Online News in ಕನ್ನಡ

ಪಿಎಂ-ಸಿಎಂ ಗುಸುಗುಸು: ಸಂಭಾಷಣೆಯ ರಹಸ್ಯ ಬಿಚ್ಚಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಪಿಸುಗುಟ್ಟುತ್ತಿರುವ ಚಿತ್ರವೊಂದು ಭಾರೀ ವೈರಲ್‌ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ರಾಜಕೀಯ ಬದ್ಧ ವೈರತ್ಯವನ್ನು ಹೊಂದಿರುವ ಪಿಎಂ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವೆ ಅಷ್ಟೊಂದು ಆತ್ಮೀಯ ಸಂಭಾಷಣೆ ನಡೆದದ್ದಾದರೂ ಏನು ಎಂಬ ಕುತೂಹಲವೂ ಮೂಡಿತ್ತು.


ಇದೀಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಇಂದು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸುತ್ತಾ, ʻಅವರು ನನಗೆ ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ʼ ಎಂದು ಕೇಳಿದರು. ನಾನು ಮಹಿಳಾ ಮೀಸಲಾತಿ ಪರ ಇದ್ದೇವೆ ʼ ಎಂದು ಹೇಳಿದೆ ಎಂದಿದ್ದಾರೆ.
ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಬಿಜೆಪಿಗೆ ಇಚ್ಛಾಶಕ್ತಿ ಇಲ್ಲ. ಈ ವಿಷಯದಲ್ಲಿ ಪ್ರಧಾನಿ ಮೋದಿ ಡಬಲ್‌ ಸ್ಟ್ಯಾಂಡ್‌ ಹೊಂದಿದ್ದಾರೆ. ಅವರು ಅಧಿಕಾರಕ್ಕೆ ಬಂದು 12 ವರ್ಷವಾಯಿತು. ಅವರು ಮನಸ್ಸು ಮಾಡಿದ್ದರೆ 2023ರಲ್ಲಿಯೇ ಮಹಿಳಾ ಮೀಸಲಾತಿ ಜಾರಿಗೆ ತರಬಹುದಿತ್ತು. ಈಗ ಜಾರಿ ಮಾಡಲು ಅವಕಾಶವಿಲ್ಲ ಎಂದು ಮನಗಂಡೇ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
1973-73ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದು ಕಾಂಗ್ರೆಸ್.‌ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲಾತಿ ಜಾರಿಗೆ ತಂದವರು ಕಾಂಗ್ರೆಸ್ಸಿನವರು. ಕಾಂಗ್ರೆಸ್‌ ಪಕ್ಷ ಸದಾ ಮಹಿಳಾ ಮೀಸಲಾತಿ ಪರ ಇದೆ. ಆದರೆ, ಮಹಿಳಾ ಮೀಸಲಾತಿ ಜೊತೆಗೆ ಕ್ಷೇತ್ರ ಪುನರ್‌ ವಿಂಗಡಣೆ ಮಸೂದೆಯನ್ನು ಜೋಡಿಸಿದ್ದರಿಂದ ನಾವು ವಿರೋಧ ವ್ಯಕ್ತಪಡಿಸಿದ್ದೇವೆ ಎಂದರು.
ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ ವಿಂಗಡಣೆಯನ್ನು ಪ್ರತ್ಯೇಕಗೊಳಿಸಬೇಕು. ಜನಗಣತಿಯ ನಂತರ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿದರೆ ಉತ್ತಮ. ಇಲ್ಲವಾದರೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡಿದಂತ್ತಾಗುವುದು. ಇದನ್ನು ಕೇಂದ್ರಕ್ಕೆ ನಾನು ಸ್ಪಷ್ಟವಾಗಿ ತಿಳಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ತಮಿಳುನಾಡಿನಲ್ಲಿ ಡಿಎಂಕೆ, ಕೇರಳಾದಲ್ಲಿ ಕಾಂಗ್ರೆಸ್:‌
ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳಾದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ತಮಿಳುನಾಡಿನ ಚುನಾವಣೆಗೆ ನಾನು ಹೋಗಿಲ್ಲ.ಆದರೆ, ನನಗೆ ಇರುವ ಮಾಹಿತಿ ಪ್ರಕಾರ ಅಲ್ಲಿ ಡಿಎಂಕೆ ಮತ್ತು ಮಿತ್ರ ಪಕ್ಷಗಳು ಗೆಲುವು ಸಾಧಿಸುತ್ತವೆ. ಕೇರಳಾದಲ್ಲಿ ಕಾಂಗ್ರೆಸ್‌ ಮೈತ್ರಿ ಜಯಗಳಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆದರೆ, ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಮತ್ತು ಜಮೀರ್‌ ಅಹಮದ್‌ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೆ ಸಿಎಂ ನಿರ್ಗಮಿಸಿದರು. ವಿಧಾನ ಪರಿಷತ್‌ ಸದಸ್ಯ ಡಾ. ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ. ಪುಷ್ಪಾ ಅಮರನಾಥ್‌, ಡಿಸಿಸಿ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್‌ ಹಾಜರಿದ್ದರು.

Call Now Button