ಮೈಸೂರು: ಸಂವಿಧಾನ ಶಿಲ್ಪಿಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನುಮದಿನದಂದು ವಿ ಕೇರ್ ಸಂಸ್ಥೆಯು ಮಕ್ಕಳಿಗಾಗಿ ” ಒಳಗೊಳ್ಳುವಿಕೆಯ ಜೀವನ ” ದ ಆಶಯವನ್ನು ಹೊತ್ತ ಉಚಿತ ಬೇಸಿಗೆ ಶಿಬಿರವನ್ನು ಮಕ್ಕಳಿಗೆ ಅರ್ಪಿಸು ವುದರ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿತು.
ಸಮತಾ ವೇದಿಕೆಯ ಹಿರಿಯ ಸದಸ್ಯರಾದ ಪ್ರೊ. ಲತಾ ಬಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಆಂಗ್ಲ ಪ್ರಾಧ್ಯಾಪಕ ಪ್ರೊ. ಕೆ ಪಿ ವಾಸುದೇವನ್ ಮತ್ತಿತರರು ಶಿಬಿರದ ಮಕ್ಕಳೊಡನೆ ಸೇರಿ ಶಿಬಿರದ ಲಾಂಛನವನ್ನು ಅನಾವರಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯಲ್ಲಿ ನೀಡಿದರು.

ಮಕ್ಕಳಲ್ಲಿ ಮೌಲ್ಯ, ಮಾನವೀಯತೆ, ಕೌಶಲ, ಕಲೆ, ಪ್ರಬುದ್ಧತೆಯನ್ನು ಮೂಡಿಸುವ ಸಲುವಾಗಿ ಸಕಲ ಜೀವರಾಶಿಗಳಿಗೂ ಮನುಷ್ಯನಷ್ಟೇ ಜೀವಿಸುವ ಹಕ್ಕಿದೆ ಎಂಬ ಆಶಯದಲ್ಲಿ ವಿ-ಕೇರ್ ಸಂಸ್ಥೆ ವತಿಯಿಂದ ಮಕ್ಕಳಿಗಾಗಿ ಎರಡು ವಾರಗಳ ಕಾಲ ಉಚಿತ ‘ಒಳಗೊ ಳ್ಳುವಿಕೆಯ ಜೀವನ ಬೇಸಿಗೆ ಶಿಬಿರ’ವನ್ನು ಹಮ್ಮಿಕೊಂಡಿದೆ.
ಮಹಿಳಾ ಹೋರಾಟಗಾರರೂ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಲತಾ ಬಿದ್ದಪ್ಪರವರು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ” ಶಿಬಿರಗಳು ಮಕ್ಕಳ ಬಲವರ್ಧನೆಯ ಸಮಾಜಮುಖಿ ಕಾರ್ಯಕ್ರಮಗಳಾಗಿವೆ. ಈ ಪ್ರಯತ್ನಕ್ಕೆ ಸಮಾಜದ ಒಳ್ಳೆಯ ಮನಸ್ಸುಗಳು ಬೆನ್ನು ಕಟ್ಟಿ ನಿಲ್ಲಬೇಕಿದೆ. ಮಕ್ಕಳಿಗೆ ಹಿರಿಯ ರಿಂದ ಮೌಲ್ಯಾಧಾರಿತವಾದ ಶಿಬಿರಗಳು, ಪತ್ಯೇತರ ಚಟುವಟಿಕೆಗಳನ್ನು ಏರ್ಪಡಿಸು ವುದರಿಂದ ಮಕ್ಕಳು ಆತ್ಮವಿಶ್ವಾಸಭರಿತರಾಗಿ, ಸಮಾಜದ ಬಗ್ಗೆ ನಂಬಿಕೆ ಹೊಂದುತ್ತಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಈ ಶಿಬಿರದಲ್ಲಿ ಹೆಚ್ಚು ಪ್ರಾಧಾನ್ಯತೆ ಪಡೆದಿರುವುದು ನನಗೆ ಅಪಾರ ಭರವಸೆ ಮೂಡಿಸಿದೆ” ಎಂದರು.

