Online News in ಕನ್ನಡ

ರಾಜ್ಯ ಬಜೆಟ್‌ ಮಂಡನೆ: ಮೈಸೂರಿಗೆ ಸಿಎಂ ಕೊಟ್ಟ ಕಡುಗೆಗಳೇನು ?

ಬೆಂಗಳೂರು: ಬಹು ನಿರೀಕ್ಷಿತ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿಗೆ ಆಶಾದಾಯಕ ಬಜೆಟ್‌ ಮಂಡಿಸಿದ್ದಾರೆ. ತಮ್ಮ ಕನಸ್ಸಿನ ಬುತ್ತಿಯನ್ನು ಹೊತ್ತು ವಿಧಾನಸಭೆಯಲ್ಲಿಂದ 17ನೇ ಬಜೆಟ್‌ ಮಂಡಿಸಿದ ಸಿಎಂ, ಹತ್ತು ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.


ವಿಶೇಷವಾಗಿ ತಮ್ಮ ತವರು ಜಿಲ್ಲೆ ಮೈಸೂರಿಗೂ ಒಂದಷ್ಟು ಸುಸ್ಥಿರ ಯೋಜನೆಯನ್ನು ರೂಪಿಸಲಾಗಿದ್ದು, ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ನಗರ ಎಂದು ಘೋಷಿಸಲಾಗಿದೆ. ಇದಕ್ಕೆ ಪೂರಕವಾದ ಕ್ರಿಯಾ ಯೋಜನೆಯನ್ನು ರೂಪಿಸಬೇಕಿದೆ. ಮೈಸೂರಿನ ಪ್ರತಿಷ್ಟಿತ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಉನ್ನತೀಕರಣಗೊಳಿಸಲು ಚಿಂತಿಸಲಾಗಿದ್ದು, ಈಗಿರುವ 400 ಹಾಸಿಗೆಯ ಸಾರ್ಥ್ಯವನ್ನು 600 ಹಾಸಿಗೆಗೆ ಹೆಚ್ಚಿಸಲು 180 ಕೋಟಿ ರೂ. ಮೀಸಲಿಡಲಾಗಿದೆ.


ಮೈಸೂರು ತಾಲೂಕು ತಾಂಡವಪುರದಲ್ಲಿ ಸಿಲ್ಕ ಪಾರ್ಕ್‌ ನಿರ್ಮಾಣದ ಗುರಿ ಹೊಂದಲಾಗಿದ್ದು, ಬಹುದಿನಗಳ ಬೇಡಿಕೆಯಂತೆ ನಗರ ವ್ಯಾಪ್ತಿಗೆ ಸೇರುವ ನರಸಿಂಹರಾಜ ವಿಧಾನಸಭಾ ಕ್ಷೇತ್ರಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಲಾಗುವುದು ಎಂದು ಸಿಎಂ ಬಜೆಟ್‌ನಲ್ಲಿ ಪ್ರಕಟಿಸಿದರು.


ಇನ್ನು ಮೈಸೂರಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿನಿಲಯ ಸ್ಥಾಪನೆ, ಸ್ಥಳೀಯ ಮೇಕೆ ತಳಿಗಳ ಉನ್ನತೀಕರಣಕ್ಕಾಗಿ ಮೈಸೂರಿನಲ್ಲಿ ಬೋಯರ್‌ ಮೇಕೆ ತಳಿ ಸಂವರ್ಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಹಾಗೂ ಪಿರಿಯಾಪಟ್ಟಣ ತಾಲೂಕು ಕಂಪಲಾಪುರದಲ್ಲಿ ಬಂಡೂರು ಕುರಿ ತಳಿ ಸಂವರ್ಧನಾ ಕೇಂದ್ರದ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು ಎಂದರು.


ಮೈಸೂರಿನ ಲಿಂಗಾಂಬುಧಿ ಕೆರೆ ಆವರಣದಲ್ಲಿ ಸಸ್ಯತೋಟದ ಸಮಗ್ರ ಅಭಿವೃದ್ಧಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು 10 ರೂ. ಅನುದಾನ, ಮೈಸೂರು ನಗರದ ಒಳಚರಂಡಿ ವ್ಯವಸ್ಥೆ ಕಾಮಗಾರಿ ಅನುಷ್ಠಾನ, ಈಗಾಗಲೇ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ಅನುದಾನ ನಿಗದಿಯಾಗಿದ್ದು ಪಿಪಿಪಿ (ಪ್ರವೇಟ್‌ ಪಬ್ಲಿಕ್‌ ಪಾರ್ಟಿಸಿಪೇಷನ್)‌ ಮಾದರಿಯಲ್ಲಿ ಹಂತ ಹಂತವಾಗಿ ಫೈವ್‌ ಸ್ಟಾರ್‌ ಹೊಟೇಲ್‌ಗಳು, ಮಾಲ್‌ಗಳು ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು ಎಂದು ಸಿಎಂ ಹೇಳಿದರು.


