ಮೈಸೂರು: ಟಿ.ನರಸೀಪುರದಲ್ಲಿ ಕೆಎಸ್ಐಸಿ ಕಾರ್ಖಾನೆಗೆ ಮೀಸಲಿಟ್ಟ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಹೊರಟಿರುವ ರಾಜ್ಯ ಸರಕಾರದ ಕ್ರಮ ಸರಿಯಿಲ್ಲ. ಈ ವರ್ಷ ೯೬ ಕೋಟಿ ರೂ. ಲಾಭ ಮಾಡಿರುವ ಕಾರ್ಖಾನೆಯನ್ನು ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಟಿ.ನರಸೀಪುರದಲ್ಲಿ ಕೆಎಸ್ಐಸಿ ಕಾರ್ಖಾನೆ ಉಳಿಸಲು ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದ ಆರ್. ಅಶೋಕ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಮೈಸೂರು ಸಿಲ್ಕ್ ಸೀರೆಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಚನ್ನಪಟ್ಟಣ ಫ್ಯಾಕ್ಟರಿಯಲ್ಲಿ ಒಂದು ತಿಂಗಳಿಗೆ ೧೨೦೦ ಸೀರೆಗಳ ಉತ್ಪಾದನೆ ಆಗುತ್ತಿದೆ. ಆದರೆ, ೧೦ ಸಾವಿರ ಸೀರೆಗೆ ಬೇಡಿಕೆ ಇದೆ. ಇಂತಹ ಐತಿಹಾಸಿಕ, ಪ್ರತಿಷ್ಠಿತ, ಲಾಭದಾಯಕ ಕಾರ್ಖಾನೆಯನ್ನು ಮುಚ್ಚುವುದು ಸೂಕ್ತವಲ್ಲ ಎಂದು ತಿಳಿಸಿದರು.

ಮೈಸೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ದೇವಸ್ಥಾನಗಳಿಗೆ ಹೋಗಿ ನಾಮದ ಮೇಲೆ ನಾಮ ಹಾಕಿಕೊಂಡು ಓಡಾಡುತ್ತಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಅವರ ಬಾಯಲ್ಲಿ ಒಂದೇ ಒಂದು ದಿನವೂ ಒಪ್ಪಂದದ ಮಾತು ಬಂದಿಲ್ಲ. ಕಾಂಗ್ರೆಸ್ ಪಕ್ಷದ ಈ ಅಧಿಕಾರ ಹಂಚಿಕೆ ಪ್ರಹಾಸನವನ್ನು ನೋಡಿಕೊಂಡು ನಾವು ಎಂಜಾಯ್ ಮಾಡುತ್ತಿದ್ದೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದರು.
ರಾಜ್ಯ ಕಾಂಗ್ರೆಸ್ ಗೊಂದಲಕ್ಕೆ ಇತಿಶ್ರೀ ಹಾಡುವ ಯೋಗ್ಯತೆ ಕಾಂಗ್ರೆಸ್ ಹೈಕಮಾಂಡ್ಗೆ ಇಲ್ಲ. ಸಿದ್ದರಾಮಯ್ಯ ಯಾವಾಗಲೂ ಬಸ್ನಲ್ಲಿ ಟವೆಲ್ ಇಟ್ಕೊಂಡು ಕೂತಿರುತ್ತಾರೆ. ಸಿಎಂ ತಮ್ಮ ಕುಚ್ಚಿಗೆ ಫೆವಿಕಾಲ್ ಹಾಕಿಕೊಂಡಿದ್ದಾರೆ ಎಂದು ಟೀಕಿಸಿದರು.