ನಿವೃತ್ತ ಆಂಗ್ಲ ಪ್ರಾಧ್ಯಾಪಕರಾದ ಪ್ರೊ.ಕೆ.ಪಿ. ವಾಸುದೇವನ್ ರವರು ಮಾತನಾಡುತ್ತಾ ” ನಮ್ಮ ಪರಿಸರದಲ್ಲಿ ಮಕ್ಕಳಿಗಾಗಿ ಇಂತಹ ಮೌಲ್ಯಾಧಾರಿತ ಸಾಂಸ್ಕೃತಿಕ ಶಿಬಿರಗಳು ತಿಳುವಳಿಕೆ ಇರುವ ಮನಸುಗಳಿಂದ ನಡೆಯುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಕಾರ್ಯ! ಇವುಗಳ ಅಗತ್ಯ ನಮ್ಮ ದೇಶಕ್ಕೆ ಇಂದು ಹೆಚ್ಚುತ್ತಿರುವುದನ್ನು ನಾವು ಮನಗಾಣಬೇಕಿದೆ. ಸಾರ್ವಜನಿಕರು ತಮ್ಮ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿ ತಮ್ಮೆಲ್ಲಾ ಸಂಪನ್ಮೂಲಗಳನ್ನು ಧಾರೆ ಎರೆಯುತ್ತಾರೆ. ಆದರೆ ನಮ್ಮ ಭವಿಷ್ಯವಾದ ಮಕ್ಕಳ ಶಿಬಿರಗಳಿಗೆ ಹೆಚ್ಚು ಸ್ಪಂದಿಸದಿರುವುದು ನೋವಿನ ಸಂಗತಿ. ಪ್ರಾಮುಖ್ಯತೆ ನೀಡಿದಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಯನ್ನು ನಿರೀಕ್ಷಿಸಬಹುದಾಗಿದೆ. ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಶಿಬಿರಗಳಿಗೆ ಉತ್ತೇಜನ ನೀಡಬೇಕು. ಇಂತಹ ಶಿಬಿರಗಳನ್ನು ಉಚಿತವಾಗಿ ನಡೆಸು ತ್ತಿರುವ ವಿ-ಕೇರ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರ ಹೊರವಲಯದ ಹೂಟಗಳ್ಳಿಯ ಕೆಎಚ್ ಬಿ ಕಾಲೋನಿಯಲ್ಲಿರುವ ವಿ-ಕೇರ್ ಸಂಸ್ಥೆ ಮೈಸೂರಿನಲ್ಲಿ ಏರ್ಪಡಿಸಿರುವ ‘ಒಳಗೊಳ್ಳುವಿಕೆಯ ಜೀವನ ಬೇಸಿಗೆ ಶಿಬಿರ’ವನ್ನು ಜೀವನ ಕಲಿಕೆಯ ಆಶಯ ದಲ್ಲಿ ನಡೆಸಲಾಗುತ್ತಿದ್ದು, 50 ಮಕ್ಕಳಿಗೆ ಉಚಿ ತವಾಗಿ ಶಿಬಿರದಲ್ಲಿ ತರಬೇತಿ ನೀಡಲಾಗು ತ್ತಿದೆ. ವಿ-ಕೇರ್ ಸಂಸ್ಥೆಯ ಸಂಸ್ಥಾಪಕಿ ಡಾ.