ಮೈಸೂರು: ಹೈಕಮಾಂಡ್ ಹೇಳಿದರೆ ಅಧಿಕಾರವನ್ನು ಬಿಟ್ಟು ಹೋಗುತ್ತೇನೆ. ಹೇಳದಿದ್ದರೆ ಅಧಿಕಾರದಲ್ಲಿ ಮುಂದುವರೆಯುತ್ತೇನೆ. ಹೈಕ ಮಾಂಡ್ ಅವಕಾಶ ನೀಡಿದರೆ ಮುಂದಿನ ಎರಡು ವರ್ಷಗಳೂ ನಾನೇ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬಜೆಟ್ ಮಂಡನೆಯ ಬಳಿಕೆ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲಿಯವರೆಗೂ ಪಕ್ಷದ ವರಿಷ್ಠರು ನನಗೆ ಅವಕಾಶ ಕೊಡುತ್ತಾರೆ ಅಲ್ಲಿಯವರೆಗೂ ಅಧಿಕಾರದಲ್ಲಿ ಇರುತ್ತೇನೆ ಎಂದು ಹೇಳಿದರು. ಆಮೂಲಕ ಮತ್ತೊಮ್ಮೆ ಅಧಿಕಾರ ಹಂಚಿಕೆ ಕುರಿತು ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಕಡೆ ಕೈತೋರಿಸಿದ್ದಾರೆ.
ನಾನು ೧೭ನೇ ಬಜೆಟ್ ಮಂಡಿಸಿದ್ದೇನೆ ನಿಜ. ದಾಖಲೆ ಮಾಡುವುದು ಸಾಧನೆಯಲ್ಲ. ಅವಕಾಶ ಕೊಟ್ಟಿದ್ದರಿಂದ ಈ ಕೆಲಸ ಆಗಿದೆ. ಮುಂದೆಯೂ ವರಿಷ್ಠರು ಅವಕಾಶ ಮಾಡಿಕೊಟ್ಟರೆ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ ಎಂದರು.
ಅವಕಾಶ ದೊರೆತರೆ ಮುಂದೆಯೂ ಬಜೆಟ್ ಮಂಡಿಸುತ್ತೇನೆ
ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಮುಂದಿನ ಎರಡು ಬಜೆಟ್ ಗಳನ್ನೂ ನಾನೇ ಮಂಡಿಸುತ್ತೇನೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ದಾಖಲೆ ಮುರಿಯುವುದು ಸಾಧನೆಯಲ್ಲ. ಆದರೆ ಜನರು ಆಶೀರ್ವದಿಸಿ, ಅವಕಾಶ ನೀಡಿದರೆ, ಖಂಡಿತ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದರು.


