ಮೈಸೂರು: ಮೈಸೂರು ನಗರದ ಹೃದಯಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿರುವುದನ್ನು ಖಂಡಿಸಿ ಇಂದು ಪರಿಸರ ಪ್ರೇಮಿಗಳು ಹಾಗೂ ಹಿರಿಯ ನಾಗರೀಕರು ಪ್ರತಿಭಟನೆ ನಡೆಸಿದರು.
ಕುಕ್ಕರಹಳ್ಳಿ ಕೆರೆಯ ಮುಖ್ಯ ದ್ವಾರದ ಮುಂಭಾಗ ಸಮಾವೇಶಗೊಂಡ ಮೈಸೂರಿನ ಪ್ರಜ್ಞಾವಂತ ನಾಗರಿಕರು, ಐತಿಹಾಸಿಕ ಹಿನ್ನಲ್ಲೆಯುಳ್ಳ ಹಾಗೂ ಮೈಸೂರು ನಗರದ ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಎನಿಸಿರುವ ಕುಕ್ಕರಹಳ್ಳಿ ಕೆರೆಯ ಅಂಗಳವನ್ನು ಮುಡಾ ವಶಪಡಿಸಿಕೊಂಡು ಬಹುಮಾಡಿ ಕಟ್ಟಡಗಳನ್ನು ನಿರ್ಮಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಈ ಹಿಂದೆ ಮೈಸೂರು ರಾಜರು ಮೈಸೂರಿನ ಜನರಿಗಾಗಿ ಈ ಪ್ರದೇಶವನ್ನು 400 ಎಕರೆಗಿಂತಲೂ ಅಧಿಕವಾಗಿ ನಿರ್ಮಿಸಿದ್ದರು. ಆದರರೆ, ಪ್ರಸ್ತುತ ಈ ಕರೆ ಸುತ್ತಮುತ್ತಲಿನ ಪ್ರದೇಶಗಳು ಒತ್ತುವರಿಯಾಗಿ ಈಗ ಕೆರೆಯು 100 ಎಕರೆ ಹಾಗೂ ಕೆರೆ ಆವರಣವು 110 ಎಕರೆ ಮಾತ್ರ ಉಳಿದಿದೆ. ಈ ಪ್ರದೇಶವನ್ನು ಸಂರಕ್ಷಿಸಿ ಪರಿಸರ ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ನಾಗರಿಕರು ಪ್ರತಿಪಾದಿಸಿದರು.
ಆದರೆ, ಈ ಪ್ರದೇಶದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 2021, ಫೆಬ್ರವರಿ 3ರಲ್ಲಿ ಭೂದೇವಿ ಫಾರಂನ ಮೂಲಕ ನಿವೇಶನ ಸಂಖ್ಯೆ 1/4ಎ, 1/4ಬಿ, ಎ/4ಸಿ, 1/4ಡಿ, 1/5ಎ, 1/5ಎ, ಎ/5ಬಿ, 1/5ಸಿ, 1/5ಡಿರ ಉದ್ಯಾನ ಮತ್ತು ಬಯಲು ಪ್ರದೇಶದಿಂದ 2 ಎಕರೆ 20 ಗುಂಟೆ ಪ್ರದೇಶವನ್ನು ವಾಣಿಜ್ಯ ವಲಯಕ್ಕೆ ಬದಲಾಯಿಸಿಕೊಂಡಿದ್ದಾರೆ. ಆಮೂಲಕ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಆದ್ದರಿಂದ ಕೆರೆಯ ಪ್ರದೇಶದಲ್ಲಿ ಯಾವುದೇ ಬಹುಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡಿ ಕೆರೆ ಪರಿಸರಕ್ಕೆ ಹಾನಿ ಉಂಟು ಮಾಡಬಾರದು ಎಂದು ಒತ್ತಾಯಿಸಿ ಈ ಪ್ರತಿಭಟನೆ ನಡೆಸುತ್ತಿರುವುದಾಗಿ ಪರಿಸರ ಸಂರಕ್ಷಿಸಿ ಹೋರಾಟ ಸಮಿತಿ ತಿಳಿಸಿದೆ. ಪ್ರತಿಭಟನೆಯಲ್ಲಿ ಪ್ರೊ. ಜಯರಾಮಯ್ಯ, ಸೋಸಲೆ ಸಿದ್ದರಾಜು, ಅರವಿಂದ ಶರ್ಮ ಮೊದಲಾದವರು ಭಾಗವಹಿಸಿದ್ದರು.


