ತೀವ್ರ ಹಂಬಲ ಇದ್ದರೆ ಸಾಧನೆಯ ಹಾದಿ ಶೀಘ್ರ ಕ್ರಮಿಸಲು ಸಾಧ್ಯ…’
ಹೌದು, ಮೈಸೂರಿನ ಕರಾಟೆಪಟು ಎಸ್. ಸುಭಾಷ್ ಅವರ ಕ್ರೀಡಾ ಸಾಧನೆಯ ವಿಷಯದಲ್ಲಿ ಮೇಲಿನ ಮಾತು ಅಕ್ಷರಶಃ ನಿಜವಾಗಿದೆ. ಶ್ರೀಲಂಕಾದಲ್ಲಿ ಇತ್ತೀಚೆಗೆ ಏಷಿಯನ್ ಕರಾಟೆ ಫೆಡರೇಷನ್ ನಡೆಸಿದ ತೀರ್ಪುಗಾರರ ಆಯ್ಕೆ ಪರೀಕ್ಷೆಯಲ್ಲಿ ಇವರು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದಾರೆ. ಈ ಮೂಲಕ ಮೈಸೂರು, ಕರ್ನಾಟಕ ಮಾತ್ರವಲ್ಲ, ಭಾರತದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಏಷಿಯನ್ ಕರಾಟೆ ಫೆಡರೇಷನ್ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. ಅಂದಹಾಗೆ, ಎಸ್. ಸುಭಾಷ್ ಅವರಿಗೆ ಈಗ 23ರ ಹರೆಯ. ಈ ಮೊದಲು 24ನೇ ವಯಸ್ಸಿನಲ್ಲಿ ಒಬ್ಬರು ಈ ಸಾಧನೆ ಮಾಡಿದ್ದ ದಾಖಲೆ ಅವರ ಹೆಸರಿನಲ್ಲಿ ಇತ್ತು. ಇದೀಗ ಆ ದಾಖಲೆಯನ್ನು ಸರಿಗಟ್ಟಿರುವ ಎಸ್. ಸುಭಾಷ್, ಹೊಸ ದಾಖಲೆ ಬರೆದಿದ್ದಾರೆ.
ಸುಭಾಷ್ ಅವರ ತಂದೆ ಎನ್. ಶಂಕರ್ ಅವರು ಅಂತಾರಾಷ್ಟ್ರೀಯ ಕರಟೆಪಟು ಮತ್ತು ತೀರ್ಪುಗಾರರಾಗಿ ಸಾಕಷ್ಟು ಹೆಸರು ಹಾಗೂ ಸಾಧನೆ ಮಾಡಿದ್ದಾರೆ. ಮೈಸೂರಿನಲ್ಲಿ ನ್ಯಾಷನಲ್ ಕರಾಟೆ ಅಕಾಡೆಮಿ ಸ್ಥಾಪಿಸಿ, ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರು ಕರಾಟೆ ಅಸೋಸಿಯೇಷನ್, ಕರ್ನಾಟಕ ಸ್ಟೇಟ್ ಕರಾಟೆ ಅಸೋಸಿಯೇಷನ್ ಸೇರಿದಂತೆ ಇನ್ನಿತರ ಅನೇಕ ಪ್ರತಿಷ್ಠಿತ ಕರಾಟೆ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಈಗಲೂ ಆ ಸೇವೆಯನ್ನು ಮುಂದುವರಿಸಿದ್ದಾರೆ.
