Online News in ಕನ್ನಡ

ನಂಜನಗೂಡು: ದಂಪತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

ನಂಜನಗೂಡು: ದಂಪತಿಯ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಾಲೂಕಿನ ಕಳಲೆ ಗ್ರಾಮದಲ್ಲಿ ಜರುಗಿದೆ. ಸುಧಾ (೩೦) ಎಂಬುವರೇ ಕೊಲೆಯಾದ ಮಹಿಳೆ.
ಕಳೆದ ೧೩ ವರ್ಷಗಳ ಹಿಂದೆ ಮೈಸೂರು ತಾಲೂಕಿನ ಜಯಪುರ ಬಳಿಯ ಕಳುವಾಡಿ ಗ್ರಾಮದ ಮಹೇಶ್‌ ಎಂಬಾತನನ್ನು ವಿವಾಹವಾಗಿದ್ದ ಇವರಿಗೆ ಮೂವರು ಮಕ್ಕಳಿದ್ದಾರೆ. ಗಂಡ ಹೆಂಡತಿಯ ನಡುವೆ ಆಗ್ಗಾಗೆ ಜಗಳವಾಗುತ್ತಿದ್ದರಿಂದ ಪತ್ನಿ ಸುಧಾ ಕಳೆದ ಎರಡು ವರ್ಷಗಳಿಂದ ಪತಿಯ ಮನೆಯನ್ನು ತೊರೆದು ತಾಯಿಯ ಊರಲ್ಲಿ ವಾಸವಿದ್ದಳು.
ನಿನ್ನೆ ರಾತ್ರಿ ಕಳಲೆ ಗ್ರಾಮಕ್ಕೆ ಬಂದ ಪತಿ ಮಹೇಶ್‌ ಹೆಂಡತಿಯೊಂದಿಗೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತೆರಳಿ ಪತ್ನಿ ಸುಧಾಳ ಮೇಲೆ ಮರದ ರಿಪೀಸ್‌ ಪಟ್ಟಿಯಿಂದ ತಲೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ತಲೆಯ ಭಾಗದಲ್ಲಿ ರಕ್ತಸ್ತ್ರಾವವಾಗಿ ಸುಧಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ತಂದೆ ತಾಯಿ ಜಗಳದಲ್ಲಿ ತಾಯಿಯನ್ನು ಕಳೆದುಕೊಂಡ ಮಕ್ಕಳ ಆಕ್ರಂಧನ ಮುಗಿಲು ಮುಟ್ಟಿದೆ. ಸುದ್ದಿ ತಿಳಿದು ಸ್ಥಳಕ್ಕೆ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ್‌ ಬಾಲದಂಡಿ, ಎಎಸ್‌ಪಿ ಮಲ್ಲಿಕ್‌, ಡಿವೈಎಸ್ಪಿ ರಘು, ವೃತ್ತ ನಿರೀಕ್ಷಕ ಆನಂದ್‌ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಕೊಲೆ ಮಾಡಿದ ಆರೋಪಿ ಪತಿ ಮಹೇಶ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

Call Now Button