Online News in ಕನ್ನಡ

ರಾಜ್ಯಪಾಲರಿಂದ ಸಂವಿಧಾನದ ಉಲ್ಲಂಘನೆ, ಜನಪ್ರತಿನಿಧಿಗಳ ಸಭೆಗೆ ಅವಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಾಗಿ ಸಂವಿಧಾನವನ್ನು ಉಲ್ಲಂಘಿಸಿ, ಜನಪ್ರತಿನಿಧಿಗಳ ಸಭೆಗೆ ಅವಮಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಎರಡು ಸಾಲುಗಳಿಗೆ ಭಾಷಣ ಮೊಟಕುಗೊಳಿಸಿ ಹೊರ ನಡೆದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ನಡೆಯನ್ನು ಸರಕಾರ ತೀವ್ರವಾಗಿ ಖಂಡಿಸಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂವಿಧಾನದ ಕಲಂ 176 ಮತ್ತು 163ರ ಪ್ರಕಾರ ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಬರೆದುಕೊಟ್ಟ ಭಾಷಣವನ್ನು ಓದಲೇಬೇಕು. ಆದರೆ, ಅವರೇ ಸಿದ್ದಪಡಿಸಿಕೊಂಡ ಒಂದು ವಾಕ್ಯವನ್ನು ಓದಿ ಸಂವಿಧಾನದ ಆಶಯ ಮತ್ತು ಜನಪ್ರತಿನಿಧಿಗಳ ಸಭೆಗೆ ಅವಮಾನ ಮಾಡಿದ್ದಾರೆ. ಇದರ ವಿರುದ್ಧ ಸರಕಾರ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ಮನರೇನಾ ಮರುಸ್ಥಾಪನೆಗೆ ಹೋರಾಟ :
ಇಂದು ವರ್ಷದ ಮೊದಲ ಜಂಟಿ ಅಧಿವೇಶನ ಮತ್ತು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ರದ್ದುಪಡಿಸಿ, ವಿಬಿಜಿರಾಮ್ ಜಿ ( ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಎಂಬ ಕಾಯ್ದೆಯನ್ನು ಕೇಂದ್ರ ಸರ್ಕಾರ ಹೊಸದಾಗಿ ರಚಿಸಿದೆ. ಇದಕ್ಕೆ ನಮ್ಮ ಸರ್ಕಾರದ ತೀವ್ರ ವಿರೋಧವಿದೆ ಎಂದರು.


ಕೆಲಸದ ಹಕ್ಕು ಖಾತ್ರಿಪಡಿಸುವ ಮನರೇಗಾ:
ಮೊದಲನೆಯದಾಗಿ ಕಾಯ್ದೆಯಿಂದ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆಯಲಾಗಿದೆ. 2005 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಸಂವಿಧಾನ ನಿರ್ದೇಶನಗಳಂತೆ, ಆಹಾರ ಭದ್ರತೆ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಉದ್ಯೋಗದ ಹಕ್ಕು ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಬಡ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಕಾಲ ಉದ್ಯೋಗ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಈ ಕಾಯ್ದೆಯಿಂದ ದಲಿತರು, ಕಾರ್ಮಿಕರು ಮತ್ತು ಮಹಿಳೆಯರು ಮತ್ತು ಸಣ್ಣ ರೈತರಿಗೆ ಅನುಕೂಲವಾಗುತ್ತದೆ ಎಂದರು.
ವರ್ಷ ಪೂರ್ತಿ ಕೆಲಸದ ಭರವಸೆ ಇಲ್ಲ :
ಹೊಸ ಕಾಯ್ದೆಯಲ್ಲಿ ವಿಶೇಷವಾಗಿ ಶೇ.53 ಮಹಿಳೆಯರು, ಶೇ.28 ದಲಿತರಿದ್ದು, ಇವರಿಗೆ ಉದ್ಯೋಗದ ಖಾತ್ರಿ ಇಲ್ಲ. ಅವರು ಅಪೇಕ್ಷಿಸಿದ ಸ್ಥಳದಲ್ಲಿ, ಸಣ್ಣ ರೈತರು ಅವರ ಜಮೀನುಗಳಲ್ಲಿಯೇ ಕೆಲಸ ಮಾಡುವ ಅವಕಾಶವನ್ನು ಮುಂಚಿನ ಕಾಯ್ದೆ ಕಲ್ಪಿಸಿತ್ತು. ಆದರೆ ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿ ಈ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತದೆ. ಕೇಂದ್ರ ಸರ್ಕಾರ ನಿರ್ಧರಿಸುವ ಕಡೆಗಳಲ್ಲಿ ಬಡ ಕಾರ್ಮಿಕರು ಕೆಲಸ ಮಾಡಬೇಕಾಗಿದೆ.
ಹಿಂದಿನ ಕಾಯ್ದೆಯಲ್ಲಿ ವರ್ಷದ 365 ದಿನಗಲ್ಲಿ ಯಾವಾಗಾಲಾದರೂ ಕೆಲಸ ಕೊಡಬಹುದಾಗಿದ್ದು, ಅದು ಸರ್ಕಾರದ ಕರ್ತವ್ಯವಾಗಿತ್ತು. ಅಲ್ಲದೇ, ಈ ಬಗ್ಗೆ ಕ್ರಿಯಾಯೋಜನೆ ರಚಿಸುವ ಹಕ್ಕು ಆಯಾ ಗ್ರಾಮಸಭೇ ಮತ್ತು ಪಂಚಾಯ್ತಿಗಳಿಗೆ ಅವಕಾಶವಿತ್ತು. ಆದರೆ ಈ ಹೊಸ ಕಾಯ್ದೆಯಲ್ಲಿ ಈ ಅವಕಾಶವನ್ನು ರದ್ದು ಪಡಿಸಲಾಗಿದೆ ಎಂದು ವಿವರಿಸಿದರು.


