ಬೆಂಗಳೂರು: ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆ. ಬದಲಾವಣೆ ಬಗ್ಗೆ ಪ್ರಸ್ತಾಪವಾಗಿಲ್ಲ. ಹಾಗೊಂದು ವೇಳೆ ಆಗಬೇಕಾದರೆ ಇನ್ನಷ್ಟು ಸಮಯ ಬೇಕಾಗಿದೆ. ಸದ್ಯಕ್ಕೆ ತಲೆದೋರಿರುವ ಗೊಂದಲವನ್ನು ಶೀಘ್ರ ಬಗೆಹರಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟ ಪಡಿಸಿದ್ದಾರೆ. ಆಮೂಲಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಒಂದೂ ವರ್ಷದಿಂದ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿದರೆ ನಮ್ಮದೇನೂ ಅಭ್ಯಂತರವಿಲ್ಲ. ಖರ್ಗೆ ಅವರ ಅನೇಕ ಸಮಕಾಲೀನ ನಾಯಕರು ಮುಖ್ಯಮಂತ್ರಿಯಾಗಿದ್ದಾರೆ. ಗುಂಡೂರಾವ್, ಧರ್ಮಸಿಂಗ್, ಎಸ್.ಬಂಗಾರಪ್ಪ, ಎಂ.ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗಿಂತ್ತಲೂ ಪ್ರಬಲವಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರೇಕೆ ಮುಖ್ಯಮಂತ್ರಿ ಆಗಬಾರದು
– ಡಾ.ಜಿ. ಪರಮೇಶ್ವರ್, ಗೃಹ ಸಚಿವ.
ರಾಜ್ಯದಲ್ಲಿ ಸಿಎಂ ಇದ್ದಾರೆ. ಬದಲಾವಣೆಯ ವಿಷಯ ಇಲ್ಲಿ ಬರೋದಿಲ್ಲ. ಹಾಗೊಂದು ವೇಳೆ ಬದಲಾವಣೆ ಮಾಡಬೇಕೆಂದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನಾನು ತೀರ್ಮಾನಿಸಬೇಕು. ಹಾಗೆ ತೀರ್ಮಾನಿಸಲು ಇನ್ನೂ ಕೆಲ ಸಮಯ ಬೇಕಿದೆ ಎಂದು ಹೇಳಿವ ಮೂಲಕ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ನಾಯಕತ್ವ ಬದಲಾವಣೆ ವಿಷಯದಲ್ಲಿ ಗೊಂದಲಗಳು ಇದ್ದರೆ ಅದನ್ನು ಶೀಘ್ರ ಬಗೆ ಹರಿಸುತ್ತೇವೆ ಎಂದಿದ್ದಾರೆ.
ಆ ಮೂಲಕ ಮೇ 15ಕ್ಕೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಡಿಕೆ ಬ್ರದರ್ಸ್ ಬಣದ ಶಾಸಕರಿಗೆ ತೀವ್ರ ಮುಖಭಂಗವಾಗಿದೆ. ಹಾಗೂ ಕಾಂಗ್ರೆಸ್‌ನಲ್ಲಿ ಬಹುತೇಕ ಶಾಸಕರು ಸಿದ್ದರಾಮಯ್ಯ ಪರ ನಿಂತಿರುವುದರಿಂದ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮುಂದಾಗಿಲ್ಲ. ಇದು ನಾಯಕತ್ವ ಬದಲಾವಣೆಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಭಾರೀ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.