ಕರಾಟೆ ಕಲೆಯ ಅಥವಾ ಆ ಕ್ರೀಡೆಯ ಮೇಲಿನ ಆಸಕ್ತಿ ಸುಭಾಷ್ ಅವರಿಗೆ ಬಹುಷಃ ರಕ್ತಗತವಾಗಿಯೇ ಬಂದಿರಬೇಕು. ಎಲ್ಲರಿಗೂ ಮತ್ತು ಎಲ್ಲ ವಿಷಯಗಳಲ್ಲೂ ಇದು ಸಾಧ್ಯವಿಲ್ಲ. ಅಂದರೆ, ತಂದೆ ಅಥವಾ ತಾಯಿ ಯಾವುದಾದರೂ ಒಂದು ಕಲೆ, ಕ್ರೀಡೆ ಅಥವಾ ಹವ್ಯಾಸದಲ್ಲಿ ಸಾಧಕರಾಗಿದ್ದ ಮಾತ್ರಕ್ಕೆ ಅದು ಅವರ ಮಕ್ಕಳಿಗೂ ಜನ್ಮತಃ ಬಳುವಳಿಯಾಗಿ ಬಂದುಬಿಡುವುದಿಲ್ಲ. ಅದರಲ್ಲಿ ತೀವ್ರವಾದ ಆಸಕ್ತಿ ಮತ್ತು ಪರಿಶ್ರಮ ಬೇಕೇಬೇಕು. ತಂದೆ-ತಾಯಿ ಅದಕ್ಕೆ ಬೆಂಬಲವಾಗಿ ನಿಲ್ಲಬಹುದಷ್ಟೇ. ಸಾಧನೆ ಏನಿದ್ದರೂ ಸಾಧಕನ ಅವಿರತ ಪ್ರಯತ್ನದಿಂದಲೇ ಆಗಬೇಕು.
ಸುಭಾಷ್ ಅವರ ವಿಷಯದಲ್ಲಿಯೂ ಮೇಲಿನ ಮಾತು ಸತ್ಯ ಎಂಬುದನ್ನು ಅವರ ಸಹಾಠಿಗಳು ಮತ್ತು ಒಡನಾಡಿಗಳು ಸಾಕ್ಷೀಕರಿಸುತ್ತಾರೆ.
ಮೂಲತಃ ನಂಜನಗೂಡು ತಾಲೂಕು ಮುಳ್ಳೂರು ಗ್ರಾಮದವರಾದ ಎಸ್. ಸುಭಾಷ್ ಅವರ ತಂದೆ ಎನ್. ಶಂಕರ್ ಅವರಿಗೂ ಕರಾಟೆಗೂ ಎಲ್ಲಿಯ ಮಾಮರ ಎಲ್ಲಿಯ ಕೋಗಿಲೆ ಎಂಬಂತಹ ನಂಟು. ಹೇಗೋ ಏನೋ ಬಾಲ್ಯದಲ್ಲಿಯೇ ಕರಾಟೆಯ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡಿದ್ದ ಎನ್. ಶಂಕರ್ ಅವರು, ಆ ಕಲೆ ಅಥವಾ ಕ್ರೀಡೆಯನ್ನು ಒಲಿಸಿಕೊಳ್ಳಲು ಏಕಾಂಗಿ ಏಕಲವ್ಯನಂತೆ ಸತತ ಪ್ರಯತ್ನ ಮಾಡಿದರು. ಏಕಾಗ್ರತೆ ಮತ್ತು ಪರಿಶ್ರಮದಿಂದ ಅದರಲ್ಲಿ ಯಶಸ್ವಿಯೂ ಆದರು ಎಂಬುದು ಈಗ ಇತಿಹಾಸ. ಆದರೆ ಪ್ರಸ್ತುತ ಎನ್. ಶಂಕರ್ ಅವರ ಪುತ್ರ ಎಸ್. ಸುಭಾಷ್ ಅವರಿಗೆ ಕರಾಟೆ ಎಂಬುದು ಗಗನ ಕುಸುಮವೇನೂ ಆಗಿರಲಿಲ್ಲ ಎಂಬುದು ನಿಜ. ತಂದೆಯೇ ಗುರು ಮತ್ತು ಮನೆಯ ವಾತಾವರಣವೇ ಕರಾಟೆಮಯ ಆಗಿದ್ದರಿಂದ ಅದನ್ನು ಕಲಿಯುವ ಅವಕಾಶ ಮತ್ತು ಅನುಕೂಲಕ್ಕೇನೂ ಕೊರತೆ ಇರಲಿಲ್ಲ. ಅಂದಮಾತ್ರಕ್ಕೆ ಯಾವುದೇ ಕಲೆ, ಕ್ರೀಡೆ ಅಥವಾ ಹವ್ಯಾಸ ತಟ್ಟೆಯಲ್ಲಿ ಇಟ್ಟುಕೊಡುವ ಬಳುವಳಿಯಂತೆ ದಕ್ಕಿಬಿಡುವುದಿಲ್ಲ. ಅದಕ್ಕೆ ತೀವ್ರವಾದ ಆಸಕ್ತಿ, ಸತತ ಪ್ರಯತ್ನ ಮತ್ತು ಪರಿಶ್ರಮ ಬೇಕಲ್ಲವೇ? ಇದೆಲ್ಲವೂ ಎಸ್. ಸುಭಾಷ್ ಅವರಲ್ಲಿ ಇತ್ತು. ಇದಕ್ಕೆ ಕಾರಣ ಅವರ ತಂದೆಯೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಚಿಕ್ಕಂದಿನಿಂದಲೂ ಇಂತಹ ವಾತಾವರಣದಲ್ಲಿಯೇ ಬೆಳೆದ ಎಸ್. ಸುಭಾಷ್ ಅವರು, ಶಾಲಾ-ಕಾಲೇಜು ಶಿಕ್ಷಣದ ಜತೆ ಜತೆಗೆ ಕರಾಟೆಯನ್ನು ವ್ರತದಂತೆ ಅಭ್ಯಾಸ ಮಾಡಿದರು. ಒಂದು ವೇಳೆ ಶಾಲೆ ಅಥವಾ ಕಾಲೇಜಿಗೆ ಒಂದು ದಿನ ತಪ್ಪಿಸಿಕೊಂಡರೂ ಕರಾಟೆ ಅಭ್ಯಾಸ ಅಥವಾ ತರಗತಿಗೆ ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಇಂತಹ ಪ್ರಾಮಾಣಿಕ ತೊಡಗಿಸಿಕೊಳ್ಳುವಿಕೆಯ ಕಾರಣದಿಂದಲೇ ಕರಾಟೆ, ಪ್ರಸ್ತುತ ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೈ ಹಿಡಿದು ಕರೆದೊಯ್ದಿದೆ ಎಂದರೆ ತಪ್ಪಾಗುವುದಿಲ್ಲ.
ಎಸ್. ಸುಭಾಷ್ ಅವರು ಪ್ರಸಕ್ತ ವರ್ಷವಷ್ಟೇ ಬಿ.ಕಾಂ. ಪದವಿ ಮುಗಿಸಿದ್ದಾರೆ. ಇದರ ಜತೆಗೆ, ಕರಾಟೆ ಬ್ಲಾಕ್ ಬೆಲ್ಟ್ 3ನೇ ಡಾನ್ ಆಗಿದ್ದಾರೆ. ಭವಿಷ್ಯದಲ್ಲಿ ಇವರಿಗೆ ಸ್ನಾತಕೋತ್ತರ ಪದವಿ ಪಡೆದು ಆ ವಿದ್ಯಾರ್ಹತೆಗೆ ಅನುಗುಣವಾದ ಉದ್ಯೋಗ ಮಾಡುವುದು, ಉದ್ಯಮಿಯೂ ಆಗಿರುವ ತಂದೆಯ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದು ಮತ್ತು ಕರಟೆ ತರಬೇತುದಾರ/ತೀರ್ಪುಗಾರ ಆಗುವುದು ಈ ಮೂರು ಪ್ರಮುಖ ಆಯ್ಕೆಗಳಿವೆ. ಇವುಗಳಲ್ಲಿ ಯಾವುದಕ್ಕೆ ಆದ್ಯತೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟರೆ, ಅವರ ಆಸಕ್ತಿಯ ತಕ್ಕಡಿ ಕರಾಟೆಯ ಕಡೆಗೇ ಹೆಚ್ಚಾಗಿ ತೂಗುತ್ತಿರುವಂತೆ ಭಾಸವಾಗುತ್ತಿದೆ.