ಇನ್ನು ಮೈಸೂರು ವಿಮಾನ ನಿಲ್ದಾಣದ ಸನಿಹ ಏರೋಸ್ಪೇಸ್‌ ಪಾರ್ಕ್‌ ಅಭಿವೃದ್ಧಿ, ಮೈಸೂರಿನ ಕಾವಾ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ, ಮೈಸೂರಿನ ದಟ್ಟಗಳ್ಳಿಯಲ್ಲಿ ಆಧುನಿಕ ಸೈಕ್ಲಿಂಗ್‌ ವೆಲೋಡ್ರೋಮ್‌ ಸ್ಥಾಪನೆ, ಮೈಸೂರು ಮೃಗಾಲಯದಲ್ಲಿ ಪ್ರಕೃತಿ ನಿರೂಪಣಾ ಕೇಂದ್ರ ಸ್ಥಾಪನೆ ಹಾಗೂ ನಗರದಲ್ಲಿ ಇ-ಕೋರ್ಟ್‌ ಆರಂಭಕ್ಕೆ ಅನುದಾನ ಮೀಸಲಿಡಲಾಗಿದೆ.
ಒಟ್ಟಾರೆ, ಮೈಸೂರಿಗೆ ಆಶಾದಾಯಕ ಬಜೆಟ್‌ ಎಂಬಂತೆ ಕಾಣುತ್ತಿದ್ದು, ಇವುಗಳು ಅನುಷ್ಠಾನಗೊಂಡರೆ ಇದೊಂದು ಅತ್ಯುತ್ತಮ ಬಜೆಟ್‌ ಅನ್ನುವುದರಲ್ಲಿ ಅನುಮಾನ ಇಲ್ಲ.

ಬಜೆಟ್‌ ಹೈ ಲೈಟ್ಸ್…:

* ಮೈಸೂರನ್ನು ಎರಡನೇ ಐಟಿ ನಗರ ಎಂದು ಘೋಷಣೆ
* ಶ್ರೀ ಜಯದೇವ ಆಸ್ಪತ್ರೆ ಉನ್ನತೀಕರಣಕ್ಕೆ 180 ಕೋಟಿ ರೂ.
* ಮೈಸೂರಿನ ತಾಂಡವಪುರದಲ್ಲಿ ಸಿಲ್ಕ್‌ ಪಾರ್ಕ್‌ ಸ್ಥಾಪನೆ
* ನರಸಿಂಹರಾಜ ಕ್ಷೇತ್ರದಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ
* ಮೈಸೂರಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿನಿಲಯ ಸ್ಥಾಪನೆ.
* ಪಿರಿಯಾಪಟ್ಟಣ ಕಂಪಲಾಪುರದಲ್ಲಿ ಬಂಡೂರು ಕುರಿ ತಳಿ ಅಭಿವೃದ್ಧಿ.
* ಮೈಸೂರಿನ ಲಿಂಗಾಂಬುಧಿ ಕೆರೆಯಲ್ಲಿ ಸಸ್ಯತೋಟದ ಸಮಗ್ರ ಅಭಿವೃದ್ಧಿ.
* ಕರ್ನಾಟಕ ವಸ್ತು ಪ್ರದರ್ಶನದ ಮೂಲಭೂತ ಸೌಕರ್ಯಕ್ಕೆ 10 ಕೋಟಿ ರೂ.
* ಮೈಸೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಾಮಗಾರಿ ಅನುಷ್ಠಾನ.
* ಮೈಸೂರು ಫಿಲಂ ಸಿಟಿ : ಪಿಪಿಪಿ ಮಾದರಿಯಲ್ಲಿ ನಿರ್ಮಾಣಕ್ಕೆ ನಿರ್ಧಾರ.
* ಮೈಸೂರು ವಿಮಾನ ನಿಲ್ದಾಣದ ಸನಿಹ ಏರೋಸ್ಪೇಸ್‌ ಪಾರ್ಕ್‌ ಅಭಿವೃದ್ಧಿ.
* ಮೈಸೂರಿನ ಕಾವಾ ಅಭಿವೃದ್ಧಿಗೆ ಎರಡು ಕೋಟಿ ರೂ. ಅನುದಾನ.
* ಮೈಸೂರಿನ ದಟ್ಟಗಳ್ಳಿಯಲ್ಲಿ ಆಧುನಿಕ ಸೈಕ್ಲಿಂಗ್‌ ವೆಲೋಡ್ರೋಮ್ ಸ್ಥಾಪನೆ.
* ಮೈಸೂರು ಮೃಗಾಲಯದಲ್ಲಿ ಪ್ರಕೃತಿ ನಿರೂಪಣಾ ಕೇಂದ್ರ ಸ್ಥಾಪನೆ.
* ಮೈಸೂರು ನಗರದಲ್ಲಿ ಇ-ಕೋರ್ಟ್‌ ಆರಂಭಕ್ಕೆ ಅನುದಾನ ಮೀಸಲು.

 

Call Now Button