Online News in ಕನ್ನಡ

ಅಂತಾರಾಜ್ಯ ಬಾಡಿಗೆ ಉದ್ಯಮಿಗಳ ಮೇಲೆ ಕಣ್ಗಾವಲು : ಎಚ್ಚೆತ್ತ ಮೈಸೂರು ಪೊಲೀಸರು

ಹೊರ ರಾಜ್ಯದವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಕ್ರಿಮಿನಲ್‌ ಹಿನ್ನಲ್ಲೆ ಪರಿಶೀಲನೆ ಕಡ್ಡಾಯ: ನಗರ ಪೊಲೀಸ್‌ ಇಲಾಖೆ ಸೂಚನೆ

ಮೈಸೂರು: ಹೊರಗಿನಿಂದ ಉದ್ಯಮಕ್ಕೆ ಬರುವ ಉದ್ಯಮಿದಾರರ ಬಗ್ಗೆ ನಿಗ ವಹಿಸಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಮೈಸೂರು ನಗರ ಪೊಲೀಸರು ಇಂದು ನಗರ ವ್ಯಾಪ್ತಿಯ ಎಲ್ಲ ಕೈಗಾರಿಕೋದ್ಯಮಿಗಳು, ಕಂಪನಿಗಳ ಮಾಲೀಕರು ಮತ್ತು ಬಾಡಿಗೆ ಪಡೆದ ಉದ್ಯಮಿದಾರರ ಸಭೆ ನಡೆಸಿದ್ದಾರೆ.


ನಗರದ ಹೆಬ್ಬಾಳದ ಕೆಸಿಜಿ ಸಮುದಾಯ ಭವನದಲ್ಲಿ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ನೇತೃತ್ವದಲ್ಲಿ ನಗರ ವ್ಯಾಪ್ತಿಯ ಉದ್ಯಮಿಗಳಿಗೆ ಹಲವು ಮಾರ್ಗಸೂಚಿಗಳನ್ನು ನೀಡಲಾಗಿದೆ.


ಕಾರ್ಖಾನೆ ಅಥವಾ ಕಂಪನಿ ಮಾಲೀಕರು ಮತ್ತು ಕಟ್ಟಡಗಳ ಮಾಲೀಕರು ಬಾಡಿಗೆ ಉದ್ಯಮಿಗಳಿಗೆ ಕಟ್ಟಡಗಳನ್ನು ಬಾಡಿಗೆಗೆ ನೀಡುವಾಗ ಅವರ ಪೂರ್ವಾಪರಗಳನ್ನು ಪರಿಶೀಲಿಸಿ ನಂತರ ಬಾಡಿಗೆಗೆ ನೀಡಬೇಕು.
ಬಾಡಿಗೆ ಉದ್ದಿಮೆದಾರರು ಅಂತರ ಜಿಲ್ಲಾ ಮತ್ತು ಅಂತರ ರಾಜ್ಯ ಕಾರ್ಮಿಕರುಗಳನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವಾಗ ಕಡ್ಡಾಯವಾಗಿ ಅಂತಹ ಕಾರ್ಮಿಕರುಗಳನ್ನು ನೇಮಿಸುವ ಸಂದರ್ಭದಲ್ಲಿ ಅವರುಗಳ ಪೂರ್ವಾಪರ ಹಾಗೂ ಅಪರಾಧಿಕ ಹಿನ್ನೆಲೆಗಳನ್ನು ಪೊಲೀಸರಿಂದ ಪರಿಶೀಲಿಸಿ ನಂತರ ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಕಟ್ಟಡಗಳ ಮಾಲೀಕರುಗಳು ಬಾಡಿಗೆ ಉದ್ಯಮಿಗಳಿಗೆ ಕಟ್ಟಡ ನೀಡುದ ನಂತರ ಸದರಿ ಕಟ್ಟಡಗಳಲ್ಲಿ ನಿಗದಿತ ಉದ್ದೇಶದ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮಾಲೀಕರು ಕಾಲಕಾಲಕ್ಕೆ ನಿಗಾವಹಿಸಬೇಕು. ಒಂದು ವೇಳೆ ಅಂತಹ ಕಟ್ಟಡಗಳಲ್ಲಿ ಸಂಶಯಾಸ್ಪದ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಆಯುಕ್ತರು ತಿಳಿಸಿದ್ದಾರೆ.
ಪ್ರಮುಖವಾಗಿ ರಾಸಾಯನಿಕ ಮತ್ತು ಸುಗಂಧ ದ್ರವ್ಯಗಳ ಉತ್ಪಾದನಾ ಘಟಕಗಳ ಉದ್ಯಮಿಗಳು ಹಾಗೂ ಮಾಲೀಕರುಗಳಿಗೆ ಸದರಿ ಘಟಕಗಳ ಮೇಲೆ ಪೊಲೀಸರು ತಪಾಸಣೆ ನಡೆಸಿ ಹೆಚ್ಚಿನ ಕಣ್ಗಾವಲು ನಡೆಸುತ್ತಿದ್ದು, ಅಂತಹ ಘಟಕಗಳಲ್ಲಿ ಅಕ್ರಮ ಹಣ ಸಂಪಾದಿಸುವ ಉದ್ದೇಶದಿಂದ ಸಂಶಯಾಸ್ಪದ ಚಟುವಟಿಕೆಗಳನ್ನು ನಡೆಸುವುದು ಕಂಡು ಬಂದಲ್ಲಿ ಕಟ್ಟು ನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಭೆಯಲ್ಲಿ ಡಿಸಿಪಿ ಸುಂದರ್‌ ರಾಜ್‌ ಸೇರಿದಂತೆ ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳು, ಕಾರ್ಖಾನೆ ಮತ್ತು ಬಾಯ್ಲರ್‌ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಪರಿಸರ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಮಾಲಿನ್ಯ ಮಂಡಳಿ ಹಾಗೂ ಜಿಲ್ಲಾ ಮಟ್ಟದ ಅಧದಿಕಾರಿಗಳು ಭಾಗವಹಿಸಿ ಅಗತ್ಯ ಸೂಚನೆ ಸಲಹೆ ನೀಡಿದರು.
ಹಾಗೂ ಮೈಸೂರು ನಗರ ವ್ಯಾಪ್ತಿಯ ಕೈಗಾರಿಕಾ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಕೈಗಾರಿಕೋದ್ಯಮಿಗಳು, ಮಾಲೀಕರು ಮತ್ತು ಬಾಡಿಗೆ ಉದ್ಯಮಿಗಳು ಹಾಜರಿದ್ದರು.

Call Now Button