ಕಲ್ಯಾಣ ಕರ್ನಾಟಕದಲ್ಲಿ ಸಮಾನತೆ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಸಂಕಲ್ಪ
ಕಲಬುರಗಿ: ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದ್ದು, ಮುಂದಿನ ದಿನಗಳಲ್ಲಿ ೪೬ ಹೊಸ ತಾಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲಾಗುವುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಅವರು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಲಬುರಗಿ ಇವರ ಸಮುಕ್ತಶ್ರಯದಲ್ಲಿ ಕೆಪಿಎಸ್ ಶಾಲಾ ಆವರಣ ಯಡ್ರಾಮಿ ಯಲ್ಲಿ ಆಯೋಜಿಸಲಾಗಿದ್ದ *ಪ್ರಜಾಸೌಧ. ಕೆಪಿಎಸ್ ಶಾಲೆ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ನಂತರ ವಿವಿಧ ಇಲಾಖೆಗಳ ಕಾರ್ಯಕ್ರಮ ಗಳಿಗೆ ಶಂಕುಸ್ಥಾಪನೆ ನೆರೆವೇರಿಸಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಿ ಮಾತನಾಡಿದರು.

ನೂತನವಾಗಿ ಘೋಷಣೆಯಾಗಿರುವ ಯಡ್ರಾಮಿ ತಾಲ್ಲೂಕಿನಲ್ಲಿ ಜೇವರ್ಗಿ ಮತ ಕ್ಷೇತ್ರದಲ್ಲಿ 906 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ವಿರೋಧ ಪಕ್ಷದವರು ರಾಜಕಾರಣಕ್ಕಾಗಿ ಸುಳ್ಳನ್ನೇ ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಮೂಲಸೌಕರ್ಯ ಕಾಮಗಾರಿಗಳಿಗೆ ಸರ್ಕಾರದಲ್ಲಿ ಅನುದಾನವಿಲ್ಲ ಎಂದು ಎಲ್ಲೆಡೆ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ದಿವಾಳಿಯಾಗಿದ್ದರೆ ಜೇವರ್ಗಿ ಮತ ಕ್ಷೇತ್ರ ಒಂದರಲ್ಲಿ 906 ಕೋಟಿ ಗಳನ್ನು ವೆಚ್ಚ ಮಾಡಲಾಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸರ್ಕಾರ :
ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಯಂತೆ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ವತಿಯಿಂದ 592 ಭರವಸೆಗಳನ್ನು ನೀಡಲಾಗಿತ್ತು. 243 ಭರವಸೆಗಳನ್ನು ಈಡೇರಿಸಲಾಗಿದೆ. ಉಳಿದ ಅವಧಿಯಲ್ಲಿ ಮಿಕ್ಕ ಭರವಸೆಗಳನ್ನು ಈಡೇರಿಸಲಾಗುವುದು ಎಂದರು.
ಕಳೆದ ಬಾರಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಪ್ರಾಣಾಳಿಕೆಯಲ್ಲಿ ಸೇರಿರದ 30 ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿತ್ತು. ಎರಡೂವರೆ ವರ್ಷದಲ್ಲಿ ಕೊಟ್ಟ ಎಲ್ಲಾ ಭರವಸೆಗಳ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲಾಗಿದೆ ಎಂದರು. ಬಿಜೆಪಿ 2018 ರಿಂದ ಅಧಿಕಾರದಲ್ಲಿದ್ದು, ಅವರು ನೀಡಿದ್ದ 600 ಭರವಸೆಗಳಲ್ಲಿ 10% ಭರವಸೆಗಳನ್ನು ಈಡೇರಿಸಲಾಗಲಿಲ್ಲ ಎಂದು ತಿಳಿಸಿದರು.

49 ತಾಲ್ಲೂಕುಗಳಲ್ಲಿ ಕೂಡ ಪ್ರಜಾಸೌಧ ಮಂಜೂರುರಾಜ್ಯದಲ್ಲಿ 63 ಹೊಸ ತಾಲೂಕುಗಳನ್ನು ಘೋಷಣೆ ಮಾಡಲಾಗಿತ್ತು. 2018 ರಿಂದ 2023 ರವರೆಗೆ ನೂತನ ತಾಲ್ಲೂಕುಗಳಿಗೆ ಬಿಜೆಪಿ ಸೌಲಭ್ಯ ಒದಗಿಸಿದ್ದು ಕೇವಲ 14 ತಾಲ್ಲೂಕುಗಳಲ್ಲಿ ಮಾತ್ರ ಮಾಡಿದರು. 2023 ರಲ್ಲಿ ಅಧಿಕಾರಕ್ಕೆ ಬಂದ ನಂತರ 49 ತಾಲ್ಲೂಕುಗಳಲ್ಲಿ ಕೂಡ ಪ್ರಜಾಸೌಧಗಳನ್ನು ಮಂಜೂರು ನಮ್ಮ ಸರ್ಕಾರ ಮಾಡಿದ್ದು, ನಿರ್ಮಾಣ ಮಾಡಲಾಗುವುದು ಎಂದರು.
