ಬೆಂಗಳೂರು: ಏಪ್ರಿಲ್,ಮೇ ತಿಂಗಳಲ್ಲಿ ಮೌಂಟ್ ಎವರೆಸ್ಟ್ ನ್ನು ಹತ್ತಲು ಪ್ರಯತ್ನಿಸಲಿರುವ ಕರ್ನಾಟಕ ಪರ್ವತಾರೋಹಣ ಸಂಘದ ಸದಸ್ಯರಾದ ಸಂತೋಷ್ ದೇವರಾಜಪ್ಪ ಮತ್ತು ಮಹಿಳಾ ಪರ್ವತಾರೋಹಿ ಪ್ರೊ. ಡಾ. ಚಿನ್ಮಯಿ ತ್ರಿಶೂಲಮೂರ್ತಿ ಅವರು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.

ಮುಖ್ಯಮಂತ್ರಿಗಳು ತಂಡಕ್ಕೆ ಶುಭ ಸೂಚಕ ವಾಗಿ ರಾಷ್ಟ್ರೀಯ ತ್ರಿವರ್ಣ ಧ್ವಜ, ಕರ್ನಾಟಕ ರಾಜ್ಯ ಲಾಂಛನ ಮತ್ತು ಕನ್ನಡ ಧ್ವಜ ಹಸ್ತಾಂತರಿಸಿ ಶುಭಕೋರಿದರು.
ಏಪ್ರಿಲ್–ಮೇನಲ್ಲಿ ಎವರೆಸ್ಟ್ ಅಭಿಯಾನ : ಕರ್ನಾಟಕ ಪರ್ವತಾರೋಹಣ ಸಂಘದ ಈ ತಂಡವು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎವರೆಸ್ಟ್ ಶಿಖರಾರೋಹಣಕ್ಕೆ ಸಜ್ಜಾಗುತ್ತಿದೆ. ವಿಶ್ವದ ಅತಿ ಎತ್ತರದ ಪರ್ವತವಾದ ಎವರೆಸ್ಟ್ ಏರುವುದು ಪರ್ವತಾರೋಹಕರಿಗೆ ದೊಡ್ಡ ಸವಾಲಾಗಿದ್ದು, ಉತ್ತಮ ತರಬೇತಿ, ದೈಹಿಕ ಸಾಮರ್ಥ್ಯ ಮತ್ತು ಮನೋಬಲ ಅಗತ್ಯವಿರುತ್ತದೆ. ತಂಡದ ಸದಸ್ಯರಾದ ಸಂತೋಷ್ ದೇವರಾಜಪ್ಪ ಮತ್ತು ಪ್ರೊ. ಡಾ. ಚಿನ್ಮಯಿ ತ್ರಿಶೂಲಮೂರ್ತಿ ಹಲವು ವರ್ಷಗಳಿಂದ ಪರ್ವತಾರೋಹಣದಲ್ಲಿ ತೊಡಗಿಸಿಕೊಂಡಿದ್ದು, ಈ ಬಾರಿ ಎವರೆಸ್ಟ್ ಶಿಖರಾರೋಹಣದ ಮೂಲಕ ಕರ್ನಾಟಕಕ್ಕೆ ಕೀರ್ತಿ ತರಲು ಸಜ್ಜಾಗಿದ್ದಾರೆ.
ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಕರ್ನಾಟಕ ಪರ್ವತಾರೋಹಣ ಸಂಘದ ಕಾರ್ಯದರ್ಶಿ ನಾಗೇಂದ್ರ ಕುಮಾರ್.ಆರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳು ತಂಡದ ಸದಸ್ಯರಿಗೆ ಶುಭ ಹಾರೈಸಿ, ಕರ್ನಾಟಕದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯುವಂತೆ ತಮ್ಮ ಸಾಹಸಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿ ಎಂದು ಆಶಿಸಿದರು.