ಅದೇನೇ ಆಗಿರಲಿ, ಕರಾಟೆ ಕ್ಷೇತ್ರದಲ್ಲಿನ ಎಸ್. ಸುಭಾಷ್ ಅವರ ಸಾಧನೆ ಭವಿಷ್ಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಎಲ್ಲೆಡೆ ಪಸರಿಸಲಿ-ಪ್ರಜ್ವಲಿಸಲಿ ಎಂಬ ಶುಭಹಾರೈಕೆಗಳು.
ಕೊಲಂಬೋದಲ್ಲಿ ನಡೆದ ಪರೀಕ್ಷೆ
ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಇದೇ ಜುಲೈ 3ರಂದು ಏಷಿಯನ್ ಕರಾಟೆ ಫೆಡರೇಷನ್ ನ (ಎಕೆಎಫ್) ತೀರ್ಪುಗಾರರ ಆಯ್ಕೆ ಪರೀಕ್ಷೆ ನಡೆಯಿತು. ಏಷ್ಯಾ ಖಂಡದ ಸುಮಾರು 45 ದೇಶಗಳ 130ಕ್ಕೂ ಹೆಚ್ಚು ಕರಾಟೆ ತರುಬೇತುದಾರರು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ಭಾರತದ 40ಕ್ಕೂ ಹೆಚ್ಚು ಸ್ಪರ್ಧಿಗಳಿದ್ದರು. ಈ ಪೈಕಿ 18 ಜನರು ಮಾತ್ರ ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಎಕೆಎಫ್ ತೀರ್ಪುಗಾರರಾಗಿ ಅರ್ಹತೆ ಪಡೆದಿದ್ದಾರೆ. ಈ 18 ಅರ್ಹರ ಪೈಕಿ ಎಸ್. ಸುಭಾಷ್ ಒಬ್ಬರಾಗಿದ್ದಾರೆ. ಅಲ್ಲದೆ, ಇವರು ಎಕೆಎಫ್ ಇತಿಹಾಸದಲ್ಲಿಯೇ ಭಾರತದಿಂದ ತೀರ್ಪುಗಾರರಾಗಿ ಅರ್ಹತೆ ಪಡೆದ ಅತ್ಯಂತ ಕಿರಿಯ ವಯಸ್ಸಿನವರು ಎಂಬುದು ವಿಶೇಷ.
ಅಭಿನಂದನೆ-ಪ್ರಮಾಣಪತ್ರ ವಿತರಣೆ
ಕರಾಟೆ ಇಂಡಿಯಾ ಅಸೋಸಿಯೇಷನ್ ಮತ್ತು ಸೌತ್ ಏಷಿಯನ್ ಕರಾಟೆ ಅಸೋಸಿಯೇಷನ್ (ಎಸ್ಎಕೆಎಫ್) ಅಧ್ಯಕ್ಷ ಭರತ್ ಶರ್ಮ, ಚೀನಾದ ವಿಚಾಯೆಲ್, ಎಕೆಎಫ್ ರೆಫರಿ ಕಮಿಷನ್ ಸದಸ್ಯ ತೈಪಾಯ್, ಎಸ್ಎಕೆಎಫ್ ರೆಫರಿ ಕಮಿಷನ್ ಚೇರ್ಮನ್ ಮತ್ತು ಎಕೆಎಫ್ ರೆಫರಿ ಕಮಿಷನ್ ಸದಸ್ಯ ಶಾಯಿನ್ ಅಕ್ತರ್ ಅವರು, ಎಕೆಎಫ್ ತೀರ್ಪುಗಾರರ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಸ್. ಸುಭಾಷ್ ಅವರನ್ನು ಅಭಿನಂದಿಸಿ, ಪ್ರಮಾಣಪತ್ರ ವಿತರಿಸಿದರು.


