ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಜಯಮಾರ್ತಾಂಡ ದ್ವಾರದ ಬಳಿ ಬಲೂನ್ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಪೋಟಗೊಂ ಓರ್ವ ವ್ಯಕ್ತಿ ಮೃತಪಟ್ಟು, ನಾಲ್ವರು ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹಾದೇವಪ್ಪ ಅವರು ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ನಂತರ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಸಂದರ್ಭದಲ್ಲಿ ವ್ಯಾಪಾರ ಮಾಡಲು ಬಂದಿದ್ದ ಸಲೀಂ ಗ್ಯಾಸ್ ಬಲೂನ್ ಮಾರಾಟ ಮಾಡುವಾಗ ಸಿಲಿಂಡರ್ ಸ್ಪೋಟಗೊಂಡು ಈ ಘಟನೆ ಸಂಭವಿಸಿದೆ. ಈತನ ಕುಟುಂಬವೂ ಸಹ ಬೇರೆಡೆ ವ್ಯಾಪಾರ ಮಾಡುತ್ತಿದೆ. ಈ ರೀತಿ ಅನೇಕ ವರ್ಷಗಳಿಂದ ನೂರಾರು ಮಂದಿ ದಸರಾ ವೇಳೆ ಮೈಸೂರಿಗೆ ಬಂದು ವ್ಯಾಪಾರ ಮಾಡುವ ಪದ್ಧತಿ ಇದೆ. ಈ ಘಟನೆ ನಡೆದಿರುವುದು ದುರದೃಷ್ಟಕರ ಎಂದು ತಿಳಿಸಿದರು.
ಈ ಘಟನೆಯಲ್ಲಿ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರ ಪೈಕಿ ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಇವರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದಕ್ಕು ಮುನ್ನ ಡಾ. ಮಹಾದೇವಪ್ಪ ಅವರು ಕೆ.ಆರ್. ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಘಟನೆಯ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಜರಿದ್ದರು.