ಕುಮುದಿನಿ ಅಚ್ಚಿರವರು ಮಾತನಾಡುತ್ತಾ ” ಮಕ್ಕಳ ಶಿಬಿರಗಳನ್ನು ಸಂಸ್ಥೆಯು ಉಚಿತವಾಗಿ ಗಾಜು ಸ್ವತಂತ್ರವಾಗಿ ಕಳೆದ 13 ವರ್ಷಗಳಿಂದ ನಡೆಸಿ ಕೊಂಡು ಬರುತ್ತಿದೆ. ಶಿಬಿರದಲ್ಲಿ ಮಕ್ಕಳಿಗಾಗಿ ರಂಗ ತರಬೇತಿ, ನೃತ್ಯ ಕಲಿಕೆ, ಹಾಡುಗಾರಿಕೆ, ರಂಗಗೀತೆಗಳನ್ನು ಹೇಳಿಕೊಡಲಾಗುತ್ತದೆ. ಅಲ್ಲದೇ ಸಮಾನತೆಯ ಸೂಚಕವಾಗಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ರಂಗೋಲಿ ಕಲೆಯನ್ನು ಕಲಿಸುತ್ತಿರುವುದು ವಿಶೇಷ, ವೈದ್ಯಕೀಯ ಪ್ರಥಮ ಚಿಕಿತ್ಸೆ ತರ ಬೇತಿ ನೀಡುತ್ತಿದ್ದು, ಮಕ್ಕಳಲ್ಲಿ ಮೌಲ್ಯಗಳು ಮತ್ತು ಪ್ರಜ್ಞಾವಂತಿಕೆ ಮೂಡಿಸುವ ನಿಟ್ಟಿನಲ್ಲಿ ಪ್ರತಿ ದಿನ ಅಂತಾರಾಷ್ಟ್ರೀಯ ಮಟ್ಟದ ಮೌಲ್ಯಾಧಾರಿತ ಚಲನಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಶಿಬಿರದ ಮಕ್ಕಳಿಗಾಗಿ ಒಂದು ದಿನದ ಪರಿಸರ ಸಂಬಂಧಿತ ಪ್ರವಾಸ ಏರ್ಪಡಿಸಿದ್ದು, ಪ್ರಕೃತಿ ಒಳಗೊಂಡ ಬದುಕಿನ ಆಶಯವನ್ನು ಮೂಡಿಸಲಾಗುತ್ತದೆ. ಮಕ್ಕಳಿಗಾಗಿ ಉಚಿತ ಊಟದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಈ ಶಿಬಿರದ ಆಶಯಗಳನ್ನು ವಾರಾಂತ್ಯದ ಮಕ್ಕಳ ಕೂಟದ ಚಟುವಟಿಕೆಗಳ ಮೂಲಕ ಮುನ್ನಡೆಸಲಾಗುತ್ತದೆ. ಈ ಪ್ರಯತ್ನಕ್ಕೆ ಪೋಷಕರು ಕೈಜೋಡಿಸಬೇಕು” ಎಂದು ಮನವಿ ಮಾಡಿದರು.
ಪ್ರೊ. ಶಶಿಕಲಾ, ಹಿರಿಯ ಪತ್ರಕರ್ತ ಅಯ್ಯಪ್ಪ ಹೂಗಾರ, ಒಡನಾಡಿ ಸ್ಟ್ಯಾನ್ಲಿ , ಬರಹಗಾರರಾದ ಶ್ರೀಪಾದ ಹೆಗಡೆ, ರಂಗಕರ್ಮಿ ಜಯಶ್ರೀ ಹೆಗಡೆ, ಸೇರಿದಂತೆ ಪೋಷಕರು, ಮಕ್ಕಳು ಹಾಜರಿದ್ದರು.
ಶಿಬಿರದ ಸಮಾರೋಪವು ಏಪ್ರಿಲ್ ೨೬ರ ಭಾನುವಾರ ಸಂಜೆ 6 ಗಂಟೆಗೆ ಮೈಸೂರಿನ ವೀಣೆ ಶೇಷಣ್ಣ ( ಗಾನ ಭಾರತಿ) ಸಭಾಂಗಣದಲ್ಲಿ ನಡೆಯಲಿದ್ದು ಮಕ್ಕಳು ತಾವು ಶಿಬಿರದಲ್ಲಿ ಕಲಿತ ನಾಟಕ, ನೃತ್ಯ , ಸಂಗೀತ ಮೊದಲಾದ ಪ್ರತಿಭಾ ಕೌಶಲ್ಯಗಳನ್ನು ಪ್ರಸ್ತುತಗೊಳಿಸಲಿದ್ದಾರೆ.


