ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯಪಾಲರ ಭಾಷಣ ಪ್ರಸಂಗ ಎರಡು ಸಾಲುಗಳಲ್ಲಿ ಅಂತ್ಯಗೊಂಡಿದೆ. ಇಂದಿನಿಂದ ಆರಂಭಗೊಂಡಿರುವ ವಿಧಾನ ಮಂಡಲದ ಜಂಟಿ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಕೇವಲ ಸ್ಪೀಕರ್ ಮತ್ತು ಗಣ್ಯರಿಗೆ ಶುಭಾಶಯ ಕೋರಿ ನಂತರ ಇಡೀ ಭಾಷಣವನ್ನು ಓದರೆ ಹೊರ ನಡೆದರು.
ವಿಧಾನಸೌಧದಲ್ಲಿ ಭಾಷಣ ಮಾಡಿದ ರಾಜ್ಯಪಾಲರು, “ನನ್ನ ಸರ್ಕಾರವು ರಾಜ್ಯದ ಅರ್ಥಿಕ, ಸಾಮಾಜಿಕ, ಭೌತಿಕ ಅಭಿವೃದ್ಧಿಯನ್ನು ದ್ವಿಗುಣ ಮಾಡಲು ಬದ್ಧವಾಗಿದೆ. ಜೈ ಹಿಂದ್, ಜೈ ಕರ್ನಾಟಕ” ಎಂದಷ್ಟೇ ಹೇಳಿ, ಭಾಷಣ ಮುಗಿಸಿದ್ದಾರೆ.

ರಾಜ್ಯಪಾಲರು ಭಾಷಣ ಪೀಠದಿಂದ ಕೆಳಗಿಳಿದು ಬಂದಾಗ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ರಾಜ್ಯಪಾಲರಿಗೆ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರನ್ನು ಅಡ್ಡಗಟ್ಟಿ ಭಾಷಣ ಓದುವಂತೆ ಕೇಳಿಕೊಂಡರು.
ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದರು. ಈ ಬಗ್ಗೆ ಸರ್ಕಾರದ ಸಚಿವರು ಕಿಡಿ ಕಾರಿದ್ದರು. ಸರ್ಕಾರ ಬರೆದುಕೊಟ್ಟ ಭಾಷಣ ಬದಲು ಇಂದು ಅವರೇ ಭಾಷಣ ಬರೆದುಕೊಂಡು ಬಂದು ಓದುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅದನ್ನು ಕೂಡ ಓದದೆ ಇಂದು ರಾಜ್ಯಪಾಲರು ನಿರ್ಗಮಿಸಿದ್ದಾರೆ.
ಇದಕ್ಕೆ ಆಡಳಿತ ಪಕ್ಷದ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ವಿಧಾನಸಭೆ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.