ಬಿಜೆಪಿಯಿಂದ ಉದ್ದೇಶಪೂರ್ವಕ ಸಮರ್ಥನೆ:
ಹೊಸ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸ್ವಾತಂತ್ರ್ಯವಿಲ್ಲ ಹಾಗೂ ಕೇಂದ್ರದ ಕಾಯ್ದೆಯಗಳನ್ನು ಸಹಕರಿಸಲೇಬೇಕೆಂಬ ನೀತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಆಡಳಿತ ಪಕ್ಷವಾಗಿ ನಮಗೆ ಅದರ ಬಗ್ಗೆ ವಿರೋಧವಿದ್ದು, ಈ ವಿಚಾರಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು ಎಂದರು.
ಹೊಸ ಕಾಯ್ದೆ ರದ್ದುಗೊಳ್ಳಲೇಬೇಕು
ಮನರೇಗಾ ಕಾಯ್ದೆಯನ್ನು ಮರುಸ್ಥಾಪಿಸುವುದು ಮತ್ತು ಹೊಸ ಕಾಯ್ದೆಯನ್ನು ರದ್ದುಗೊಳಿಸಬೇಕೆಂಬುದೇ ನಮ್ಮ ಉದ್ದೇಶ. ನಮ್ಮ ಪಕ್ಷ ಮತ್ತು ಸರ್ಕಾರದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಮನರೇಗಾ ಮರುಸ್ಥಾಪನೆ ಮಾಡುವವರೆಗೆ ನಿರಂತರವಾಗಿ ನಮ್ಮ ಹೋರಾಟ ನಡೆಯಲಿದೆ. ಈ ಹಿಂದೆ ರೈತರ ವಿರೋಧಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ಸು ತೆಗೆದುಕೊಂಡಂತೆ, ಈ ಹೊಸ ಕಾಯ್ದೆಯನ್ನು ವಾಪಸ್ಸು ತೆಗೆದುಕೊಳ್ಳುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದರು.
ಚರ್ಚೆಯ ನಂತರ ಮುಂದಿನ ನಿರ್ಣಯ
ಸರ್ಕಾರ ಸಿದ್ಧಪಡಿಸಿರುವ ಭಾಷಣದ ಪ್ರತಿಯನ್ನು ಎಲ್ಲ ಶಾಸಕರು ಎಂಎಲ್ ಸಿಗಳಿಗೆ ವಿತರಿಸಲಾಗಿದೆ. ಈ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಮೊಕ್ಕದ್ದಮೆ ಹೂಡುವ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಇದರ ಬಗ್ಗೆ ಚರ್ಚಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾನೂನು ಸಚಿವ ಹೆಚ್.ಕೆ.ಪಾಟೀಲ್‌ ಹಾಜರಿದ್ದರು.

Call Now Button