ಮೈಸೂರು: ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಇವರ ಪತ್ರ ನಿಖಿಲ್ ಕುಮಾರಸ್ವಾಮಿ ಮಾಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್. ಅಶೋಕ್, ಮುಂದಿನ ಸಿಎಂ ಯಾರು ಎಂಬುದು ಯಾವ ತೀರ್ಮಾನವೂ ನಮ್ಮಲ್ಲಿ ಆಗಿಲ್ಲ. ಕೂಸು ಹುಟ್ಟುವುದಕ್ಕಿಂತ ಮೊದಲು ಕುಲಾವಿ ಹೊಲಿಸುವುದು ಸರಿಯಲ್ಲ. ಮೊದಲು ಒಟ್ಟಾಗಿ ಚುನಾವಣೆ ಎದುರಿಸೋಣ. ನಂತರ ಸಿಎಂ ಪ್ರಶ್ನೆ ಹೈಕಮಾಂಡ್ ತೀರ್ಮಾನಕ್ಕೆ ಬಿಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಭಾಗದಲ್ಲಿ ಸುಮಾರು ೪೩೦ ಬೆಲೆ ಬಾಳುವ ಮರಗಳನ್ನು ಕಡಿದು ಕ್ರೀಡಾಂಗಣ ಮಾಡುವ ಅನಿವಾರ್ಯತೆ ಇದೆಯೇ ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಗುತ್ತಿಗೆದಾರನಿಗೆ ೧೨ ಕೋಟಿ ರೂ. ಗುತ್ತಿಗೆ ಸಿಕ್ಕಿದೆ. ಇದಕ್ಕಾಗಿ ಈ ಪರಿ ಅವಸರ ಮಾಡುತ್ತಿದ್ದಾರೆ. ಕಾಂಗ್ರೆಸ್ನ ದೊಡ್ಡ ಲೀಡರ್ ಒಬ್ಬರ ರೇಷ್ಮೆ ನೂಲು ತೆಗೆಯುವ ಕಾರ್ಖಾನೆ ಇದೆ. ಅವರಿಗೆ ಅನುಕೂಲ ಕಲ್ಪಿಸಲು ಕಾರ್ಖಾನೆಯನ್ನು ಮುಚ್ಚುವ ಹುನ್ನಾರ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಕ್ರೀಡಾಂಗಣ ಆದ ಮೇಲೆ ಕ್ರೀಡಾಂಗಣ ಉಳಿಸಿ ಕಾರ್ಖಾನೆ ಮುಚ್ಚಿ ಎನ್ನುವ ಹೋರಾಟವನ್ನು ಇವರೇ ಶುರು ಮಾಡಿಡುತ್ತಾರೆ. ಕೆ.ಎಸ್.ಐಸಿಯಲ್ಲಿ ಬಂದ ೯೬ ಕೋಟಿ ರೂ. ಲಾಭವನ್ನು ಬೆಸ್ಕಾಂಗೆ ಸರಕಾರ ಜಮಾ ಮಾಡಿದೆ.
ಧಾರವಾಡ ವಿದ್ಯಾರ್ಥಿಗಳ ಪ್ರತಿಭಟನೆ:
ಧಾರವಾಡದಲ್ಲಿ ಉದ್ಯೋಗಕ್ಕಾಗಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯು ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿದೆ. ಪೊಲೀಸರೂ ಸಹ ಬಿಜೆಪಿ ಹೋರಾಟ ಅಂತನೇ ಅನುಮತಿ ಕೊಟ್ಟಿದೆ. ಹೋರಾಟಕ್ಕೆ ಬಂದವರು ವಿದ್ಯಾರ್ಥಿಗಳು. ನಮ್ಮ ಬಿಜೆಪಿಯವರು ಕಡಿಮೆ ಇದ್ದರು ಅಷ್ಟೆ. ಆದರೆ, ಆರು ತಿಂಗಳಿಗೆ ಪೊಲೀಸರು ಹೋರಾಟಕ್ಕೆ ಅನುಮತಿ ಕೊಟ್ಟಿರಲಿಲ್ಲ ಎಂದು ಸಮರ್ಥಿಸಿಕೊಂಡರು.
ಸ್ಯಾಂಡಲ್ ಸೋಪ್ ರಾಜಭಾರಿ: ಮೈಸೂರು ಸ್ಯಾಂಡಲ್ ಸೋಪ್ಗೆ ಬಾಲಿವುಡ್ ನಟಿ ತಮ್ಮನಾ ಬಾಟಿಯಾ ಅವರನ್ನು ರಾಯಭಾರಿಯನ್ನಾಗಿ ಮಾಡಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಅಶೋಕ್, ನಮ್ಮ ಕನ್ನಡದ ನಟ ಯಶ್ ದಂಪತಿಗೆ ನೀಡಿದ್ದರೆ ಅವರೇ ಪ್ರಚಾರ ಮಾಡುತಿದ್ದರು ಎಂದು ತಿಳಿಸಿದರು.