ಬಿಜೆಪಿ ವತಿಯಿಂದ ಕಲ್ಯಾಣ ಕರ್ನಾಟಕದಲ್ಲಿ 19 ತಾಲ್ಲೂಕುಗಳು ಮಂಜೂರಾಗಿದ್ದರೆ, ಕೇವಲ ಎರಡು ಕಟ್ಟಡ ಮಾತ್ರ ನಿರ್ಮಾಣವಾಗಿದೆ. ನಮ್ಮ ಸರ್ಕಾರ 17 ತಾಲ್ಲೂಕುಗಳು ಮಂಜೂರಾಗಿದ್ದು,97 ನಾಡ ಕಚೇರಿಗಳು ಮಂಜೂರಾಗಿವೆ. ಕಲ್ಯಾಣ ಕರ್ನಾಟಕದಲ್ಲಿ 39 ಕಚೇರಿಗಳನ್ನು ಮಂಜೂರು ಮಾಡಲಾಗಿದೆ. ಎರಡನೇ ಹಂತದಲ್ಲಿ 53 ನಿರ್ಮಾಣವಾಗಿವೆ. ಕಲ್ಯಾಣ ಕರ್ನಾಟಕದ 25 ತಾಲ್ಲೂಕುಗಳಲ್ಲಿ ನಾಡ ಕಚೇರಿಗಳನ್ನು ನಮ್ಮ ಸರ್ಕಾರ ಮಂಜೂರು ಮಾಡಿದೆ ಎಂದರು.
ಬಿಜೆಪಿ ಕೇವಲ ಕೋಮುವಾದ ಮಾಡುವ ಕೆಲಸ ಮಾಡಿದೆ ಎಂದರು. ಕೋಮುವಾದ, ಹಿಂದುತ್ವ ಎಂದು ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ದೂರಿದರು.
ರೈತರ ಪರವಾದ ಸರ್ಕಾರ :
ಈ ಬಾರಿ ಮಳೆ ಹೆಚ್ಚಾಗಿ ಬೆಳೆ ಹಾನಿಯಾಗಿರುವುದರಿಂದ ವೈಮಾನಿಕ ಸಮೀಕ್ಷೆ ಕೈಗೊಂಡು ಪರಿಶೀಲಿಸಿ ಪರಿಹಾರ ಕೊಡಲು ನಿರ್ಧರಿಸಿ ಎಸ್ ಡಿ.ಆರ್.ಎಫ್ ನಿಂದ 1218 ಕೋಟಿ ಜೊತೆಗೆ ಸರ್ಕಾರದ ವತಿಯಿಂದ ಒಟ್ಟು 1031ಕೋಟಿ ಹೆಚ್ಚುವರಿಯಾಗಿ ಒದಗಿಸಲಾಗಿದೆ.ರಾಜ್ಯದಲ್ಲಿ ಒಟ್ಟು 14.21 ಲಕ್ಷ ರೈತರ ಬೆಳೆ ಹಾನಿಯಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ 721786 ರೈತರ ಬೆಳೆ ಹಾನಿಗೊಳಗಾಗಿದೆ. 1072 ಕೋಟಿ ಬೆಳೆ ಹಾನಿಗೆ ಪರಿಹಾರ ನೀಡಿದೆ. ಕಲಬುರ್ಗಿ ಜಿಲ್ಲೆಯಲ್ಲಿ 323318 ರೈತರ ಬೆಳೆ ಹಾನಿಯಾಗಿದ್ದು 498 ಕೋಟಿ ಪರಿಹಾರ ನೀಡಲಾಗಿದೆ ಎಂದರು.
ರೈತರ ಖಾತೆಗಳಿಗೆ ಅನುದಾನವನ್ನು ತಲುಪಿಸುವ ಕೆಲಸ ಮಾಡಿದ್ದೇವೆ. ರೈತರ ಸಹಾಯಕ್ಕೆ ಸರ್ಕಾರ ಸದಾ ಮುಂದಾಗಿದೆ. ನೆಟ್ಟೆ ರೋಗಕ್ಕೆ ತುತ್ತಾದ ತೊಗರಿ ಬೆಳೆಗೆ 233 ಕೋಟಿ ರೂ. ಗಳನ್ನು ಒದಗಿಸಲಾಗಿದೆ. ಕಬ್ಬಿನ ಬೆಲೆ ಕಡಿಮೆ ಎಂದು ರೈತರು ಪ್ರತಿಭಟಿಸಿದಾಗ ಅವರ ನೆರವಿಗೆ ಸರ್ಕಾರ ಧಾವಿಸಿ ಸರ್ಕಾರದಿಂದ 50 ಹಾಗೂ ಕಾರ್ಖಾನೆಯಿಂದ 50 ರೂ. ನಿಗದಿ ಮಾಡಿ 300 ಕೋಟಿ ಗಳನ್ನು ಸರ್ಕಾರದಿಂದ ಕಬ್ಬಿನ ಬೆಳೆಗಾರರಿಗೆ ನೀಡಲಾಗಿದೆ ಎಂದರು.
ಎಐಸಿಸಿ ಅಧ್ಯಕ್ಷರೂ, ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ್, ಕ್ಷೇತ್ರದ ಶಾಸಕರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಸಚಿವರಾದ ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರೂ ಶಾಸಕರೂ ಆದ ಅಜಯ್ ಸಿಂಗ್, ಎಂಎಲ್‌ಸಿ ಜಗದೇವ ಗುತ್ತೇದಾರ್, ಚಂದ್ರಶೇಖರ್ ಪಾಟೀಲ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

